More

    ಸಭೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಕೃಷಿ ಅಧಿಕಾರಿಗಳಿಗೆ ತಾಕೀತು

    ಚಿತ್ರದುರ್ಗ: ಬಿತ್ತನೆ ಬೀಜದ ಗುಣಮಟ್ಟ ಖಾತ್ರಿ ಬಳಿಕವೇ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಮಾರಾಟಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಡಿಸಿ ಕಚೇರಿಯಲ್ಲಿ ಸೋಮವಾರ ಮುಂಗಾರು ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಕುರಿತಂತೆ ಕೃಷಿ, ತೋಟಗಾರಿಕೆ,ಬೀಜನಿಗಮ,ಎಣ್ಣೆ ಕಾಳು ಅಭಿವೃದ್ಧಿ ನಿಗಮ, ರಸಗೊಬ್ಬರ ಪೂರೈಕೆದಾರರು ಹಾಗೂ ರೈತರೊಂದಿಗೆ ಸಭೆ ನಡೆಸಿದ ಅವರು, ಕೃಷಿ ಆಧಾರಿತ ಚಿತ್ರದುರ್ಗ ಜಿಲ್ಲೆಯಲ್ಲಿ ಸಣ್ಣ,ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯ ಲ್ಲಿದ್ದಾರೆ. ನಿಗದಿತ ಸಮಯಕ್ಕೆ ಬೀಜ,ಗೊಬ್ಬರ,ಕೀಟನಾಶಕ ಸೇರಿ ಅಗತ್ಯ ಕೃಷಿ ಪರಿಕರಗಳು ದೊರೆಯ ಬೇಕೆಂದರು.
    ಶೇಂಗಾ ದರ ಇಳಿಕೆಗೆ ಶಿಫಾರಸು:
    ಕಳೆದ ಬಾರಿ ಕರ್ನಾಟಕ ಎಣ್ಣೆಕಾಳು ಬೆಳಗಾರರ ಸಹಕಾರಿ ಒಕ್ಕೂಟ(ಕೆಒಎಫ್)ವಿತರಿಸಿದ್ದ ಶೇಂಗಾ ಬಿತ್ತನೆ ಬೀಜದಲ್ಲಿ ಕಳಪೆ ಕಂಡು ಬಂದಿತ್ತು. ಮಾರುಕಟ್ಟೆ ದರಕ್ಕಿಂತ ಕೆಒಎಫ್ ಬಿತ್ತನೆ ಬೀಜದ ದರವೂ ಅಧಿಕವಿದೆ. ಮಾರುಕಟ್ಟೆಯಲ್ಲಿ ಬಿತ್ತನೆ ಶೇಂಗಾ ಬೀಜ ಕ್ವಿಂಟಾಲ್‌ಗೆ 5- 6 ಸಾವಿರ ರೂ.ಇದ್ದರೆ,ಕೆ.ಒ.ಎಫ್ 9 ಸಾವಿರ ರೂ.ನಿಗದಿಪಡಿಸಿದೆ ಎಂದು ರೈತ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
    ಕೃಷಿ ಇಲಾಖೆ ರಾಜ್ಯಮಟ್ಟಕ್ಕೆ ಅನ್ವಯಿಸುವಂತೆ ಬಿತ್ತನೆ ಶೇಂಗಾ ಬೀಜದ ದರ ನಿಗದಿ ಪಡಿಸಿ ಟೆಂಡರ್ ಕರೆಯುತ್ತದೆ. ಈ ಬಾರಿ ಪ್ರತಿ ಕೆ.ಜಿ.ಗೆ 84 ರೂ.ಇಲಾಖೆ ನಿಗದಿಯಾಗಿದೆ. ಕೆಒಎಫ್,ರಾಜ್ಯಬೀಜ ನಿಗಮ ಹಾಗೂ ಖಾಸಗಿ ಕಂಪನಿಗಳು ಟೆಂಡರ್ ಪಡೆದಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶ್ ಕುಮಾರ್ ಹೇಳಿದರು.
    ಜಿಲ್ಲೆಗೆ ಅಗತ್ಯ ಬಿತ್ತನೆ ಬೀಜವನ್ನು ಕೆಒಎಫ್ ಸರಬರಾಜು ಮಾಡುತ್ತದೆ. ರಾಜ್ಯಸರ್ಕಾರ ಪ್ರತಿ ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ಖರೀ ದಿಗೆ ಸಾಮಾನ್ಯ ರೈತರಿಗೆ 1400 ರೂ.ಹಾಗೂ ಎಸ್‌ಸಿ ಹಾಗೂ ಎಸ್.ಟಿ ರೈತರಿಗೆ 2000 ರೂ.ಸಬ್ಸಡಿ ನೀಡುತ್ತದೆ ಎಂದರು. ಕೆಒಎಫ್ ಬಿತ್ತ ನೆ ಬೀಜದ ಗುಣಮಟ್ಟದ ಬಗ್ಗೆ ಹೆಚ್ಚಿನ ಪರಿಶೀಲಿಸಿ,ಕಳಪೆ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಡಿಸಿ ಸೂಚಿಸಿದರು.
    ರೈತರ ಅಭಿಪ್ರಾಯದಂತೆ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜ ದೊರೆಯುತ್ತಿವೆ. ಕ್ವಿಂಟಾಲ್‌ಗೆ 6500 ರೂ.ನಿಗದಿ ಪಡಿಸಿ,ಸಬ್ಸಿಡಿ ಸೌಲಭ್ಯದೊಂದಿಗೆ ಮಾರಾಟ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಡಿಸಿ ಹೇಳಿದರು.
    ನಕಲಿ ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು. ಇತರೆ ಗೊಬ್ಬರ ಕೊಳ್ಳುವಂತೆ ವರ್ತಕರು ರೈತರನ್ನು ಒತ್ತಾಯಿಸಬಾರದು. ಜಿಲ್ಲೆಯಲ್ಲಿ ಇರುವ ರೈತ ಉತ್ಪಾದಕ ಸಂಘಗಳು, ವ್ಯವಸಾಯೋತ್ಪನ್ನ ಸಹಕಾರಿ ಸಂಘಗಳ ಮೂಲಕ ಗೊಬ್ಬರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.
    ಹೊಸದುರ್ಗ,ಹೊಳಲ್ಕೆರೆ ತಾಲೂಕುಗಳ 10 ಸಾವಿರ ಎಕರೆ ತೆಂಗು ಬೆಳೆಗೆೆ ತಗುಲಿರುವ ಕಪ್ಪು ತಲೆ ಕಂಬಳಿ ಹುಳು ಬಾಧೆ ನಿಯಂತ್ರಣಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿಸಿ ಹೇಳಿದರು.
    ತೋಟಗಾರಿಕೆ ಇಲಾಖೆ ಹಾನಿ ಪ್ರದೇಶದ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ ಹೇಳಿದರು. ರಮೇಶ್‌ಕುಮಾರ್ ಮಳೆ ಹಾಗೂ ಬಿತ್ತನೆ ವಿವರ ತಿಳಿಸಿದರು. ಅಗತ್ಯ ಬಿತ್ತನೆ ಬೀಜ,ರಸಗೊಬ್ಬರ ಸಂಗ್ರಹವಿದೆ. ಸಾಮಾಜಿಕ ಅರಣ್ಯ ವಿಭಾಗದಿಂದ ನರೇಗಾದಡಿ ತೇಗ,ಹುಣಸೆ,ಸಿಲ್ವರ್,ಮಹಾಗನಿ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದರು.
    ಆಯಾ ತಾಲೂಕಿನ ವಿವಿಧ ಬೆಳೆಗಳ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದ ರೈತ ಮುಖಂಡರು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರಕ್ಕೆ ಡಿಸಿಗೆ ಮನವಿ ಮಾಡಿದರು. ರೈತ ಮುಖಂಡರು ಹಾಗೂ ಅಧಿಕಾರಿಗಳಿದ್ದರು.
    (ಡಿಸಿ ಮಗ್ ಶಾಟ್)


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts