More

    ಸಂವಿಧಾನ ಸಂರಕ್ಷಿಸುವ ಸಂಕಲ್ಪ ತೊಡಬೇಕಿದೆ

    ಅರಕಲಗೂಡು: ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲ ಹಕ್ಕುಗಳನ್ನು ಕಲ್ಪಿಸಿರುವ ಸಂವಿಧಾನ ಅಪಾಯದ ಅಂಚಿನಲ್ಲಿದ್ದು ಎಲ್ಲರೂ ಸಂರಕ್ಷಣೆ ಮಾಡುವ ಸಂಕಲ್ಪ ತೊಡಬೇಕು ಎಂದು ಹಾಸನ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರೊ.ಮಹಾಲಿಂಗಯ್ಯ ಸಲಹೆ ನೀಡಿದರು.


    ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಅಂಬೇಡ್ಕರ್ ವಾದ ದಲಿತ ಸಂಘರ್ಷ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 74ನೇ ವರ್ಷದ ಸಂವಿಧಾನ ಸಂರಕ್ಷಣಾ ಸಂಕಲ್ಪ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


    ಸಂವಿಧಾನ ಹೃದಯ ಇದ್ದಂತೆ. ಸಂವಿಧಾನ ಇಲ್ಲವಾದರೆ ಒಂದು ದೇಶ ಇರಲು ಸಾಧ್ಯವಿಲ್ಲ. ಸಂವಿಧಾನದ ಮಹತ್ವ ಗೊತ್ತಿಲ್ಲದೆ ಕೆಲವರು ಅಗೌರವದ ವರ್ತನೆ ತೋರುತ್ತಾರೆ. ಬಹುತೇಕರಿಗೆ ಸಂವಿಧಾನದ ಅರಿವಿಲ್ಲ. ದಲಿತರಿಗೋಸ್ಕರ ಮಾತ್ರ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎನ್ನುವ ಭಾವನೆ ಬಂದಿದೆ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಕೇವಲ ದಲಿತರಿಗಷ್ಟೆ ಅಲ್ಲದೆ ಎಲ್ಲರೂ ಮೀಸಲಾತಿ ಸೌಲಭ್ಯ ದಕ್ಕಿದೆ. ಸಂವಿಧಾನ ಸಂರಕ್ಷಣೆ ಕೇವಲ ದಲಿತರ ಕೆಲಸ ಅಲ್ಲ, ಪ್ರತಿಯೊಬ್ಬ ನಾಗರಿಕ ಸಂಕಲ್ಪ ಮಾಡಬೇಕು, ಜಾಗೃತಿ ಅಭಿಯಾನ ನಡೆಯಬೇಕಿದೆ ಎಂದರು.


    ಕೊಣನೂರು ಬಿ.ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಸವರಾಜು ಮಾತನಾಡಿ, ಸಂವಿಧಾನ ಅರಿಯುವಲ್ಲಿ ಕೆಲ ವಿದ್ಯಾವಂತ ವರ್ಗ ವಿಫಲವಾಗಿದೆ. ಅಂಬೇಡ್ಕರ್ ಭಾವಚಿತ್ರವನ್ನು ವ್ಯಾಪಾರೀಕರಣಕ್ಕಾಗಿ ಬಳಸಲಾಗುತ್ತಿದೆಯೇ ಹೊರತು ವೈಚಾರಿಕತೆ, ಮೂಲ ಆಶಯಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಪಂಚಕ್ಕೆ ಅನ್ವಯವಾಗುವ ಭಾರತ ಸಂವಿಧಾನದ ಕಾಯ್ದೆ ಕಾನೂನುಗಳು 2 ಸಾವಿರ ವರ್ಷಗಳು ಕಳೆದರೂ ಸಾರ್ವಕಾಲಿಕವಾಗಿರಲಿವೆ ಎಂದರು.


    ಬೈಚನಹಳ್ಳಿ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕುಮಾರಯ್ಯ ಮಾತನಾಡಿ, ಹಿಂದು ಧರ್ಮದಲ್ಲಿ ಹುಟ್ಟಿದ ಅಂಬೇಡ್ಕರ್ ಮುಸ್ಲಿಂ ಅಥವಾ ಕ್ರೈಸ್ತ ಧರ್ಮ ಸ್ವೀಕರಿಸಿದ್ದರೆ ಇದು ಮುಸ್ಲಿಂ ಇಲ್ಲವೇ ಕ್ರೈಸ್ತ ದೇಶವಾಗಿರುತ್ತಿತ್ತು. ದೇಶದಲ್ಲಿ ಶಾಂತಿ ಮತ್ತು ಭಾರತೀಯ ಸಂಸ್ಕೃತಿ ಉಳಿಯಲು ಅಂಬೇಡ್ಕರ್ ಕಾರಣ. ಇದು ಬುದ್ಧ ಹುಟ್ಡಿದ ನಾಡು, ನಾವೆಲ್ಲ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು. ತೊಂಬತ್ತು ಭಾಷೆಗಳಿಗೆ ತರ್ಜುಮೆ ಆಗಿರುವ ಸಂವಿಧಾನವನ್ನು ಅರ್ಥಮಾಡಿಕೊಂಡು ಆಚರಣೆಗೆ ತರಬೇಕು. ಪ್ರತಿ ಮಕ್ಕಳಿಗೆ ನಿತ್ಯ ಸಂವಿಧಾನದಲ್ಲಿ ಅಡಕವಾಗಿರುವ ಕಾಯ್ದೆಗಳನ್ನು ಓದಿಸುವ ಕೆಲಸ ಮಾಡಿಸಬೇಕು ಎಂದು ತಿಳಿಸಿದರು.


    ತಾಲೂಕು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಅಧ್ಯಕ್ಷ ದುಮ್ಮಿ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ದಸಂಸ ರಾಜ್ಯ ಸಮಿತಿ ಸದಸ್ಯ ಈರೇಶ್ ಸಂವಿಧಾನ ಆಶಯ ಮತ್ತು ಅಂಬೇಡ್ಕರ್ ಕುರಿತು ಮಾತನಾಡಿದರು.
    ಶಿಕ್ಷಕ ರಮೇಶ್ ತಂಡದವರು ಕ್ರಾಂತಿ ಗೀತೆ ಹಾಡಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಸದಸ್ಯ ಅನಿಕೇತನ್, ವಕೀಲ ಶಂಕರಯ್ಯ, ಶಿಕ್ಷಕ ವೆಂಕಟೇಶಮೂರ್ತಿ, ಮುಖಂಡರಾದ ಕುಪ್ಪೆ ಧರ್ಮೇಶ್, ನಾಗರಾಜು, ಅಕ್ಮಲ್ ಪಾಷಾ, ರಂಗನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts