More

    ಸೌಹಾರ್ದದಿಂದ ಶಾಂತಿ, ಪ್ರಗತಿ ಸಾಧ್ಯ

    ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಮೇಲೆ ತಾರತಮ್ಯ ತೋರದೆ, ಎಲ್ಲ ಸಮಾಜದವರು ಅನ್ಯೋನ್ಯತೆ ಮತ್ತು ಶಾಂತಿ, ಸೌಹಾರ್ದತೆಯಿಂದ ಬದುಕಿದರೆ ಶಾಂತಿ ಮತ್ತು ಪ್ರಗತಿ ಸಾಧಿಸಬಹುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ರಾಜ್ಯ ಬುಡಕಟ್ಟು ಸಂಶೋಧನೆ ಸಂಸ್ಥೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ‘ಪ.ಜಾ., ಪ.ಪಂ. ದೌರ್ಜನ್ಯ ತಡೆ ಕಾಯ್ದೆ- ಸಮಸ್ಯೆ ಮತ್ತು ಸವಾಲುಗಳು’ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕಾಯ್ದೆಯು ಅನುಷ್ಠಾನದಲ್ಲಿದ್ದರೂ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ವಹಿಸಿ ಸಮಾಜದಲ್ಲಿ ಶೋಷಣೆ, ದೌರ್ಜನ್ಯ ಪ್ರಕರಣಗಳ ತಡೆಗ ಕ್ರಮ ಕೈಗೊಳ್ಳಬೇಕು. ಕಾಲಕಾಲಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಪರಿಶಿಷ್ಟರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.

    ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಸುಭಾಸ್​ಚಂದ್ರ ನಾಟಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಹಾವೇರಿ ಶಾಸಕ ನೆಹರು ಓಲೇಕಾರ, ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಶಿ, ಕವಿವಿ ಪ್ರಭಾರ ಕುಲಪತಿ ಡಾ. ಎ.ಎಸ್. ಶಿರಾಳಶೆಟ್ಟಿ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳಾದ ಡಾ. ಕೆ. ರಾಮಚಂದ್ರರಾವ್, ಮಂಜುನಾಥ ಕೆ. ಅಣ್ಣಿಗೇರಿ, ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ, ಸಮಾಜ ಕಲ್ಯಾಣ ಇಲಾಖೆಯ ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಗಳ ಸಲಹೆಗಾರ ಇ. ವೆಂಕಟಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್, ಕವಿವಿ ಹಣಕಾಸು ಅಧಿಕಾರಿ ಪ್ರೊ. ಆರ್.ಎಲ್. ಹೈದ್ರಾಬಾದ್, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಕವಿವಿ ಕುಲಸಚಿವ ಡಾ. ಸಿ.ಬಿ. ಹೊನ್ನುಸಿದಾರ್ಥ ಸ್ವಾಗತಿಸಿದರು.

    ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ

    ಧಾರವಾಡ: ಲೋಕೊಪಯೋಗಿ ಇಲಾಖೆಯ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಅನುದಾನವನ್ನು ಸಂಪೂರ್ಣ ಬಳಸಿಕೊಂಡು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ, ಲೋಕೊಪಯೋಗಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಶನಿವಾರ ಜರುಗಿದ ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಗುಣಮಟ್ಟದಲ್ಲಿ ರಾಜಿಯಾಗದೆ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಎಸ್​ಸಿಪಿ ಮತ್ತು ಟಿಎಸ್​ಪಿ ಯೋಜನೆಗಳ ಅನುದಾನ ಬಳಕೆಯಲ್ಲಿ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ಅನುದಾನವನ್ನು ಬಳಕೆ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬಳಕೆ ಮಾಡಿ, ವಿದ್ಯಾರ್ಥಿ ನಿಲಯಗಳಲ್ಲಿ ಸ್ಪಚ್ಚತೆ ಕಾಪಾಡಬೇಕು. ಉತ್ತಮ ಫಲಿತಾಂಶ ದಾಖಲಿಸಲು ವಿದ್ಯಾರ್ಥಿಗಳಿಗೆ ಪೂರ್ವ ತರಬೇತಿ ನೀಡಬೇಕು ಎಂದರು.

    ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುರುಷೋತ್ತಮ, ಲೋಕೊಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ರಾಜೇಶ, ಅಧೀಕ್ಷಕ ಇಂಜಿನಿಯರ್ ಶಿವಾನಂದ ನಾಯಕ, ಕಾರ್ಯಪಾಲಕ ಇಂಜಿನಿಯರ್ ವಿ.ಬಿ. ಯಮಕನಮರಡಿ ಹಾಗೂ ಜಿಲ್ಲೆಯ ಎಲ್ಲ ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಇಂಜಿನಿಯರ್​ಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್​ಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts