More

    ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಚಾಮರಾಜನಗರ: ತಾಲೂಕಿನ ಜಾಗೇರಿಯ ಟಿ.ಜಿ.ದೊಡ್ಡಿ ಗ್ರಾಮದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

    ಕೊಳ್ಪಳೇಗಾಲ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದಲ್ಲಿ ಸೇರಿದ ರೈತ ಸಂಘದ ಪದಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಅಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಮಾತನಾಡಿ, ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಟಿ.ಜಿ.ದೊಡ್ಡಿ ಗ್ರಾಮದಲ್ಲಿ ಸದ್ಯ ಒಂದು 100 ಕೆ.ವಿ ಸಾಮಾಥ್ಯವುಳ್ಳ ಟಿ.ಸಿ ಅಳವಡಿಸಲಾಗಿದೆ. ಇದರಿಂದ ಕೇವಲ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಆಗುತ್ತಿದ್ದು, ಗ್ರಾಮದ ಮನೆಗಳಿಗೆ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಇದರಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ, ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಪ್ರತ್ಯೇಕವಾಗಿ 5 ಕೆ.ವಿ ಸಾಮರ್ಥ್ಯದ ಟಿಸಿ ಅಳವಡಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

    ಟಿ.ಜಿ ದೊಡ್ಡಿಯ 6 ಜನ ಯೋಧರು ದೇಶ ಸೇವೆಯಲ್ಲಿ ತೊಡಗಿದ್ದಾರೆ. ಅವರ ಕುಟುಂಬದವರು ವಾಸಿಸುವ ಈ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇರುವುದು ಬೇಸರದ ಸಂಗತಿ ಎಂದು ಪ್ರತಿಭಟನಾಕಾರರು ಹೇಳಿದರು.

    ಪ್ರತಿಭಟನಾ ಸ್ಥಳಕ್ಕೆ ಸೆಸ್ಕ್ ಪ್ರಭಾರ ಇಇ ಲಿಂಗರಾಜು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ನಿಮ್ಮ ಬೇಡಿಕೆ ಕುರಿತು ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಆನಂತರ ರೈತರು ಪ್ರತಿಭಟನೆ ಕೈಬಿಟ್ಟರು. ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಮಹದೇವ, ಪದಾಧಿಕಾರಿಗಳಾದ ಜೋಯೆಲ್ ಪಿ.ನಿವಾಸ್, ಮುರುಗನ್, ಶಕ್ತಿವೇಲು, ಮಾದೇಶ್, ಶಿವಕುಮಾರ್, ಲಕ್ಷ್ಮೀ, ರಾಸಮ್ಮ, ಪಳನಿಯಮ್ಮ, ಪ್ರಿಯಾ, ಮಹಾಲಕ್ಷ್ಮಿ, ತಿರುಚಾಂಗ, ಹಂಸ, ಅಮುದಾ, ಮಣಿ, ಶಿವ, ಮಾದು, ಲಕ್ಷ್ಮಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts