More

    ಸಮೃದ್ಧಿ-ಸಂತೃಪ್ತಿ ಮಹಿಳಾ ಸಮಾವೇಶ ನಾಳೆ

    ಹುಬ್ಬಳ್ಳಿ: ಮಹಿಳೆಯರಲ್ಲಿನ ಪ್ರಾಮಾಣಿಕತೆ ಹಾಗೂ ನಾಯಕತ್ವದ ಗುಣ ಬಳಸಿಕೊಂಡು ನವೀಕರಿಸಬಹುದಾದ ಇಂಧನ ಮೂಲ ಸೌರಶಕ್ತಿ ಬಳಕೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಸಲುವಾಗಿ ಸೆಲ್ಕೋ ಸೋಲಾರ್ ಲೈಟ್ ಲಿಮಿಟೆಡ್​ನಿಂದ ಮಹಿಳಾ ಯಶೋಗಾಥೆಗಳ ರಾಷ್ಟ್ರೀಯ ಸಮಾವೇಶ ‘ಸಮೃದ್ಧಿ- ಸಂತೃಪ್ತಿ’ ಕಾರ್ಯಕ್ರಮ ಜ. 25ರಂದು ಧಾರವಾಡದ ಸತ್ತೂರ ಬಳಿಯ ಟ್ರಾವೆಲ್ ಇನ್ ಹೋಟೆಲ್​ನಲ್ಲಿ ಏರ್ಪಾಟಾಗಿದೆ.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೆಲ್ಕೋ ಫೌಂಡೇಷನ್ ಕಾರ್ಯಕ್ರಮ ವ್ಯವಸ್ಥಾಪಕಿ ಭಾರತಿ ಹೆಗಡೆ, ಸೌರಶಕ್ತಿ ಆಧಾರಿತ ಸಂಶೋಧನಾ ಸಂಸ್ಥೆ ಸೆಲ್ಕೋ ವತಿಯಿಂದ ಸಮಾವೇಶ ಏರ್ಪಡಿಸಲಾಗಿದೆ. ಪರಿಸರ ಸ್ನೇಹಿ ಸೌರ ಶಕ್ತಿಯಿಂದ ನಿತ್ಯ ಬಳಕೆಯ ಅಷ್ಟೇ ಅಲ್ಲ ಜೀವನಾಧಾರಕ್ಕಾಗಿ ವ್ಯವಹಾರ ನಡೆಸಲು ಯಂತ್ರಗಳ ಸಂಶೋಧನೆ ಹಾಗೂ ಬಳಕೆಗೂ ಅವಕಾಶ ಇಲ್ಲಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಆರ್ಥಿಕ ಸಬಲತೆಗಾಗಿ ಮಹಿಳಾ ವ್ಯವಹಾರ ಬಂಧುಗಳ ಸಮಾವೇಶ ಇದಾಗಿದೆ ಎಂದರು.

    ಸೆಲ್ಕೋ ಕಂಪನಿಯಲ್ಲಿ ಈಗಾಗಲೇ ಕರ್ನಾಟಕದ 190 ಸೇರಿ ಒಟ್ಟು 225 ಮಹಿಳಾ ವ್ಯವಹಾರ ಬಂಧುಗಳಿದ್ದಾರೆ. ಅವರಲ್ಲಿ 200ಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ. ಬಂಧುಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕರವಾಗಿ ಬೆಳವಣಿಗೆ ಹೊಂದಲು ಮಹಿಳೆಗೆ ಸೆಲ್ಕೋ ನೆರವಾಗಲಿದೆ. ಮಹಿಳಾ ವ್ಯವಹಾರ ಬಂಧುಗಳು ಯಾರಾದರೂ ಆಗಬಹುದು ಎಂದರು.

    ಆರಂಭದಲ್ಲಿ ತರಬೇತಿ ಕೊಟ್ಟು ನಂತರ ಮಹಿಳೆಯರನ್ನು ಕ್ಷೇತ್ರ ದರ್ಶನಕ್ಕೆ ಕರೆದೊಯ್ಯಲಾಗುತ್ತದೆ. ವಿದ್ಯುತ್ ಇಲ್ಲದ ಗ್ರಾಮಗಳಿಗೆ ಸೌರಶಕ್ತಿ ಒದಗಿಸುವುದಷ್ಟೇ ಅಲ್ಲ, ಯಾವುದೇ ಹೆಚ್ಚಿನ ಹೊರೆ ಇಲ್ಲದೇ ವಿದ್ಯುತ್ ಸಂಪರ್ಕ ಇರುವ ಮನೆ ಹಾಗೂ ಯಂತ್ರಗಳಿಗೂ ಸೌರ ಶಕ್ತಿ ಅಳವಡಿಕೆಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಬಗ್ಗೆ ಸಮಾವೇಶ ಬೆಳಕು ಚೆಲ್ಲಲಿದೆ ಎಂದರು.

    ಉದ್ಘಾಟನೆ: ಜ. 25ರಂದು ಬೆಳಗ್ಗೆ 10.30ಕ್ಕೆ ಸಮಾವೇಶ ಉದ್ಘಾಟನೆ ನಡೆಯಲಿದ್ದು, ಜಿಲ್ಲಾಧಿಕಾರಿ ದೀಪಾ ಚೋಳನ್, ಸೆಲ್ಕೋ ಚೇರ್ಮನ್ ಡಾ. ಹರೀಶ್ ಹಂದೆ, ಸಿಇಒ ಮೋಹನ ಭಾಸ್ಕರ ಹೆಗಡೆ, ಇಂಡಿಯಾ- ಮೊಯಿಲಿಸ್ ಸಿಇಒ ಮನಿಷಾ ಗಿರೋತ್ರಾ, ಪ್ರಗತಿಪರ ಕೃಷಿ ಉದ್ಯಮಿ ಕವಿತಾ ಮಿಶ್ರಾ, ಧಾರವಾಡ ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ ಪಾಲ್ಗೊಳ್ಳುವರು.

    ನಂತರ ನಡೆಯುವ ಗೋಷ್ಠಿಗಳಲ್ಲಿ ಸೌರ ಉದ್ಯಮಿಗಳಾದ ಪ್ರೀತಿ ಜೋಶಿ, ನಿರ್ಮಲಾ ಗಾಣಾಪುರ, ರಾಜೇಶ್ವರಿ ಕುಲಗೋಡ, ಅಶ್ವಿನಿ, ತುಮಕೂರಿನ ಧರ್ಮ ಟೆಕ್ನಾಲಜಿಸ್ ಸಂಸ್ಥಾಪಕಿ ಶೈಲಜಾ ವಿಠ್ಠಲ, ರ್ಯಾಪಿಡ್ ಸಂಸ್ಥೆಯ ವಾಣಿ ಪುರೋಹಿತ್, ಸೇಫ್ ಹ್ಯಾಂಡ್ಸ್​ನ ಶ್ರಾವಣಿ ಪವಾರ್, ಕೆವಿಜಿಬಿ ಚೇರ್ಮನ್ ಗೋಪಿಕೃಷ್ಣ, ಮಹಿಳಾ ಹೌಸಿಂಗ್ ಸೇವಾ ಟ್ರಸ್ಟ್ ನಿರ್ದೇಶಕಿ ಬಿಜಲ್ ಬ್ರಹ್ಮಭಟ್, ಸ್ವಾತಿ ಭೊಗ್ಲೆ, ಇತರರು ಭಾಗವಹಿಸುವರು ಎಂದರು.

    ಸೆಲ್ಕೋ ಪ್ರಧಾನ ವ್ಯವಸ್ಥಾಪಕ ಜಗದೀಶ ಪೈಲೂರ, ಎಜಿಎಂ ಸುರೇಶ ಸಾವಳಗಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಹೆಗಡೆ, ಗುರುಮೂರ್ತಿ ಹೆಗಡೆ ಇತರರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts