More

    ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಗುತ್ತಿಗೆದಾರನಿಗೆ ಮುಖ್ಯ ಯೋಜನಾ ಅಧಿಕಾರಿ ಗುರುಪ್ರಸಾದ್ ಸೂಚನೆ

    ತ್ಯಾಮಗೊಂಡ್ಲು: ಬೇಗೂರು-ನಿಡವಂದ ರಸ್ತೆಯನ್ನು ಜಿಲ್ಲಾ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾಮಗಾರಿಯಿಂದ ಈ ಭಾಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರಿಗೆ ಎದುರಾಗಿರುವ ಸಮಸ್ಯೆ ಬಗ್ಗೆ ಪರಿಶೀಲಿಸಲು ಮಂಗಳವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಯೋಜನಾ ಅಧಿಕಾರಿ ಗುರುಪ್ರಸಾದ್, ಮುಖ್ಯ ಅಭಿಯಂತ ರಾಮಚಂದ್ರ ಎನ್. ರಾಥೋಡ್, ಇಇ ಕೇಶವ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

    ಮರಗಳಿರುವ ಕಡೆ ಕಾಮಗಾರಿ ನಿಧಾನ ಮಾಡಿ, ಉಳಿದೆಡೆ ಪೂರ್ಣಗೊಳಿಸಲು ಸೂಚಿಸಿದರು. ರಸ್ತೆ ಪ್ರದೇಶವನ್ನು ಅಗೆದಿರುವ ಬಗ್ಗೆ ಸೂಚನಾ ಲಕ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆ ಎಇಇ ನಟರಾಜ್‌ಗೆ ಸೂಚಿಸಲಾಯಿತು.
    ಬೇಗೂರಿನಿಂದ ರಸ್ತೆ ಗುಣಮಟ್ಟ ಪರಿಶೀಲಿಸಲು ಪ್ರಾರಂಭಿಸಿದ ಅಧಿಕಾರಿಗಳು, ಹಲವೆಡೆ ವೆಟ್‌ಮಿಕ್ಸ್ ತೆಗೆಸಿ ಗುಣಮಟ್ಟ ಕಾಪಾಡಿಕೊಳ್ಳದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
    ತ್ಯಾಮಗೊಂಡ್ಲು ಪಟ್ಟಣದಲ್ಲಿ ರಸ್ತೆ ಹಾದು ಹೋಗಲಿದ್ದು, ರಸ್ತೆ ವಿಭಜಕ, ಪಾದಚಾರಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಬೇಕು. ಕೆರೆ ಕೋಡಿ ಹಾಗೂ ಇನ್ನೆರಡು ಕಡೆ ರಸ್ತೆ ಕುಸಿದಿದ್ದು, ಅದನ್ನು ದುರಸ್ತಿ ಮಾಡಿಸುವಂತೆ ಎಇ ಹರೀಶ್‌ಗೆ ಸೂಚಿಸಿದರು.

    ರಾಜಕಾರಣಿಗಳ ಬೆಂಬಲ: ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಈಗಾಗಲೇ 8 ನೊಟೀಸ್ ನೀಡಲಾಗಿದೆ. ಆದರೆ ಕೆಲ ರಾಜಕಾರಣಿಗಳ ಬೆಂಬಲ ಇರುವುದರಿಂದ ಗುತ್ತಿಗೆದಾರ ನೋಟಿಸ್ ಮತ್ತು ಅಧಿಕಾರಿಗಳಿಗೆ ಹೆದರುತ್ತಿರಲಿಲ್ಲ. ಇಷ್ಟಬಂದಾಗ ಬೆರಳೆಣಿಕೆಯಷ್ಟು ಜನರಿಂದ ಕಾಮಗಾರಿ ನಡೆಸುತ್ತಾರೆ ಎಂದು ಸ್ಥಳೀಯರು ದೂರಿದರು. ಹಿರಿಯ ಅಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಲವಾರು ಸವಾರರು ಖುದ್ದು ಅಧಿಕಾರಿಗಳ ಬಳಿಗೆ ಬಂದು ಕಳಪೆ ಮತ್ತು ಕಾಮಗಾರಿ ವಿಳಂಬಕ್ಕೆ ಆಕ್ಷೇಪಿಸಿದರು.

    ಕಠಿಣ ಕ್ರಮದ ಎಚ್ಚರಿಕೆ: ಗುತ್ತಿಗೆದಾರನಿಗೆ ಸಾಕಷ್ಟು ಅವಕಾಶ ನೀಡಿದ್ದು, ತಪ್ಪನ್ನು ತಿದ್ದುಕೊಂಡಿಲ್ಲ. ಮಳೆಗಾಲ ಪ್ರಾರಂಭವಾಗಲಿದ್ದು ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು. ಯಾವುದೇ ಲೋಪ ಆದರೆ ದಂಡ ವಿಧಿಸಿ ಗುತ್ತಿಗೆ ವಜಾ ಮಾಡಲಾಗುವುದು ಎಂದು ಗುತ್ತಿಗೆದಾರನಿಗೆ ಮುಖ್ಯ ಯೋಜನಾ ಅಧಿಕಾರಿ ಗುರುಪ್ರಸಾದ್ ಎಚ್ಚರಿಕೆ ನೀಡಿದರು.

    ಗಮನ ಸೆಳೆದಿದ್ದ ವಿಜಯವಾಣಿ: ಕಾಮಗಾರಿ ಅವ್ಯವಸ್ಥೆ ಕುರಿತು ಇತ್ತೀಚೆಗೆ ವಿಜಯವಾಣಿಯಲ್ಲಿ ‘ಕುಂಟುತ್ತಾ ಸಾಗುತ್ತಿದೆ ರಸ್ತೆ ವಿಸ್ತರಣೆ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ರಸ್ತೆ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಸದಸ್ಯ ದೊಡ್ಡೇರಿ ವೆಂಕಟೇಶ್ ಅವರ ದೂರು ನೀಡಿದ್ದ ಜತೆಗೆ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts