More

    ಸಾಹಿತಿ ವಿಜಯಾ ದಬ್ಬೆ ಹೋರಾಟ ಇತರರಿಗೆ ಸ್ಫೂರ್ತಿ: ಕಾಳೇಗೌಡ ನಾಗವಾರ

    ಮೈಸೂರು: ಸಾಹಿತಿ ವಿಜಯಾ ದಬ್ಬೆ ಅವರು ತಪಸ್ವಿನಿಯ ರೀತಿ, ಪ್ರತಿ ಕ್ಷಣವನ್ನು ಪ್ರಾಮಾಣಿಕವಾಗಿ, ಜಾತ್ಯತೀತವಾಗಿ, ಸ್ವಾಭಿಮಾನಿಯಾಗಿ ಬದುಕಿದ್ದರು. ಇದಕ್ಕೆ ಪೂರಕವಾಗಿಯೇ ಬಹಳ ಬದ್ಧತೆಯ ಕೃತಿಗಳನ್ನು ಹೊರತಂದರು ಎಂದು ಪ್ರಗತಿಪರ ಚಿಂತಕ ಡಾ.ಕಾಳೇಗೌಡ ನಾಗವಾರ ಬಣ್ಣಿಸಿದರು.
    ಸಮತಾ ಅಧ್ಯಯನ ಕೇಂದ್ರದಿಂದ ವಿಜಯಾ ದಬ್ಬೆ ಸ್ಮರಣಾರ್ಥ ಗಂಗೋತ್ರಿ ಬಡಾವಣೆಯ ಯೂತ್ ಹಾಸ್ಟೆಲ್‌ನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಕಾವ್ಯ ಮತ್ತು ಕಥಾ ಕಮ್ಮಟಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
    ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಅನೇಕ ಸವಾಲುಗಳ ನಡುವೆಯೇ ಜೀವನದ ಪ್ರೀತಿಯನ್ನು ಕಂಡು, ಇತರರಿಗೂ ಉಣ ಬಡಿಸಿದರು. ಸಾಮಾಜಿಕ ಕಳಕಳಿಯಿಂದಲೇ ಮುನ್ನಲೆಗೆ ಬಂದ ಅವರ ಪ್ರಬುದ್ಧತೆಯನ್ನು ಕಂಡು ಹಾ.ಮಾ.ನಾಯಕರು ಕನ್ನಡ ಅಧ್ಯಯನ ಸಂಸ್ಥೆಗೆ ಆಯ್ಕೆ ಮಾಡಿದ್ದರು. ಅವರ ಹೋರಾಟದ ಜೀವನ ಎಂದೆಂದಿಗೂ ಮಾದರಿ ಎಂದರು.
    ಅಪಘಾತವೊಂದರಲ್ಲಿ ಪತಿ ಹಾಗೂ ಮಗಳನ್ನು ಕಳೆದುಕೊಂಡ ಬಳಿಕವೂ ಮೌನಿಯಾಗಿದ್ದುಕೊಂಡೇ ಅನೇಕ ಸಾಧನೆಗಳನ್ನು ಮಾಡಿದರು. ಮಹಿಳಾ ಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಕ್ರೀಡಾಪಟುಗಳು ದೆಹಲಿಯಲ್ಲಿ ಇಂದು ಹೋರಾಡುವುದನ್ನು ಕಂಡಾಗ ವಿಜಯಾ ದಬ್ಬೆ ಹೋರಾಟ ನೆನಪಿಗೆ ಬರುತ್ತವೆ. ಸ್ತ್ರೀ- ಪುರುಷ ಸಮಾನರು ಎಂಬ ಅಂಶವನ್ನು ಬೋಧನೆ ಮಾಡುವವರೇ ಅಂಧಕಾರದಲ್ಲಿ ಕುಳಿತರೆ, ದೆಹಲಿ ಪರಿಸ್ಥಿತಿ ಎಲ್ಲ ಕಡೆ ನಿರ್ಮಾಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
    ಕಮ್ಮಟಗಳಲ್ಲಿ ಬೇರೆ ಬೇರೆ ತಲೆಮಾರಿನವರು ಒಟ್ಟಾಗಿ ಸೇರಿ ಸಾಹಿತ್ಯ ಚಟುವಟಿಕೆ ನಡೆಯಬೇಕು. ಈ ಮೂಲಕ ಸರಳವಾದ ಪುಸ್ತಕಗಳನ್ನು ಹೊರತರಬೇಕು. ನಾವಿದ್ದು ಬಂದ ಕಡೆ ಸಿಗುವ ಅನುಭವ ಮತ್ತು ಬೇರೆಡೆ ಬಂದಾಗ ಸಿಗುವ ಅನುಭವ ಎರಡನ್ನೂ ತುಲನೆ ಮಾಡಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
    ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ.ಸಬಿಹಾ ಭೂಮಿಗೌಡ ಮಾತನಾಡಿ, ವಿಜಯಾದಬ್ಬೆ ಅವರು ಸೀವಾದಿ ವಿಮರ್ಶೆಯನ್ನು ವ್ಯಾಪಕವಾಗಿ ಮತ್ತು ಶಿಸ್ತುಬದ್ಧವಾಗಿ, ನಿಷ್ಠೆಯಿಂದ ಮಾಡಿದವರು. ಪಾಠ-ಪ್ರವಚನದ ಜತೆಗೆ ಸಮಾಜಮುಖಿಯಾಗಿಯೂ ಗುರುತಿಸಿಕೊಂಡಿದ್ದರು ಎಂದರು.
    ಜ್ಞಾನ, ಸಮಾಜಮುಖಿಯಾಗಿ ಕೆಲಸ ಮಾಡುವ ಹಣತೆಯಂತಿದ್ದ ವಿಜಯದಬ್ಬೆ ಅವರಂತೆ ಈ ಕಮ್ಮಟದಲ್ಲಿ ಭಾಗವಹಿಸಿರುವ ಎಲ್ಲರೂ ಅದರ ಕೊಂಡಿಯಾಗಬೇಕು. ನೀವು ಕೂಡ ಹೊಸ ಹಣತೆಯಾಗಿ ಬೆಳಗಬೇಕು ಎಂದು ಆಶಿಸಿದರು.
    ಕಥೆ ಮತ್ತು ಕವನ ಕಮ್ಮಟದಲ್ಲಿ ರಾಜ್ಯದ ವಿವಿಧೆಡೆಯಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೇಂದ್ರದ ಉಪಾಧ್ಯಕ್ಷೆ ಬಿ.ಸಿ.ಮಂಜುಳಾ, ಕಾರ್ಯದರ್ಶಿ ಡಾ.ಆರ್.ಸುನಂದಮ್ಮ, ಸಹಕಾರ್ಯದರ್ಶಿ ಪಿ.ಓಂಕಾರ್, ಖಜಾಂಚಿ ವಿಜಯರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts