More

    ಹುರುಳಿ ಕಟಾವಿಗೆ ಕಾರ್ಮಿಕರ ಕೊರತೆ

    ಗುಂಡ್ಲುಪೇಟೆ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಹುರುಳಿ ಕಟಾವು ಆರಂಭವಾಗಿದೆ. ಕಾರ್ಮಿಕರ ಕೊರತೆ, ದುಬಾರಿ ವೆಚ್ಚ, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಸೇರಿದಂತೆ ವಿವಿಧ ಕಾರಣಗಳಿಂದ ರೈತರಿಗೆ ನಷ್ಟವುಂಟಾಗುತ್ತಿದೆ.

    ತಾಲೂಕಿನ 12 ಸಾವಿರ 744 ಹೆಕ್ಟೇರ್ ಪ್ರದೇಶದ ಖುಷ್ಕಿ ಜಮೀನುಗಳಲ್ಲಿ ರೈತರು ಹುರುಳಿ ಬೆಳೆದಿದ್ದು, ಕಟಾವು ಆರಂಭವಾಗಿದೆ. ಈ ಬಾರಿ ಉತ್ತಮ ಮಳೆಬಿದ್ದ ಪರಿಣಾಮ ಬೆಳೆ ಹುಲುಸಾಗಿದ್ದರೂ ಕೆಲವೆಡೆ ಹುರುಳಿ ಬಳ್ಳಿ ಜತೆಗೆ ಕಳೆ ಸಹ ಸಮೃದ್ಧ್ದವಾಗಿ ಬೆಳೆದು ನಿರೀಕ್ಷಿತ ಪ್ರಮಾಣದಲ್ಲಿ ಕಾಳುಕಟ್ಟದೆ ಇರುವುದರಿಂದ ಇಳುವರಿ ಕ್ಷೀಣಿಸಿದೆ.

    ಕಾರ್ಮಿಕರ ಕೊರತೆ ಕಾಡುತ್ತಿದೆ: ನಸುಕಿನ ಇಬ್ಬನಿ ಬೀಳುವ ಸಮಯದಲ್ಲಿ 6 ರಿಂದ 8 ಗಂಟೆವರೆಗೆ ಮಾತ್ರ ಬೆಳೆ ಕಟಾವು ಮಾಡಬೇಕಿದೆ. ಕಳೆದ ತಿಂಗಳಿನಿಂದ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಕೂಲಿಗಾಗಿ ಕಾರ್ಮಿಕರು ವಲಸೆ ಹೋಗಿರುವುದರಿಂದ ಹುರುಳಿ ಕಟಾವಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

    ರೈತರಿಗೆ ದುಬಾರಿ: ಒಂದು ಎಕರೆ ಭೂಮಿಯಲ್ಲಿನ ಹುರುಳಿ ಕಟಾವು ಮಾಡಲು 3 ರಿಂದ 4 ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಕಾರ್ಮಿಕರು ಕಟಾವಿಗೆ ಬರುತ್ತಿದ್ದಾರೆ. ಸಂಕ್ರಾಂತಿ ನಂತರವೂ ಚಳಿಯೂ ಹೆಚ್ಚಾಗಿರುವುದರಿಂದ ನಸುಕಿನಲ್ಲಿ ಕಾರ್ಮಿಕರು ಜಮೀನುಗಳಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇದರಿಂದ ಕಾರ್ಮಿಕರನ್ನು ಊರಿನಿಂದ ಜಮೀನುಗಳಿಗೆ ಆಟೋಗಳಲ್ಲಿ ಕರೆದೊಯ್ಯಬೇಕಾಗಿರುವುದು ರೈತರಿಗೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸುತ್ತಿದೆ.

    ಬೇಸಾಯದ ವೆಚ್ಚವು ಸಿಗದು: ದಿನೇದಿನೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಸಕಾಲದಲ್ಲಿ ಹುರುಳಿ ಕಟಾವು ಮಾಡುವುದು ಸಾಧ್ಯವಾಗದಿದ್ದರೆ ಕಾಳುಗಳು ಸಿಡಿದು ಹೊರಬೀಳಲಿದೆ. ಇದರಿಂದ ಫಸಲೇ ನಾಶವಾಗುವ ಸಂಭವ ಹೆಚ್ಚಾಗಿದೆ. ರೈತರು ಸೂಕ್ತ ಸಮಯದಲ್ಲಿ ಕಟಾವು ಮಾಡದಿದ್ದರೆ ಬೇಸಾಯದ ವೆಚ್ಚವೂ ಬರದಂತಾಗುತ್ತದೆ.

    ಸಮರ್ಪಕ ಕಣಗಳಿಲ್ಲ: ಗ್ರಾಮಾಂತರ ಪ್ರದೇಶಗಳಲ್ಲಿ ಒಕ್ಕಣೆ ಮಾಡಲು ಸಮರ್ಪಕ ಕಣಗಳಿಲ್ಲದೆ ಯಂತ್ರಗಳಿಂದ ಒಕ್ಕಣೆ ಮಾಡಬೇಕು. ಇಲ್ಲವೆ ರಸ್ತೆಯಲ್ಲಿಯೇ ಒಕ್ಕಣೆ ಮಾಡುವುದು ಅನಿವಾರ್ಯ. ಒಂದು ವೇಳೆ ರಸ್ತೆಯಲ್ಲಿ ರೈತರು ಒಕ್ಕಣೆಗೆ ಹುರುಳಿ ಸೆತ್ತೆ ಹಾಕಿದರೆ ವಾಹನ ಸವಾರರಿಗೆ ತೀವ್ರ ತೊಂದರೆ ಸಾಮಾನ್ಯ.

    ಬೆಲೆ ಇಳಿಕೆ: ಹುರುಳಿ ಕಟಾವಿನ ಆರಂಭದಲ್ಲಿ ಕ್ವಿಂಟಾಲ್‌ಗೆ 6, 300 ರೂ. ಇದ್ದ ಹುರುಳಿ ದರ ಸದ್ಯ 5, 200ಕ್ಕೆ ಇಳಿದಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಬಿತ್ತತೆ ಬೀಜ ಖರೀದಿಯಿಂದ ಒಕ್ಕಣೆವರೆಗೆೆ ತಗಲುವ ವೆಚ್ಚದ ಅರ್ಧ ಭಾಗ ರೈತನಿಗೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಹುರುಳಿ ಬೆಳೆದವರೂ ಈಗ ಹೈರಾಣಾಗುತ್ತಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts