More

    ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಕೊರತೆಗೆ ಅಂತೂ ಮುಕ್ತಿ

    ಆನಂದ ಅಂಗಡಿ ಹುಬ್ಬಳ್ಳಿ

    ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಕೊರತೆ ಶಾಶ್ವತವಾಗಿ ಬಗೆಹರಿಯುವ ಕಾಲ ಅಂತೂ ಸಮೀಪಿಸಿದಂತಿದೆ.

    8-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದ ಪ್ರದೇಶಗಳಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುವ ಕಾಲ ದೂರವಿಲ್ಲ. ನಿರಂತರ ನೀರು ಪೂರೈಕೆಯಾಗುವ ಹಾಗೂ ಪ್ರಾತ್ಯಕ್ಷಿಕೆ ವಾರ್ಡ್ ಹೊರತುಪಡಿಸಿ ಇನ್ನುಳಿದ ಬಾಕಿ ವಾರ್ಡ್​ಗಳಲ್ಲಿ ಫೆ. 10ರಿಂದಲೇ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

    ಮಹಾನಗರ ಪಾಲಿಕೆಯಲ್ಲಿದ್ದ 26 ಕೋಟಿ ರೂ. ಬಳಸಿಕೊಂಡು ಮಲಪ್ರಭಾ ಜಲಾಶಯದಿಂದ ಹೆಚ್ಚುವರಿಯಾಗಿ 40 ಎಂಎಲ್​ಡಿ ನೀರು ಸಂಗ್ರಹಿಸಲು ಬೇಕಾದ ಉಪಕರಣಗಳನ್ನು ಸವದತ್ತಿ ಹಾಗೂ ಅಮ್ಮಿನಬಾವಿಯಲ್ಲಿ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಫೆ. 8ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೆಚ್ಚುವರಿ ನೀರು ಸಂಗ್ರಹಿಸುವ ಹಾಗೂ ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ನಂತರದ 2 ದಿನಗಳಲ್ಲಿ ನೀರು ಪೂರೈಕೆ ಚುರುಕುಗೊಳ್ಳಲಿದೆ.

    ಈ ಮೊದಲು ಮಲಪ್ರಭಾ ಜಲಾಶಯದಿಂದ ನಿತ್ಯ ಎತ್ತುತ್ತಿದ್ದ 170 ಎಂಎಲ್​ಡಿ ನೀರಿನಲ್ಲಿ ಹುಬ್ಬಳ್ಳಿಗೆ 100 ಎಂಎಲ್​ಡಿ, ಧಾರವಾಡಕ್ಕೆ 65 ಹಾಗೂ ಅಮ್ಮಿನಬಾವಿ ಸುತ್ತಲಿನ ಕೆಲ ಗ್ರಾಮಗಳಿಗೆ 5 ಎಂಎಲ್​ಡಿ ನೀರು ಪೂರೈಸಲಾಗುತ್ತಿತ್ತು. ನೀರಸಾಗರ ಜಲಾಶಯ ಬತ್ತಿದ ನಂತರ ಹುಬ್ಬಳ್ಳಿಯ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಯಿತು. ಕೆಲ ಬಾರಿ ಧಾರವಾಡಕ್ಕೆ ಪೂರೈಸುತ್ತಿದ್ದ 65 ಎಂಎಲ್​ಡಿ ನೀರಿನ ಸ್ವಲ್ಪ ಭಾಗವನ್ನು ಹುಬ್ಬಳ್ಳಿಗೆ ಪೂರೈಸಿ ಸ್ವಲ್ಪಮಟ್ಟಿನ ಹೊಂದಾಣಿಕೆ ಮಾಡಲಾಗುತ್ತಿತ್ತು. ಇದರಿಂದ ಧಾರವಾಡದ ಜನರಿಗೂ ತೊಂದರೆಯಾಗುತ್ತಿತ್ತು.

    ಇದೀಗ ಹೆಚ್ಚುವರಿ 40 ಎಂಎಲ್​ಡಿ ನೀರನ್ನು ಮಲಪ್ರಭಾ ಜಲಾಶಯದಿಂದ ಸಂಗ್ರಹಿಸಿ, ಅಮ್ಮಿನಬಾವಿಯಲ್ಲಿನ ಜಲಸಂಗ್ರಹಾಗಾರಕ್ಕೆ ಪೂರೈಸುವುದಕ್ಕೆ ಕೈಗೊಂಡಿದ್ದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಮಲಪ್ರಭಾದಿಂದ ಇನ್ನು ನಿತ್ಯ 210 ದಶಲಕ್ಷ ಲೀ. ನೀರು ಸಂಗ್ರಹಿಸಲಾಗುತ್ತದೆ. ಹೆಚ್ಚುವರಿಯಾಗಿ ಸಂಗ್ರಹಿಸುವ 40 ಎಂಎಲ್​ಡಿ ನೀರನ್ನು ಹುಬ್ಬಳ್ಳಿಗೆ ಪೂರೈಸಲಾಗುತ್ತದೆ. ಅಂದರೆ ಈ ಮೊದಲು ಪೂರೈಸಲಾಗುತ್ತಿದ್ದ 100 ಎಂಎಲ್​ಡಿ ನೀರಿನ ಬದಲಾಗಿ ಇನ್ನು ಮೇಲೆ 140 ಎಂಎಲ್​ಡಿ ಹುಬ್ಬಳ್ಳಿ ಭಾಗಕ್ಕೆ ಪೂರೈಕೆಯಾಗಲಿದೆ. ಈ ಕಾಮಗಾರಿಗಾಗಿ ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಆಂಡ್ ಡ್ರೇನೇಜ್ ಬೋರ್ಡ್​ನಿಂದ ಹೈದ್ರಾಬಾದ್ ಮೂಲದ ಮೆ. ಡಿಆರ್​ಎಸ್ ಇನ್​ಫ್ರಾಟೆಕ್ ಪ್ರೖೆ.ಲಿ. ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

    35-40 ಎಂಎಲ್​ಡಿ ನೀರು ಪೂರೈಕೆ: ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಸುವ ನೀರಸಾಗರ ಜಲಾಶಯವೂ ಭರ್ತಿಯಾಗಿದ್ದರಿಂದ ಅಲ್ಲಿಯೂ ನೀರಿನ ಸಮಸ್ಯೆ ಬಗೆಹರಿದಿದೆ. ಸುಮಾರು 1 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ನೀರಸಾಗರದಿಂದ 35-40 ಎಂಎಲ್​ಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

    ಸತಾಯಿಸಿದ್ದ ಕೈ ಸರ್ಕಾರ: ಹಾಗೆ ನೋಡಿದರೆ, 1 ವರ್ಷದ ಹಿಂದೆಯೇ ಮಲಪ್ರಭಾ ಜಲಾಶಯದಿಂದ ಹೆಚ್ಚುವರಿ ನೀರು ಎತ್ತುವ ಕಾರ್ಯ ಪೂರ್ಣಗೊಂಡು, ಅವಳಿನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಿತ್ತು. ಆದರೆ, ಹಿಂದಿನ ಕಾಂಗ್ರೆಸ್ ಸರ್ಕಾರ, ಪಾಲಿಕೆಯಲ್ಲಿದ್ದ 26 ಕೋಟಿ ರೂ. ಬಳಕೆಗೆ ಅನುಮತಿ ನೀಡದೆ ಸತಾಯಿಸಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ, ಅನುಮತಿಯ ಅಗತ್ಯವೇ ಇಲ್ಲ, ನಿಮ್ಮಲ್ಲಿರುವ ಹಣದಲ್ಲಿ ನೀವು ಕೆಲಸ ಮಾಡಿಸಿಕೊಳ್ಳಿ ಎಂಬರ್ಥದ ಪತ್ರ ಸರ್ಕಾರದಿಂದ ಬಂದಿತ್ತು. 26 ಕೋಟಿ ರೂ.ದಲ್ಲಿ ಮಲಪ್ರಭಾ ಜಲಾಶಯದಲ್ಲಿ 1 ಪಂಪಿಂಗ್ ಯಂತ್ರ, ಅಮ್ಮಿನಬಾವಿಯಲ್ಲಿ ಒಂದು ಪಂಪಿಂಗ್ ಯಂತ್ರ ಅಳವಡಿಸುವ ಜೊತೆಗೆ 8.95 ಕೋಟಿ ರೂ. ವೆಚ್ಚದಲ್ಲಿ ಅಮ್ಮಿನಬಾವಿಯ ಜಲಸಂಗ್ರಹಾಗಾರದಲ್ಲಿ ನೀರು ಶುದ್ಧೀಕರಣ ಘಟಕ ಮತ್ತಿತರ ಕಾಮಗಾರಿ ಫೂರ್ಣಗೊಂಡಿವೆ.

    ಮಲಪ್ರಭಾ ಜಲಾಶಯದಿಂದ ಸಂಗ್ರಹಿಸುವ ಹೆಚ್ಚುವರಿ ನೀರು ಸೇರಿ ಒಟ್ಟು 140 ಎಂಎಲ್​ಡಿ ನೀರನ್ನು ಹುಬ್ಬಳ್ಳಿಗೆ ಪೂರೈಸಲಾಗುವುದು. ಇದರಿಂದಾಗಿ ಧಾರವಾಡಕ್ಕೆ ಪೂರೈಸಲಾಗುವ 65 ಎಂಎಲ್​ಡಿ ನೀರು ಸಂಪೂರ್ಣವಾಗಿ ಅಲ್ಲಿನ ಬಡಾವಣೆಗಳಿಗೆ ದೊರೆಯುತ್ತದೆ. ಫೆ. 8ರಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೆಚ್ಚುವರಿ ನೀರು ಪೂರೈಕೆಗೆ ಚಾಲನೆ ನೀಡುವರು. | ಜಲಮಂಡಳಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts