More

    ಹಲ್ಲೆ ಆರೋಪಿಗಳ ಬಂಧಿಸಿ

    ಭದ್ರಾವತಿ: ಹಿಂದುಪರ ಸಂಘಟನೆ ಕಾರ್ಯಕರ್ತ ಹಡಮತ್ ಸಿಂಗ್ ಮೇಲೆ ಸೋಮವಾರ ರಾತ್ರಿ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿ ಬಜರಂಗದಳ, ವಿಎಚ್​ಪಿ ಹಾಗೂ ಬಿಜೆಪಿ ಮುಖಂಡರು ನ್ಯೂಟೌನ್ ಡಿವೈಎಸ್ಪಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಕೋಮು ಗಲಭೆಗೆ ಪ್ರಚೋದನೆ ನೀಡುವ ಉದ್ದೇಶದಿಂದ ಕಾರ್ಯಕರ್ತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆರೋಪಿಗಳನ್ನು ಕೂಡಲೆ ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು. ಇದು ಉದ್ದೇಶಪೂರ್ವಕ ಕೃತ್ಯ. ಆರೋಪಿಗಳನ್ನು ಬಂಧಿಸಿ 307 ಕೇಸ್ ದಾಖಲಿಸುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

    ಪೊಲೀಸರು ತಾಲೂಕಿನಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಹಳೇನಗರದ ಸಂಚಿಯ ಹೊನ್ನಮ್ಮ ಕಾಲೇಜು ಎದುರು, ಖಾಜಿ ಮೊಹೊಲ್ಲಾದ ಕೆಫೆವೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕನಕ ಮಂಟಪದಲ್ಲಿ ಕ್ರಿಕೆಟ್ ಆಡಲು ಬರುವ ಹಿಂದು ಯುವಕರ ಮೇಲೆ ಕೆಲವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಪೊಲೀಸರು ಇಂಥವರನ್ನು ಬೆಳೆಸಿ ಪೋಷಿಸದೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕಾಗಮಿಸಿದ ಎಸ್ಪಿ ಕೆ.ಎಂ.ಶಾಂತರಾಜು, ಸೋಮವಾರ ರಾತ್ರಿ ನಡೆದ ಪ್ರಕರಣಕ್ಕೆ ಸಂಬಂಧಿಸಿ, ಇಲಾಖೆ ಸಭೆ ಕರೆದು ಕಾನೂನು ಕ್ರಮದ ಬಗ್ಗೆ ರ್ಚಚಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಇಲಾಖೆಯಿಂದ 2 ತಂಡ ರಚಿಸಿದ್ದು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆ ಮುಂದುವರಿದಿದ್ದು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

    ಘಟನೆ ವಿವರ: ಎರಡು ದಿನಗಳ ಹಿಂದೆ ಕನಕಮಂಟಪ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆದಿತ್ತು. ಪಂದ್ಯಾವಳಿಯಲ್ಲಿ ನಾಟೌಟ್ ವಿಚಾರಕ್ಕೆ ಎರಡು ತಂಡಗಳ ನಡುವೆ ಜಗಳ ನಡೆದು ಜಗಳ ವಿಕೋಪಕ್ಕೆ ಹೋಗಿ ಎರಡೂ ತಂಡದ ನಾಲ್ವರು ಯುವಕರು ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದರು. ಈ ಸಂಬಂಧ ಹಳೇನಗರ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿತ್ತು.

    ಅಮಾಯಕನಿಗೆ ಚಾಕು ಇರಿತ: ಚೂರಿ ಇರಿತಕ್ಕೊಳಗಾದ ಯುವಕ ಹಡಮತ್ ಸಿಂಗ್ ಕ್ರಿಕೆಟ್ ಆಟದಲ್ಲಿ ಭಾಗವಹಿಸಿರಲಿಲ್ಲ. ಆದರೆ ಹಿಂದುಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಹಡಮತ್ ಸಿಂಗ್ ಹೊಸ ಸೇತುವೆ ರಸ್ತೆಯಲ್ಲಿ ಹಾರ್ಡ್​ವೇರ್ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ. ಸೋಮವಾರ ರಾತ್ರಿ ಸಮೀಪದ ಖಾಜೀ ಮೊಹಲ್ಲಾ ರಸ್ತೆಯಲ್ಲಿ ರಾತ್ರಿ 9 ಗಂಟೆಗೆ ತೆರಳುತ್ತಿದ್ದಾಗ ಬೈಕ್​ನಲ್ಲಿ ಬಂದ ಮೂವರು ಚಾಕುವಿನಿಂದ ಇರಿದಿದ್ದಾರೆ. ಅಲ್ಲದೆ ನಮ್ಮ ಹುಡುಗರ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

    ಗಂಭೀರವಾಗಿ ಗಾಯಗೊಂಡ ಹಡಮತ್​ನನ್ನು ಸವಾಯಿ ಸಿಂಗ್ ಎಂಬುವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಬಜರಂಗದಳ ಹಾಗೂ ಎಲ್ಲ ಹಿಂದುಪರ ಸಂಘಟನೆಗಳು ರಾತೋರಾತ್ರಿ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು.

    ಮಂಗಳವಾರ ಬೆಳಗ್ಗೆ 7 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದರು. ಅಷ್ಟರಲ್ಲಾಗಲೆ ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ ಕೆ.ಎಂ.ಶಾಂತರಾಜ್, ಎಎಸ್ಪಿ ಶೇಖರ್ ಟೆಕ್ಕಣ್ಣನವರ್, ಡಿವೈಎಸ್ಪಿ ಸುಧಾಕರ್ ಎಸ್.ನಾಯಕ್, ಸಂಘಟನೆಯ ಮುಖಂಡರೊಂದಿಗೆ ರ್ಚಚಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ ಮಂಗಳವಾರ ಬೆಳಗ್ಗೆಯೂ ಆರೋಪಿಗಳನ್ನು ಬಂಧಿಸದಿದ್ದರಿಂದ ಪ್ರತಿಭಟನೆ ನಡೆಸಲಾಯಿತು.

    ಎಸ್ಪಿ ಆಶ್ವಾಸನೆ ಮೇರೆಗೆ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು. ಹಾ.ರಾಮಪ್ಪ, ಧರ್ಮಪ್ರಸಾದ್, ಪ್ರಭಾಕರ್, ಕದಿರೇಶ್, ಮಂಗೋಟೆ ರುದ್ರೇಶ್, ಜಿ.ಆನಂದಕುಮಾರ್, ಶ್ರೀನಾಥ್, ಸುನೀಲ್, ವಿಶ್ವನಾಥ್, ರಾಮಚಂದ್ರ, ವೆಂಕಟೇಶ್, ಮಂಜುನಾಥ್, ಮಂಜಪ್ಪ, ಸುನೀಲ್ ಗಾಯಕ್​ವಾಡ್, ಸವಾಯಿ ಸಿಂಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts