More

    ಹೊಸತೋಟ ಗ್ರಾಮದಲ್ಲಿ ನೀರಿನ ಸಮಸ್ಯೆ

    ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜನರು ಪರದಾಡುವಂತಾಗಿದೆ.


    ಹೊಸತೋಟ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿದ್ದ ಪೈಪ್‌ಲೈನ್ ಕಾಮಗಾರಿ ಸರಿ ಇಲ್ಲದೆ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
    ಮಡಿಕೇರಿ ಹಾಸನ ರಾಜ್ಯ ಹೆದ್ದಾರಿ ಬದಿಯಲ್ಲಿ ಪೈಪ್‌ಗಳನ್ನು ಅಳವಡಿಸಿದ್ದು, ಪದೇ ಪದೆ ಒಡೆದು ನೀರು ಪೋಲಾಗುತ್ತಿದ್ದು, ನಿವಾಸಿಗಳಿಗೆ ಕುಡಿಯುವ ನೀರಿಗೂ ಪರದಾಡಬೇಕಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಇಂತಹ ಸಮಸ್ಯೆ ತಲೆದೋರಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.


    ರಾಜ್ಯ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ಗುಂಡಿಗಳನ್ನು ತೋಡಿ ಪೈಪ್ ದುರಸ್ತಿ ಮಾಡುವುದೇ ಕೆಲಸವಾಗಿದೆ. ಕೆಲವೊಮ್ಮೆ ಗುಂಡಿಗಳನ್ನು ಹಾಗೆಯೇ ಕೆಲವು ದಿನಗಳು ಬಿಡುವುದರಿಂದ ರಾತ್ರಿ ಸಂದರ್ಭ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ ಎಂದು ಸ್ಥಳಿಯ ನಿವಾಸಿ ಕೆ.ಪಿ.ದಿನೇಶ್ ತಿಳಿಸಿದರು.

    ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಸೆಳೆದರೂ, ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು, ನಮಗೆ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಮಾಡಬೇಕೆಂದು ಸ್ಥಳೀಯ ನಿವಾಸಿಗಳಾದ ಕೆ.ಬಿ.ಸುಖೇಶ್, ಪೈಸಲ್, ಗಣೇಶ್ ಹಮೀದ್, ಸೈದು ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

    ಹೊಸತೋಟ ಗ್ರಾಮ ಎತ್ತರದಲ್ಲಿದೆ. ಈಗ 12 ಎಚ್.ಪಿ. ಸಾಮರ್ಥ್ಯದ ಪಂಪ್‌ಸೆಟ್ ಅಳವಡಿಸಲಾಗಿದೆ. ನೀರಿನ ಹರಿವಿನ ಒತ್ತಡ ಜಾಸ್ತಿಯಾಗಿ ಪದೇ ಪದೆ ಪೈಪ್‌ಲೈನ್ ಒಡೆದು ಹೋಗುತ್ತಿದೆ. ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು.
    ಬಾಲಕೃಷ್ಣ ರೈ, ಪಿಡಿಒ, ಐಗೂರು ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts