More

    ಸಾಮಾಜಿಕ ಸ್ವಾಸ್ಥ್ಯ ಮುಖ್ಯ

    ಕಾನೂನು ಎಷ್ಟು ಇದ್ದರೂ, ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿ ನಾನಾ ರೀತಿಯಲ್ಲಿ ಅಪರಾಧ ಕೃತ್ಯಗಳನ್ನೆಸಗುವವರು ಯಾವಾಗಲೂ ಇದ್ದೇ ಇರುತ್ತಾರೆ. ಮಹಿಳೆಯರ ರಕ್ಷಣೆ ಮತ್ತು ಸುರಕ್ಷತೆ ಈಗ ಸರ್ಕಾರಗಳ ಆದ್ಯತೆಯ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಕಾನೂನುಗಳನ್ನೂ ರೂಪಿಸಲಾಗುತ್ತದೆ. ಆದರೂ ಕೆಲ ಅಪರಾಧಗಳು ನಿರೀಕ್ಷಿಸಿದ ಮಟ್ಟಕ್ಕೆ ನಿಯಂತ್ರಣಕ್ಕೆ ಬರುವುದಿಲ್ಲ. ಮಹಿಳೆಯರ ಕಳ್ಳಸಾಗಣೆ ಈ ಸಮಸ್ಯೆಗಳಲ್ಲಿ ಒಂದು. ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ ದಿನಕ್ಕೆ ಏನಿಲ್ಲೆಂದರೂ ಎರಡುಮೂರು ಮಹಿಳೆಯರನ್ನು ಈ ಜಾಲದಲ್ಲಿ ಸಿಲುಕಿಸಲಾಗುತ್ತದೆ. ಆದರೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪ್ರಕರಣಗಳು ಹತ್ತಿಪ್ಪತ್ತು ಮಾತ್ರ. ಅಂದರೆ, ನಡೆಯವ ಪ್ರಕರಣಗಳಿಗೂ, ಅಧಿಕೃತವಾಗಿ ದಾಖಲಾಗುವ ದೂರುಗಳಿಗೂ ಅಜಗಜಾಂತರ. ಮಾನಮರ್ಯಾದೆ, ಬೆದರಿಕೆ, ವೈಯಕ್ತಿಕ ಕಾರಣ, ಬ್ಲಾ್ಯಕ್​ವೆುೕಲ್ ಹಿನ್ನೆಲೆಯಲ್ಲಿ ಬಹುತೇಕರು ಕೇಸ್ ದಾಖಲಿಸಲು ಮುಂದಾಗುವುದಿಲ್ಲ. ಇದರಿಂದ ಇಂಥ ದಂಧೆಕೋರರಿಗೆ ಲಗಾಮು ಹಾಕಲು ಸಾಧ್ಯವಾಗುವುದಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುವ ಖದೀಮರು, ನೌಕರಿ ಆಸೆ ತೋರಿಸಿ ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳುತ್ತಾರೆ. ಈ ಕಾರ್ಯದಲ್ಲಿ ಮಧ್ಯವರ್ತಿಗಳು ನೆರವಾಗುತ್ತಾರೆ; ಅವರಿಗೆ ಕಮಿಷನ್ ದೊರೆಯುತ್ತದೆ. ನಂತರದಲ್ಲಿ ಮಹಿಳೆಯರನ್ನು ಬೇರೆ ಬೇರೆ ವಿಧಾನಗಳ ಮೂಲಕ ವಿದೇಶಕ್ಕೆ ಕರೆದೊಯ್ಯಲಾಗುತ್ತದೆ. ಇಂಥವರಲ್ಲಿ ಹೆಚ್ಚಿನವರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಲಾಗುತ್ತದೆ ಎಂಬುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ. ಇನ್ನು ಕೆಲವರನ್ನು ಪ್ರೀತಿಪ್ರೇಮದ ಜಾಲದಲ್ಲಿ ಹೆಸರಲ್ಲಿ ಮರುಳುಮಾಡಿ ನಂತರ ಯಾವುದೋ ಜಾಲದಲ್ಲಿ ಸಿಲುಕಿಸಿ ಕೈತೊಳೆದುಕೊಳ್ಳುತ್ತಾರೆ. ಹೀಗೆ ಕಳ್ಳಸಾಗಣೆಗೆ ಒಳಗಾಗುವ ಪ್ರತಿ ಮೂವರಲ್ಲಿ ಒಬ್ಬರು ಅಪ್ರಾಪ್ತರು ಎಂಬುದು ಕಳವಳಕಾರಿ ಸಂಗತಿ. ಭಾರತವನ್ನು ತೆಗೆದುಕೊಂಡರೆ, ತೆಲಂಗಾಣದಿಂದ ಹೆಚ್ಚು ಮಾನವ ಕಳ್ಳಸಾಗಣೆ ನಡೆಯುತ್ತಿದ್ದು, ಅಸ್ಸಾಂ, ಜಾರ್ಖಂಡ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಒಡಿಶಾ ಮತ್ತು ಕರ್ನಾಟಕ ನಂತರದ ಸ್ಥಾನಗಳಲ್ಲಿವೆ.

    ಇಂಥ ಅಪರಾಧಗಳನ್ನು ತಡೆಯುವಲ್ಲಿ ಸರ್ಕಾರ, ಪೊಲಿಸ್ ಇಲಾಖೆ ಪಾತ್ರ ಮುಖ್ಯವಾದುದು. ಇಂಥ ಪ್ರಕರಣ ವರದಿಯಾದಾಕ್ಷಣ ತನಿಖೆಗೆ ಮುಂದಾದರೆ ಖದೀಮರ ಹೆಡೆಮುರಿಕಟ್ಟಬಹುದು. ಇದಲ್ಲದೆ, ಮಾನವ ಕಳ್ಳಸಾಗಣೆ ವಿದೇಶಗಳಿಗೂ ವಿಸ್ತರಿಸುವುದರಿಂದಾಗಿ, ಅಂತಾರಾಷ್ಟ್ರೀಯ ಕಾನೂನು ಪ್ರಕ್ರಿಯೆ ಜ್ಞಾನವೂ ಬೇಕಾಗುತ್ತದೆ. ಹೀಗಾಗಿ ಇಂಥ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಪೊಲೀಸರಿಗೆ ಕಾಲಕಾಲಕ್ಕೆ ಸಮರ್ಪಕ ತರಬೇತಿಯೂ ಅಗತ್ಯವಾಗುತ್ತದೆ. ಇದರ ಜತೆಗೆ, ಜನರಲ್ಲಿ ಸಹ ಜಾಗೃತಿಯ ಅಗತ್ಯವಿದೆ. ಉದ್ಯೋಗ ಅಥವಾ ಬೇರೆ ಏನೋ ಆಮಿಷ ತೋರಿದರೆಂದು ಅಪರಿಚಿತ ವ್ಯಕ್ತಿಗಳನ್ನು ಹಿಂದೆಮುಂದೆ ನೋಡದೆ ನಂಬಬಾರದು. ಯಾವುದೇ ವಿಷಯವನ್ನು ಮನವರಿಕೆ ಮಾಡಿಕೊಳ್ಳಬೇಕು. ಈಗಂತೂ ಮಾಹಿತಿಗಾಗಿ ತಂತ್ರಜ್ಞಾನದ ನೆರವು ಕೂಡ ಪಡೆಯಬಹುದು. ಏನಾದರೂ ಅನುಮಾನ ಬಂದರೆ ಪೊಲೀಸ್ ನೆರವನ್ನು ಕೇಳಬೇಕು. ಇದೂ ಅಲ್ಲದೆ, ಅನೇಕ ಜನರು ಪ್ರೇಮಪ್ರೀತಿ ಹೆಸರಿನಲ್ಲಿ ಮೋಸಕ್ಕೆ ಒಳಗಾಗುತ್ತಾರೆ. ಸ್ವಲ್ಪ ಹುಷಾರಿನಿಂದ ಇದ್ದರೆ ಇಂಥ ಅಪಾಯದಿಂದ ಪಾರಾಗಬಹುದು. ಮಹಿಳೆಯರಿಗೆ ರಕ್ಷಣೆ ಮತ್ತು ಸುರಕ್ಷತೆ ಇಲ್ಲದಿದ್ದರೆ ಆ ಸಮಾಜ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅದರಲ್ಲೂ ಈಗಿನ ದಿನಮಾನದಲ್ಲಿ ಮಹಿಳೆಯರು ನೌಕರಿ ಮತ್ತಿತರ ಕಾರಣಕ್ಕಾಗಿ ಮನೆಯಿಂದ ಹೊರ ಹೋಗಬೇಕಾದ ಸನ್ನಿವೇಶವಿದೆ. ಮಹಿಳೆಯನ್ನು ಪೂಜ್ಯಭಾವದಿಂದ ನೋಡುವ ಭಾರತದಲ್ಲಿ ಮಾನವ ಕಳ್ಳಸಾಗಣೆಯಂಥ ಅಪಸವ್ಯ ನಿಲ್ಲಲೆಂಬುದೇ ಆಶಯ. ಇದು ಸರ್ಕಾರ ಮತ್ತು ಸಮಾಜದ ಜಂಟಿ ಜವಾಬ್ದಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts