ಪಾಂಡವಪುರ: ಪುರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅಳವಡಿಕೆಗಾಗಿ ಖರೀದಿಸಿರುವ ಎಲ್‌ಇಡಿ ಬಲ್ಬ್‌ಗಳ ಬೆಲೆ ಮಾರುಕಟ್ಟೆ ದರಕ್ಕಿಂತ ದುಬಾರಿಯಾಗಿದೆ. 1ಎಚ್‌ಪಿ ಮೋಟಾರ್ ದುರಸ್ತಿಗೆ 1 ಲಕ್ಷ ರೂ. ವೆಚ್ಚ ಮಾಡಲಾಗಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿದೆ ಎಂದು ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು ಅಧ್ಯಕ್ಷತೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಪಸ್ಥಿತಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ಬಲ್ಬ್ ಖರೀದಿ, ಮೋಟಾರ್ ರಿಪೇರಿ, ಪುರಸಭೆ ಕಸ ಸಾಗಣೆ ವಾಹನಗಳ ದುರಸ್ತಿ, ಕಸ ಸಂಸ್ಕರಣಾ ಘಟಕದಲ್ಲಿರುವ ಗೊಬ್ಬರ ಯಂತ್ರೋಪಕರಣಗಳ ನಿರ್ವಹಣೆ, ವಿಶ್ವೇಶ್ವರಯ್ಯ ನಾಲೆಗೆ ತಡೆಗೋಡೆ ನಿರ್ಮಾಣ, ನಾಲೆಗೆ ಒಳಚರಂಡಿ ನೀರು ಸೇರದಂತೆ ಕ್ರಮ ವಹಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರ ಆಡಳಿತದ ಕಾರ್ಯವೈಖರಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯ ಪಾರ್ಥಸಾರಥಿ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು 90 ವ್ಯಾಟ್ಸ್‌ನ 108 ಎಲ್‌ಇಡಿ ಬಲ್ಬ್‌ಗಳನ್ನು ಖರೀದಿಸಲಾಗಿದ್ದು ಇದಕ್ಕೆ ಪುರಸಭೆ ಬೊಕ್ಕಸದಿಂದ 6 ಲಕ್ಷ ರೂ. ಪಾವತಿಸಲಾಗುತ್ತಿದೆ. ವಾಸ್ತವವಾಗಿ ಈ ಬಲ್ಬ್‌ಗಳ ಮಾರುಕಟ್ಟೆ ದರ ಕೇವಲ 2 ಸಾವಿರ ರೂ. ಇದ್ದು, ಒಂದು ಬಲ್ಬ್‌ಗೆ 5 ಸಾವಿರಕ್ಕೂ ಹೆಚ್ಚು ಹಣ ನೀಡುತ್ತಿರುವುದನ್ನು ಗಮನಿಸಿದರೆ ಇದರಲ್ಲಿ ಲಕ್ಷಾಂತರ ಭ್ರಷ್ಟಾಚಾರ ನಡೆದಿರುವ ಅನುಮಾನವಿದೆ. ಖರೀದಿಸಿರುವ ಎಲ್ಲ ಬಲ್ಬ್‌ಗಳನ್ನು ಹಿಂದಿರುಗಿಸಬೇಕು. ಅದೇ ರೀತಿ 1 ಎಚ್‌ಪಿ ಮೋಟರ್ ರಿಪೇರಿಗೆ 1.8 ಲಕ್ಷ ರೂ. ನೀಡಲಾಗಿದೆ. ಪುರಸಭೆ ವಕೀಲರಿಗೆ 45 ಸಾವಿರ ರೂ.ಗಳನ್ನು ಯಾವ ಕಾರಣಕ್ಕಾಗಿ ಪಾವತಿಸಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳಿಗೆ ಕ್ರಮಸಂಖ್ಯೆ ನೀಡಿ ಹೆಚ್ಚಿನ ಬಾಡಿಗೆ ವಸೂಲಿಗೆ ಕ್ರಮವಹಿಸಬೇಕು. ಪಟ್ಟಣದ ಕಾಮನ ಚೌಕ ವೃತ್ತದಲ್ಲಿ ನಾಮಫಲಕ ಅಳವಡಿಸಬೇಕು. ಪೆನ್‌ಷನ್ ಲೈನ್ ರಸ್ತೆಯಿಂದ ಬೀರಶೆಟ್ಟಹಳ್ಳಿಗೆ ತೆರಳುವ ರಸ್ತೆಗೆ ಡಾ.ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಬೇಕು. ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬರು ಪುರಸಭೆಗೆ ಸೇರಿದ 6್ಡ190 ಅಡಿ ಜಾಗ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಿದ್ದು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಚಂದ್ರು ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ವಿಶ್ವೇಶ್ವರಯ್ಯ ನಾಲೆ ಏರಿಗೆ ತಡೆಗೋಡೆ ನಿರ್ಮಿಸದ ಕಾರಣ ಏರಿ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ನಿತ್ಯ ಶಾಲಾ ಮಕ್ಕಳ ವಾಹನ ಸೇರಿದಂತೆ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಕೊಂಚ ಎಡವಟ್ಟಾದರೂ ವಾಹನ ನಾಲೆಗೆ ಉರುಳಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಲ್ಲಿ ಮನವಿ ಮಾಡಿದರು.
ಅಧ್ಯಕ್ಷೆ ಜ್ಯೋತಿ ಲಕ್ಷ್ಮೀಬಾಬು ಮಾತನಾಡಿ, ಅಧಿಕಾರಿಗಳು ಯಾವುದೇ ವಿಚಾರದ ಬಗ್ಗೆ ಸಮರ್ಪಕ ಮಾಹಿತಿ ಕೊಡುವುದಿಲ್ಲ. ಒಂದೊಂದು ವಿಭಾಗದ ಅಧಿಕಾರಿಗಳ ಆಯಾ ಸೆಕ್ಷನ್ ನಿರ್ವಹಣೆ ಮಾಡಿ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಇದರಿಂದ ಹಲವು ತಪ್ಪುಗಳು ನಡೆಯುತ್ತಿವೆ. ಹೀಗಾಗಿ ನಾನು ಅಧ್ಯಕ್ಷೆಯಾದರೂ ಏನೂ ಮಾಡಲು ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಉಪಾಧ್ಯಕ್ಷ ಎಲ್.ಅಶೋಕ್, ಮಾಜಿ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯರಾದ ಆರ್.ಸೋಮಶೇಖರ್, ಯಶವಂತಕುಮಾರ್, ಶಿವಕುಮಾರ್, ಎಂ.ಗಿರೀಶ್, ಎ.ಕೃಷ್ಣ, ಸರಸ್ವತಿ, ಜಯಲಕ್ಷ್ಮಮ್ಮ, ಗೀತಾ ಆರ‌್ಮುಗಂ, ಮುರಳೀಧರ್, ಪಟೇಲ್ ರಮೇಶ್ ಇತರರು ಇದ್ದರು.
———-
ತುಕ್ಕು ಹಿಡಿಯುತ್ತಿರುವ ವಾಹನಗಳಿಗೆ ವಿಮೆ
ಶಾಂತಿನಗರ ಹೊರ ವಲಯದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಮತ್ತು ಗೊಬ್ಬರ ತಯಾರಿಕಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರ ನಿರ್ವಹಣೆ ಸಮರ್ಪಕವಾಗಿಲ್ಲ. ಲಭ್ಯವಿರುವ ಯಂತ್ರೋಪಕರಣಗಳನ್ನು ಬಳಸಿಕೊಂಡು ಗೊಬ್ಬರ ತಯಾರಿಸಿ ಅದರಿಂದ ಲಾಭ ತೋರಿಸುತ್ತಿಲ್ಲ. ಆದರೂ, ಎರಡು ತಿಂಗಳಿಗೆ 90 ಸಾವಿರ ರೂ. ವಿದ್ಯುತ್ ಬಿಲ್ ಬಂದಿದೆ. ಸಂಸ್ಕರಣಾ ಘಟಕ ಆವರಣದಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್‌ಗೆ ಈವರೆಗೂ ಒಂದು ಹನಿ ನೀರು ಬಿದ್ದಿಲ್ಲ. ಕಸದ ರಾಶಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸಲು ನೀರಿಲ್ಲ. ಆರೋಗ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು ಸಂಪೂರ್ಣ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿ ಮಾಡುವ ವಾಹನಗಳನ್ನು ದುರಸ್ತಿ ಮಾಡಿಸದೆ ತುಕ್ಕು ಹಿಡಿಯುತ್ತಿವೆ. ತುಕ್ಕು ಹಿಡಿಯುತ್ತಿರುವ ವಾಹನಗಳಿಗೆ 2 ಲಕ್ಷ ರೂ.ವಾಹನ ವಿಮೆ ಮಾಡಿಸಲಾಗಿದೆ ಎಂದು ಸದಸ್ಯ ಚಂದ್ರು ಕಿಡಿಕಾರಿದರು.
