More

    ಹಾವು-ಏಣಿ ಆಟದಂತಾದ ದರ!

    ಮೃತ್ಯುಂಜಯ ಕಲ್ಮಠ ಗದಗ

    2019ನೇ ಸಾಲಿನಲ್ಲಿ ಗದಗ ಎಪಿಎಂಸಿಯಿಂದ ಉಳ್ಳಾಗಡ್ಡಿ ಬೆಳೆಗಾರರಿಗೆ 23,67,47,300 ರೂ. ಪಾವತಿಯಾಗಿದ್ದು, ಎಪಿಎಂಸಿಗೆ ತೆರಿಗೆ ರೂಪದಲ್ಲಿ (ಸೆಸ್) 23,67,473 ರೂ. ಜಮಾ ಆಗಿದೆ. ಶೇ. 50ರಷ್ಟು ಉಳ್ಳಾಗಡ್ಡಿ ಬೆಳೆಗಾರರಿಗೆ ಉತ್ತಮ ಬೆಲೆ ದೊರೆತಿದೆ. ಕಳೆದ ಐದು ವರ್ಷಗಳಲ್ಲಿ ಇದು ರೈತರಿಗೆ ಸಿಕ್ಕಿರುವ ಉತ್ತಮ ದರ ಮಾತ್ರವಲ್ಲ, ಎಪಿಎಂಸಿಗೆ ಉಳ್ಳಾಗಡ್ಡಿ ವಹಿವಾಟಿನಿಂದ ಅತಿ ಹೆಚ್ಚು ಸೆಸ್ (ತೆರಿಗೆ) ಜಮಾ ಆಗಿರುವುದು ವಿಶೇಷ.

    2019 ಏಪ್ರಿಲ್ 1ರಿಂದ 2019 ಡಿ. 21ರವರೆಗೆ ಗದಗ ಎಪಿಎಂಸಿಗೆ 1,61, 670 ಕ್ವಿಂಟಾಲ್ ಉಳ್ಳಾಗಡ್ಡಿ ಆವಕವಾಗಿದೆ. ಕನಿಷ್ಠ 1500ರಿಂದ ಗರಿಷ್ಠ 7000 ರೂ.ವರೆಗೆ ಮಾರಾಟವಾಗಿದೆ.

    ಏರಿಳಿತ ಕಂಡ ದರ: ಕಳೆದ ವರ್ಷ ಮೊದಮೊದಲಿಗೆ ಉಳ್ಳಾಗಡ್ಡಿ ದರ ಗಮನಾರ್ಹ ಕುಸಿತ ಕಂಡಿತು. ಆದರೆ, ವೇಗವಾಗಿ ದರ ಏರಿಕೆ ಕಂಡು ಪ್ರತಿ ಕ್ವಿಂಟಾಲ್​ಗೆ 11 ಸಾವಿರ ರೂ.ವರೆಗೂ ಮಾರಾಟವಾಯಿತು. ಕೇವಲ ಎರಡು ತಿಂಗಳು ಅವಧಿಯಲ್ಲಿಯೇ ಈ ಎರಡೂ ನಿದರ್ಶನಗಳು ಕಂಡುಬಂದವು. ಅಕ್ಟೋಬರ್ ತಿಂಗಳಲ್ಲಿ ಉಳ್ಳಾಗಡ್ಡಿ ಚೀಲವನ್ನು ಗದಗ ಎಪಿಎಂಸಿಯಲ್ಲಿ ಎಸೆದು ಹೋದವರೇ ಹೆಚ್ಚು. 50 ಚೀಲ ಉಳ್ಳಾಗಡ್ಡಿ ತಂದಿದ್ದ ರೈತರೊಬ್ಬರು 15 ಸಾವಿರ ರೂ. ತೆಗೆದುಕೊಂಡು ಹೋಗಿದ್ದು ಕಂಡುಬಂದಿತು. ನವೆಂಬರ್ (ಅರ್ಧಭಾಗ), ಡಿಸೆಂಬರ್ ತಿಂಗಳಲ್ಲಿ ಕೇವಲ ಎರಡ್ಮೂರು ಚೀಲ ತಂದಿದ್ದ ರೈತ 20 ಸಾವಿರ ರೂ. ಪಡೆದುಕೊಂಡರು. ಹೀಗಾಗಿ ಮರಣ, ಮಾರಾಟ ಯಾರ ಕೈಯಲ್ಲೂ ಇಲ್ಲ ಎಂಬ ನಾಣ್ನುಡಿ ಇಲ್ಲಿ ಮತ್ತೊಮ್ಮೆ ಸಾಬೀತಾಯಿತು.

    ಡಿಸೆಂಬರ್ ತಿಂಗಳಲ್ಲಂತೂ ಉಳ್ಳಾಗಡ್ಡಿ ದರ ದಾಖಲೆ ಮಾಡಿತು. ಆದರೆ, ಅಷ್ಟೊತ್ತಿಗಾಗಲೇ ಅರ್ಧಕ್ಕೂ ಹೆಚ್ಚು ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದ್ದರು. ಹೀಗಾಗಿ, ಎಲ್ಲ ರೈತರಿಗೂ ಇದರ ಲಾಭ ಸಿಗಲಿಲ್ಲ. ಜತೆಗೆ, ಪ್ರವಾಹದಿಂದ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ನೀರಲ್ಲಿ ಕೊಚ್ಚಿಹೋಗಿದ್ದರಿಂದ ಒಟ್ಟಾರೆ ಇಳುವರಿಯೂ ಕಡಿಮೆಯಾಯಿತು. ನವೆಂಬರ್, ಡಿಸೆಂಬರ್​ನಲ್ಲಿ ಇಳುವರಿ ಪಡೆದುಕೊಂಡ ರೈತರಿಗೆ ಉತ್ತಮ ಬೆಲೆ ಸಿಕ್ಕಿತು.

    ಎಲ್ಲೆಲ್ಲಿ ಹಾನಿ?
    ಗದಗ ತಾಲೂಕಿನಲ್ಲಿ 11,500 ಹೆಕ್ಟೇರ್, ಮುಂಡರಗಿ 5,010 ಹೆಕ್ಟೇರ್, ನರಗುಂದ 615 ಹೆಕ್ಟೇರ್, ರೋಣ 10,000 ಹೆಕ್ಟೇರ್ ಹಾಗೂ ಶಿರಹಟ್ಟಿಯಲ್ಲಿ 7,050 ಹೆಕ್ಟೇರ್ ಸೇರಿ ಜಿಲ್ಲೆಯಲ್ಲಿ 34,175 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆಯಾಗಿತ್ತು. ಮಲಪ್ರಭಾ, ತುಂಗಭದ್ರಾ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಬಿತ್ತನೆಯಾದ 34,175 ಹೆಕ್ಟೇರ್ ಪೈಕಿ ರೋಣ, ನರಗುಂದ, ಮುಂಡರಗಿ ಹಾಗೂ ಶಿರಹಟ್ಟಿ ವ್ಯಾಪ್ತಿಯಲ್ಲಿ ಅಂದಾಜು 2,344 ಹೆಕ್ಟೇರ್ ಉಳ್ಳಾಗಡ್ಡಿ ನಾಶವಾಯಿತು.

    ಕಳೆದ ನಾಲ್ಕು ವರ್ಷಗಳ ವಿವರ
    2018ರ ಏಪ್ರಿಲ್ 1ರಿಂದ 2019 ಮಾಚ್ 31ರ ವರೆಗೆ ಎಪಿಎಂಸಿಗೆ 21,44,62 ಕ್ವಿಂಟಾಲ್ ಉಳ್ಳಾಗಡ್ಡಿ ಆವಕವಾಗಿದ್ದು, ಕನಿಷ್ಠ 50 ರೂ. ದಿಂದ ಗರಿಷ್ಠ 1750 ರೂ. ವರೆಗೆ ಮಾರಾಟವಾಗಿದೆ. ಒಟ್ಟು 10,27,04,200 ರೂ. ಉಳ್ಳಾಗಡ್ಡಿ ರೈತರಿಗೆ ಹಣ ಸಂದಾಯವಾಗಿದೆ. ಎಪಿಎಂಸಿಗೆ ತೆರಿಗೆ ರೂಪದಲ್ಲಿ (ಸೆಸ್) 10,27,042 ರೂ. ಜಮಾ ಆಗಿದೆ. 2017ರ ಏಪ್ರಿಲ್ 1ರಿಂದ 2018 ಮಾರ್ಚ್ 31 ವರೆಗೆ ಎಪಿಎಂಸಿಗೆ 57, 988 ಕ್ವಿಂಟಾಲ್ ಉಳ್ಳಾಗಡ್ಡಿ ಆವಕವಾಗಿದ್ದು, ಕನಿಷ್ಠ 100 ರೂ. ದಿಂದ ಗರಿಷ್ಟ 4300 ರೂ. ವರೆಗೆ ಮಾರಾಟವಾಗಿತ್ತು. ಒಟ್ಟು 12, 46,34,100 ರೂ. ಉಳ್ಳಾಗಡ್ಡಿ ರೈತರಿಗೆ ಹಣ ಸಂದಾಯವಾಗಿದೆ. ಎಪಿಎಂಸಿಗೆ ತೆರಿಗೆ ರೂಪದಲ್ಲಿ (ಸೆಸ್) 12,46, 342 ರೂ. ಜಮಾ ಆಗಿತ್ತು. 2016 ಏಪ್ರಿಲ್ 1ರಿಂದ 2017ರ ಮಾರ್ಚ್ 31ರ ವರೆಗೆ ಎಪಿಎಂಸಿಗೆ 1,27,147 ಕ್ವಿಂಟಾಲ್ ಉಳ್ಳಾಗಡ್ಡಿ ಆವಕವಾಗಿದ್ದು, ಕನಿಷ್ಠ 100 ರೂ. ದಿಂದ ಗರಿಷ್ಠ 1200 ರೂ. ವರೆಗೆ ಮಾರಾಟವಾಗಿ, ರೈತರಿಗೆ ಒಟ್ಟು 9,53, 72,100 ರೂ. ಸಂದಾಯವಾಗಿತ್ತು. ಎಪಿಎಂಸಿಗೆ 9,53, 721 ರೂ. ತೆರಿಗೆ ಜಮಾ ಆಗಿತ್ತು.
    2015ರ ಏಪ್ರಿಲ್ 1ರಿಂದ 2016ರ ಮಾರ್ಚ್ 31ರ ವರೆಗೆ ಎಪಿಎಂಸಿಗೆ 1,62,444 ಕ್ವಿಂಟಾಲ್ ಉಳ್ಳಾಗಡ್ಡಿ ಆವಕವಾಗಿದ್ದು, ಕನಿಷ್ಠ 300 ರೂ. ದಿಂದ ಗರಿಷ್ಠ 4000 ರೂ. ವರೆಗೆ ಮಾರಾಟವಾಗಿತ್ತು. ಒಟ್ಟು 23,25,05,590 ರೂ. ಉಳ್ಳಾಗಡ್ಡಿ ರೈತರಿಗೆ ಹಣ ಸಂದಾಯವಾಗಿದೆ. ಎಪಿಎಂಸಿಗೆ 23, 25, 059 ರೂ. ಜಮಾ ಆಗಿತ್ತು.

    ಉಳ್ಳಾಗಡ್ಡಿ ದರ ಭಾರಿ ಏರಿಕೆಯಾಗಿದೆ ಎನ್ನುತ್ತಾರೆ. ಆದರೆ, ಇದರ ಲಾಭ ರೈತರಿಗೆ ಸಿಕ್ಕಿಲ್ಲ. ಪ್ರತಿ ಕ್ವಿಂಟಾಲ್​ಗೆ 1500 ರಿಂದ 10 ಸಾವಿರ ರೂ. ಮಾರಾಟವಾಗಿದೆ. ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಹೆಚ್ಚಿನ ದರದ ಪ್ರಯೋಜನ ಸಿಕ್ಕಿದೆ.
    ಶೇಖಣ್ಣ ಅಗಸಿಮನಿ, ರೈತ, ಬಳಗಾನೂರ

    ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಸಲ ಉಳ್ಳಾಗಡ್ಡಿ ಬೆಳೆಗಾರರಿಗೆ ಉತ್ತಮ ಆದಾಯ ಸಿಕ್ಕಿದೆ. ಜತೆಗೆ, ಎಪಿಎಂಸಿಗೂ ಲಕ್ಷಾಂತರ ರೂ. ಸೆಸ್ ಜಮಾ ಆಗಿದೆ. ಆರಂಭದಲ್ಲಿಯೇ ಈ ದರ ಸಿಕ್ಕಿದ್ದರೆ ಎಲ್ಲ ರೈತರಿಗೂ ಅನುಕೂಲವಾಗುತ್ತಿತ್ತು.
    | ಎಸ್.ಬಿ. ನ್ಯಾಮಗೌಡ, ಕಾರ್ಯದರ್ಶಿ, ಎಪಿಎಂಸಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts