More

    ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

    ರಟ್ಟಿಹಳ್ಳಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಮಂಗಳವಾರ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

    ಸಂಘಟನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜನವರಿ 16ರಂದು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಸ್ಥಳೀಯ ಹೆಸ್ಕಾಂ ಇಲಾಖೆಗೆ ಬೀಗ ಜಡಿದು ಅಧಿಕಾರಿಗಳ ಸಮ್ಮುಖದಲ್ಲಿ ಬಹೃತ್ ಪ್ರತಿಭಟನೆ ಮಾಡಲಾಗಿತ್ತು. ಅಕ್ರಮ ಸಕ್ರಮ ಯೋಜನೆಯಡಿ ಈಗಾಗಲೇ ರಟ್ಟಿಹಳ್ಳಿ ತಾಲೂಕಿನಲ್ಲಿ 698 ರೈತರು ತಮ್ಮ ಜಮೀನುಗಳ ಪಂಪ್​ಸೆಟ್​ಗಳಿಗೆ ವಿದ್ಯುತ್ ಪೂರೈಸುವಂತೆ ಹಣ ತುಂಬಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಇಲಾಖೆಯವರು ಕಾಮಗಾರಿ ಕೈಗೊಂಡಿಲ್ಲ. ರೈತರ ಹಿತರದೃಷ್ಟಿಯಿಂದ ಹಗಲಿನಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಲಾಗಿತ್ತು. ಆಗ ಅಧಿಕಾರಿಗಳು, ಹಗಲಿನಲ್ಲಿ 4-5 ತಾಸು ಮತ್ತು ರಾತ್ರಿ 3-4 ತಾಸು ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದ್ದರು. ಪ್ರಸ್ತುತ ಇಲಾಖೆಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಲೋ ವೋಲ್ಟೇಜ್​ನಿಂದ ಎಷ್ಟೋ ಪಂಪ್​ಸೆಟ್​ಗಳ ಮೋಟರ್​ಗಳು ಸುಟ್ಟು ಹೋಗುತ್ತಿವೆ. ನೀರಿಲ್ಲದೆ ಅಡಿಕೆ, ತೆಂಗು ಇತರೆ ತೋಟಗಾರಿಕೆ ಬೆಳೆಗಳು ಮತ್ತು ನೀರಾವರಿ ಆಶ್ರಿತ ಬೆಳೆಗಳು ಒಣಗುತ್ತಿವೆ. ಈ ಮೊದಲು 1 ಎಚ್.ಬಿ. ಯುನಿಟ್​ಗೆ ಇದ್ದ 950 ರೂ. ದರವನ್ನು 1950 ರೂ.ಗೆ ಏರಿಸಲಾಗಿದೆ. ಇದನ್ನು ಸಹ ಅಧಿಕಾರಿಗಳು ಚರ್ಚೆ ಮಾಡಿ ಕಡಿಮೆ ಮಾಡುವ ಭರವಸೆ ನೀಡಿದ್ದರು. ಇದು ಸಹ ಈಡೇರಲಿಲ್ಲ ಇದರಿಂದ ಬೇಸತ್ತು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ರಟ್ಟಿಹಳ್ಳಿ ಹೆಸ್ಕಾಂ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ಮರಿಗೌಡರ ಮಾತನಾಡಿ, ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಎರಡು ದಿನದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ತಾಂತ್ರಿಕ ಅಡಚಣೆಯಿಂದ ಕೆಲವು ದಿನ ಮಾತ್ರ ಹಗಲಿನಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಪ್ರಸ್ತುತ ಹಗಲಿನಲ್ಲಿ 4 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 1 ಎಚ್.ಬಿ. ಯುನಿಟ್​ಗೆ ಇರುವ ಪ್ರಸ್ತುತ ದರ ಕಡಿಮೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

    ಶಂಕ್ರುಗೌಡ ಶಿರಗಂಬಿ, ಶಿವನಗೌಡ ಪಾಟೀಲ, ಮಲ್ಲೇಶಪ್ಪ ಶಿರಗೇರಿ, ಮಹೇಂದ್ರಪ್ಪ ತಳವಾರ, ಫಯಾಜಸಾಬ್ ದೊಡ್ಡಮನಿ, ಮಂಜನಗೌಡ ಸಣ್ಣಗೌಡ್ರು, ಶಂಭು ಮುತ್ತಗಿ, ವೀರನಗೌಡ ಬೇವಿನಮರದ, ಹನುಮಂತಗೌಡ ಪಾಟೀಲ, ತಿರಕಪ್ಪ ದೊಡ್ಡಬಸಪ್ಪಳವರ, ಜಗದೀಶ ಶಿರಗಂಬಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts