More

    ಸನ್ನಡತೆ ತೋರಿದರೆ ರೌಡಿ ಪಟ್ಟಿಯಿಂದ ಖುಲಾಸೆ

    ಧಾರವಾಡ: ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ತೆರೆಯಲಾಗಿರುವ ರೌಡಿಶೀಟರ್ ಪಟ್ಟಿಯನ್ನು ಅವರು ತೋರಿದ ಸನ್ನಡತೆ ಹಾಗೂ ಪುನಃ ಪ್ರಕರಣಗಳಲ್ಲಿ ಭಾಗಿಯಾಗದ ಬಗ್ಗೆ ಪರಿಶೀಲಿಸಿದ ಬಳಿಕ , ರೌಡಿಶೀಟರ್ ಪಟ್ಟಿಯಿಂದ ತೆಗೆಯಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದರು.

    ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಮಟ್ಟದ ರೌಡಿಶೀಟರ್​ಗಳ ಪರೇಡ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 499 ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಇಂಥವರು ಮತ್ತೆ ಅಪರಾಧಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡುವುದು ಹಾಗೂ ಅಪರಾಧ ಕೃತ್ಯಗಳಿಂದ ಅವರು ದೂರ ಇದ್ದಾರೆಯೇ ಎನ್ನುವುದನ್ನು ಪರಿಶೀಲಿಸಲು ಈ ಪರೇಡ್ ನಡೆಸಲಾಗಿದೆ ಎಂದರು.

    ಅಳ್ನಾವರದಲ್ಲಿ 45, ಅಣ್ಣಿಗೇರಿಯಲ್ಲಿ 55, ಧಾರವಾಡ ಗ್ರಾಮೀಣ 43, ಗರಗ 53, ಗುಡಗೇರಿ 34, ಕಲಘಟಗಿ 95, ಕುಂದಗೋಳ 40, ನವಲಗುಂದ 69, ಹುಬ್ಬಳ್ಳಿ ಗ್ರಾಮೀಣ 64 ಮತ್ತು ಮಹಿಳಾ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 499 ವ್ಯಕ್ತಿಗಳ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಉಪಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ನಾಯ್ಕ ಮಾಹಿತಿ ನೀಡಿದರು.

    ವಿವಿಧ ಠಾಣೆಗಳ ಇನ್​ಸ್ಪೆಕ್ಟರ್​ಗಳಾದ ಶಿವಾನಂದ ಕಮತಗಿ, ವಿಜಯ ಬಿರಾದಾರ, ಬಸವರಾಜ ಕಲ್ಲಮ್ಮನವರ, ರಂಗನಾಥ ನೀಲಮ್ಮನವರ, ಬಸವರಾಜ ಕಾಮನಬೈಲ್; ಪಿಎಸ್​ಐಗಳಾದ ಮಹೇಂದ್ರಕುಮಾರ ನಾಯಕ, ನವೀನ ಜಕ್ಕಲಿ, ಪ್ರಸಾದ ಫಣೇಕರ, ಎಸ್. ದೇವಾನಂದ, ಎಸ್.ಬಿ. ಚಲವಾದಿ, ಲಾಲಸಾಬ ಜುಲಕಟ್ಟಿ ಹಾಗೂ ಎಸ್.ಆರ್. ಕಣವಿ ಇದ್ದರು.

    ರೈತ ಹೋರಾಟಗಾರರು ಪರೇಡ್​ಗೆ?: ಪರೇಡ್​ಗೆ ರೈತ ಹೋರಾಟಗಾರರನ್ನು ರೌಡಿಗಳಂತೆ ಕರೆಸಲಾಗಿತ್ತು. ನವಲಗುಂದದ ರಮೇಶ ಹಲಗತ್ತಿ ಮತ್ತು ದೇವೇಂದ್ರಪ್ಪ ಹಳ್ಳದ ಪೊಲೀಸರ ಸೂಚನೆ ಮೇರೆಗೆ ಪರೇಡ್​ಗೆ ಬಂದಿದ್ದರು. ಇಲ್ಲಿಗೆ ಬಂದಾಗಲೇ ಇದು ರೌಡಿಶೀಟರ್ ಪರೇಡ್ ಎಂಬುದು ಅವರಿಗೆ ಗೊತ್ತಾಗಿತ್ತು. ನಾವು ರೈತ ಹೋರಾಟಗಾರರು. ಕಳಸಾ-ಬಂಡೂರಿ ಹೋರಾಟದ ಸಂದರ್ಭದ ಕೇಸ್​ಗಳಿವೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಎಸ್ಪಿ ಅವರ ವಿಚಾರಣೆ ಕೈ ಬಿಟ್ಟರು. ಇನ್ನು ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ರಮೇಶ ಹಲಗತ್ತಿ, ಎಸ್ಪಿ ಕರೆದಿದ್ದಾರೆ ಬನ್ನಿ ಎಂದು ಮಾತ್ರ ನವಲಗುಂದ ಪೊಲೀಸರು ಹೇಳಿದ್ದರು. ಹೋರಾಟದಲ್ಲಿರುವ ಕಾರಣ ಯಾವುದೋ ವಿಷಯಕ್ಕೆ ಕರೆದಿರಬಹುದು ಎಂದುಕೊಂಡು ಬಂದಿದ್ದೆವು. ಇಲ್ಲಿ ಬಂದ ಬಳಿಕವೇ ನಿಜ ಸ್ಥಿತಿ ಗೊತ್ತಾಯಿತು. ನಾವು ಯಾರ ಮೇಲೆಯೂ ದಬ್ಬಾಳಿಕೆ ಮಾಡಿಲ್ಲ. ನೀರಿಗಾಗಿ ಹೋರಾಟ ಮಾಡಿದ್ದೇವೆ. ಸರ್ಕಾರ ನಮ್ಮ ಮೇಲಿನ ಕೇಸ್​ಗಳನ್ನು ವಾಪಸ್ ಪಡೆದುಕೊಂಡಿದ್ದಾಗಿ ಎಂದು ಹೇಳುತ್ತಲೇ ಇದೆ. ಆದರೂ ಪುನಃ ಪುನಃ ಪೊಲೀಸರು ಕರೆಯುತ್ತಲೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts