More

    ಸಿದ್ದರಾಮಯ್ಯ ಪರ ಮೊಳಗಿದ ಜಯಘೋಷ

    ತಿ.ನರಸೀಪುರ: ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವು ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು.


    ವರುಣ ಕ್ಷೇತ್ರ ವ್ಯಾಪ್ತಿಯ ಹೆಳವರಹುಂಡಿ ಹಾಗೂ ಪುರಸಭೆ ವ್ಯಾಪ್ತಿಯ ವಿನಾಯಕ ಕಾಲನಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


    ಸಿದ್ದರಾಮಯ್ಯ ಗೆಲುವು ಪ್ರಕಟವಾಗುತ್ತಿದ್ದಂತೆ ಮನೆಯಿಂದ ಹೊರಬಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಭಾವಚಿತ್ರ ಇರುವ ಬಾವುಟಗಳನ್ನು ಹಿಡಿದು ಸಿದ್ದರಾಮಯ್ಯ ಪರ ಘೋಷಣೆ ಕೂಗುತ್ತ ಬೈಕ್‌ಗಳಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.


    ವಿನಾಯಕ ಕಾಲನಿಯಲ್ಲಿ ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ಜಮಾವಣೆಯಾಗಿ ಪಟಾಕಿ ಸಿಡಿಸಿ ಜಯಘೋಷ ಕೂಗಿ ವಿಜಯೋತ್ಸವ ಆಚರಿಸಿದರು.


    ಟಿ.ಎಂ.ನಂಜುಂಡಸ್ವಾಮಿ ಮಾತನಾಡಿ, ಶೇ.40 ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಬಿಜೆಪಿ ಸರ್ಕಾರವನ್ನು ಜನರು ಕಿತ್ತೊಗೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಗೆಲ್ಲಿಸಿಕೊಟ್ಟಿದ್ದಾರೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲಿದ್ದು, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆ ಆಗಲಿದೆ ಎಂಬ ಸಮೀಕ್ಷೆಗೂ ಮೀರಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ಸುಭದ್ರ ಸರ್ಕಾರ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ರಾಜ್ಯ ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿದ್ದು ಕಳೆದ ಅವಧಿಯಲ್ಲಿ ನೀಡಿದ್ದ ಜನಪರ ಸರ್ಕಾರವನ್ನು ಈ ಬಾರಿಯೂ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಹೆಳವರಹುಂಡಿಯಲ್ಲಿ ವಿಜಯೋತ್ಸವ
    ವರುಣ ಕ್ಷೇತ್ರ ವ್ಯಾಪ್ತಿಯ ಹೆಳವರಹುಂಡಿ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂತೃಪ್ತಿ ಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ನಡೆಸಿದ ಷಡ್ಯಂತ್ರವನ್ನು ಜನರು ಬೆಂಬಲಿಸದೇ ಜನೋಪಯೋಗಿ ಕಾರ್ಯಕ್ರಮದ ಮೂಲಕ ಜನತೆಯ ಮನದಲ್ಲಿ ನೆಲೆಯೂರಿದ್ದ ಸಿದ್ದರಾಮಯ್ಯರಿಗೆ ಜನಾದೇಶ ನೀಡಿದ್ದಾರೆ. ಬರೀ ಹಣದಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕ್ಷೇತ್ರದ ಜನತೆ ತೋರಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲ ವರ್ಗಗಳ ನಾಯಕರಾಗಿದ್ದು, ಈ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ಮುಖಂಡರಾದ ಹೈದರಾಲಿ, ಮುನ್ನ, ರಂಗಸ್ವಾಮಿ, ವಿನೋದ, ಕೃಷ್ಣ, ರಾಮಣ್ಣ, ಮಹದೇವ, ನಂಜಯ್ಯ, ಶಾಂತಾ ಕುಮಾರಸ್ವಾಮಿ, ರಾಮು, ನಂದನ್, ಅಸ್ಲಾಂ ಪಾಷ, ಅಕ್ಬರ್ ಶಕೀಲ್, ಇಂತಿಯಾಜ್, ಸೋಮಣ್ಣ, ಕಾಂತರಾಜ ಅರಸ್, ನವೀನ, ದೇವರಾಜು, ವಿಜಿ, ಸಮಿಉಲ್ಲಾ ಇಫ್ರಾನ್, ಸಂಜು, ಆನಂದ, ಮೋಹನ್, ನಂಜುಂಡಸ್ವಾಮಿ, ಪೂಜಾರ್ ರೇವಣ್ಣ, ಕೆ ಗಣೇಶ್. ಎಂ.ಕೆ.ಸಹದೇವ್, ಮಿಥುನ್, ಅಮಾಸೆಗೌಡ, ರಘು, ಚೌಹಳ್ಳಿ ಮಲ್ಲೇಶ್, ನಾಗರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts