More

    ಹಂತ ಹಂತವಾಗಿ ಸ್ವಾಮಿನಾಥನ್ ವರದಿ ಜಾರಿ

    ಧಾರವಾಡ: ಕೇಂದ್ರ ಸರ್ಕಾರ ಜೇನುಸಾಕಣೆ, ಹೈನುಗಾರಿಕೆ, ಇತರ ಕೃಷಿ, ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರ ದೇಶದ 6 ಕೋಟಿ ರೈತರಿಗೆ ನೆರವು ನೀಡುತ್ತಿದೆ. ಹಂತಹಂತವಾಗಿ ಡಾ. ಸ್ವಾಮಿನಾಥನ್ ವರದಿ ಜಾರಿಯ ಮೂಲಕ ರೈತರಿಗೆ ಬೆಂಬಲ ಬೆಲೆ ಯೋಜನೆಯಲ್ಲಿ ಹೆಚ್ಚಳ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ 3 ದಿನಗಳ ಕೃಷಿ ಮೇಳವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ. 60ರಷ್ಟಿತ್ತು. ಈಗ ಶೇ. 18ಕ್ಕೆ ಇಳಿದಿದೆ. ಅದರ ಅರ್ಥ ಕೃಷಿ ಉತ್ಪಾದನೆ ಕುಸಿದಿದೆ ಎಂದಲ್ಲ. ಇತರ ವಲಯಗಳ ಉತ್ಪಾದನೆ ಹೆಚ್ಚಾಗಿದೆ. ಜನಸಂಖ್ಯೆ ಹೆಚ್ಚಳ ಮತ್ತು ಕೃಷಿ ಭೂಮಿ ಪ್ರಮಾಣದ ಇಳಿಕೆ ಇದಕ್ಕೆ ಪ್ರಮುಖ ಕಾರಣ. ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಬೇವುಲೇಪಿತ ಯೂರಿಯಾ ಉತ್ಪಾದನೆ ಮಾಡುವ ಮೂಲಕ ಕಳ್ಳಸಾಗಣೆಗೆ ಕಡಿವಾಣ ಹಾಕಲಾಗಿದೆ. ಇದರಿಂದ 80,000 ಕೋಟಿ ರೂ. ಉಳಿತಾಯವಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಧಾರವಾಡ ಜಿಲ್ಲೆಯ 1,400 ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

    ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಕೃಷಿ ಮತ್ತು ನೇಕಾರಿಕೆ ದೇಶದ ಎರಡು ಕಣ್ಣುಗಳು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಎಂಬ ಮಾತು ಸತ್ಯ. ಕೃಷಿ ಕ್ಷೇತ್ರದ ಸ್ವಾವಲಂಬನೆಗೆ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ ಎಂದರು.

    ಕೃಷಿ ವಿವಿಯ ಪ್ರಕಟಣೆಗಳನ್ನು ಬಿಡುಗಡೆ ಮಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಡಾ. ಸ್ವಾಮಿನಾಥನ್ ವರದಿ ಪ್ರಕಾರ ಕಬ್ಬನ್ನೂ ಸೇರಿ 26 ಬೆಳೆಗಳಿಗೆ ನಿಗದಿತ ಬೆಲೆ ನೀಡಲು ಶಿಫಾರಸು ಮಾಡಲಾಗಿದೆ. ಅಂತರ್ಜಲ ಕುಸಿತವಾಗಿರುವ ಭಾಗಗಳಲ್ಲಿ ಹೆಚ್ಚಳಕ್ಕೆ ಯೋಜನೆ ರೂಪಿಸಿ, 800 ಕೋಟಿ ರೂ. ಒದಗಿಸಲಾಗಿದೆ. ರೈತರು ಮಣ್ಣಿನ ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಎಂದರು. ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಜಿಲ್ಲೆಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ತುಪ್ಪರಿ, ಬೆಣ್ಣೆ ಹಳ್ಳದ ನೀರು ತಡೆಯು ಯೋಜನೆಗೆ ಜಿಲ್ಲೆಯ ಎಲ್ಲ ಶಾಸಕರ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗುತ್ತಿದೆ. ನೀರಾವರಿ ಯೋಜನೆಗಳ ಪುನಃಶ್ಚೇತನಕ್ಕೆ ವಾಲ್ಮಿ ಸಂಸ್ಥೆಯನ್ನು ಸಶಕ್ತೀಕರಣ ಮಾಡಲಾಗುವುದು ಎಂದರು. ಗಣಿ, ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಹೊಸ ತಳಿಗಳ ಆವಿಷ್ಕಾರದ ಮೂಲಕ ರೈತರ ಕಲ್ಯಾಣಕ್ಕಾಗಿ ಸಕಲ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಕೃಷಿ ಮೇಳ ರೈತರಿಗೆ ವರದಾನ ಎಂದರು. ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ,ಸಿ.ಎಂ. ನಿಂಬಣ್ಣವರ, ಎಸ್.ವಿ. ಸಂಕನೂರ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ, ವಾಕರಸಾಸಂ ಅಧ್ಯಕ್ಷ ವಿ.ಎಸ್. ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು. ಕೃಷಿ ವಿವಿ ಕುಲಪತಿ ಡಾ. ಎಂ. ಬಿ.ಚೆಟ್ಟಿ ಸ್ವಾಗತಿಸಿದರು.

    ಮೇಳಕ್ಕಿಲ್ಲ ನಿರೀಕ್ಷಿತ ಮಟ್ಟದ ಜನ: ಉತ್ತರ ಕರ್ನಾಟಕ ಭಾಗದ ರೈತರ ಜಾತ್ರೆ ಎಂದೇ ಖ್ಯಾತಿ ಹೊಂದಿರುವ ಕೃಷಿ ಮೇಳಕ್ಕೆ ಶನಿವಾರ ಚಾಲನೆ ದೊರೆತಿದೆ. ಆದರೆ ಮೊದಲ ದಿನವೇ ನಿರೀಕ್ಷಿತ ಮಟ್ಟದಲ್ಲಿ ರೈತರು ಪಾಲ್ಗೊಳ್ಳದಿರುವುದು ಆಯೋಜಕರಲ್ಲಿ ಕೊಂಚ ನಿರಾಸೆ ಮೂಡಿಸಿದಂತಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗುತ್ತಿತ್ತು. ಮೇಳದ ಮೊದಲ ದಿನವೇ ರೈತರು ಸೇರಿ 1 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಸುಮಾರು 55 ಸಾವಿರ ಜನರು ಆಗಮಿಸಿದ್ದರು. ಬೀಜ ಮೇಳ ಹಾಗೂ ಪ್ರಾತ್ಯಕ್ಷಿಕೆಗಳು ಇಲ್ಲವಾದ ಕಾರಣಕ್ಕೇ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪ್ರಾತ್ಯಕ್ಷಿಕೆ ಸ್ಥಳಗಳು ಖಾಲಿ ಖಾಲಿ: ಮೇಳದಲ್ಲಿ ಕೃವಿವಿ ಜಾಗದ ಪ್ಲಾಟ್​ಗಳಲ್ಲಿ 25ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಸಿದ್ಧಪಡಿಸುತ್ತಿದ್ದರು. ರೈತರು ಆಗಮಿಸಿ ಹೊಸ ಹೊಸ ತಳಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ತಮ್ಮಲ್ಲೂ ಅಳವಡಿಕೆ ಮಾಡಿಕೊಳ್ಳಲು ಪ್ರಾತ್ಯಕ್ಷಿಕೆಗಳು ಅನುಕೂಲವಾಗಿದ್ದವು. ಆದರೆ ಈಗಾಗಲೇ ಹಿಂಗಾರಿ ಬಿತ್ತನೆಯಾಗಿದ್ದು, ಇನ್ನೂ ಬೆಳೆಗಳು ಬಾರದ ಕಾರಣಕ್ಕೆ ಖಾಲಿ ಪ್ಲಾಟ್​ಗಳನ್ನೇ ನೋಡುವಂತಾಗಿದೆ. ಹೀಗಾಗಿ ಬಹುತೇಕ ಪ್ರಾತ್ಯಕ್ಷಿಕೆ ಸ್ಥಳಗಳು ಬಿಕೋ ಎನ್ನುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts