More

    ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

    ಮೈಸೂರು: ಪೌರತ್ವ ತಿದ್ದುಪಡಿ ಮಸೂದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

    ಬನ್ನಿಮಂಟಪ ಜಂಕ್ಷನ್‌ನ ಮೈಸೂರು-ಬೆಂಗಳೂರು ಮುಖ್ಯರಸ್ತೆ ಸಮೀಪ ಜಮಾವಣೆಗೊಂಡ ನೂರಾರು ಪ್ರತಿಭಟನಾಕಾರರು, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬನ್ನಿಮಂಟಪ ವೆಲ್‌ಫೇರ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಘೋಷಣಾ ಫಲಕಗಳು ರಾರಾಜಿಸಿದವು.

    ಸಿಎಎ ಜಾರಿ ಮಾಡುವ ಮೂಲಕ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳ ಹಿಂದು, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ, ಸಿಖ್ ಸಮುದಾಯಗಳ ವಲಸಿಗರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದ್ದು, ಆ ಮೂಲಕ ಮುಸ್ಲಿಮರನ್ನು ಕೈಬಿಡಲಾಗಿದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ಧರ್ಮನಿರಪೇಕ್ಷ ಪ್ರಜಾಪ್ರಭುತ್ವವಾದ ಭಾರತದಲ್ಲಿ ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡುವ ಕ್ರಮ ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.

    ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಸಿಎಎ, ಎನ್‌ಪಿಆರ್ ಮತರ‌್ತು ಎನ್‌ಆರ್‌ಸಿ ಜಾರಿಗೊಳಿಸುವ ಮೂಲಕ ಸಂವಿಧಾನ ವಿರೋಧಿ ನಿಲುವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದ್ದು, ಇದು ದೇಶದ ನಿವಾಸಿಗಳನ್ನು ವಿಭಜಿಸುವ ಕುತಂತ್ರವಾಗಿದೆ. ಜತೆಗೆ, ಒಂದು ಸಮುದಾಯವನ್ನು ಉದ್ದೇಶಪೂರ್ವಕವಾಗಿಯೇ ಗುರಿ ಮಾಡಲಾಗಿದೆ. ಒಂದು ಸಮುದಾಯವನ್ನು ಓಲೈಸಿ, ಮತ್ತೊಂದು ಸಮುದಾಯದ ವಿರುದ್ಧ ಬೆಂಕಿ ಹಚ್ಚುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.

    ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕಾರ 40-50 ವರ್ಷಗಳಷ್ಟು ಹಳೆಯ ಪೌರತ್ವ ದಾಖಲೆಗಳನ್ನು ಹೊಂದಿಲ್ಲದವರು ಅಕ್ರಮ ವಲಸಿಗರಾಗುತ್ತಾರೆ. ಬಹುತೇಕ ಬಡವರು, ದಲಿತರು, ಆದಿವಾಸಿಗಳು, ಭೂಹೀನ ಕೂಲಿಕಾರ್ಮಿಕರು, ವಲಸೆ ಕಾರ್ಮಿಕರು ಇಂತಹ ದಾಖಲೆಗಳಿಲ್ಲದೆ ಪರದೇಶಿಗಳಾಗುತ್ತಾರೆ. ದೇಶದ ಆರ್ಥಿಕ ಕುಸಿತ, ಉದ್ಯೋಗ ನಾಶ, ಬೆಲೆ ಏರಿಕೆ ಸಮಸ್ಯೆಯನ್ನು ಪರಿಹಾರ ಮಾಡಲು ವಿಫಲವಾದ ಕೇಂದ್ರ ಸರ್ಕಾರವು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಈ ಕುತಂತ್ರವನ್ನು ಮಾಡಿದೆ ಎಂದು ದೂರಿದರು.

    ಮುಖಂಡರಾದ ಪ್ರೊ.ಶಬೀರ್ ಮುಸ್ತಾಫ್, ಮೌಲಾನ ಮಹಮ್ಮದ್ ಜಕವುಲ್ಲಾ, ತನ್ವೀರ್ ಅಹಮ್ಮದ್, ಗೋವಿಂದರಾಜು, ಸರಗೂರು ನಟರಾಜು, ಚಂದ್ರಕಲಾ, ಸಂಘಟನೆ ಅಧ್ಯಕ್ಷ ಅಬ್ದುಲ್ ಖಾದರ್ ಸೇಠ್, ಮೊಹಮ್ಮದ್ ಮಮ್ತಾಜ್ ಅಹಮ್ಮದ್, ತಾಯೂರ್ ರೆಹಮಾನ್, ಯೂಸಫ್ ಜಿದ್ದಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts