More

    ಸಂಚಾರಿ ಆರೋಗ್ಯ ಸೇವೆ ಕುಗ್ರಾಮಗಳಿಗೆ ನಿಲ್ಲುವುದಿಲ್ಲ

    ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳ ಕುಗ್ರಾಮಗಳಿಗೆ ಪ್ರಸ್ತುತ ಇರುವ ಸಂಚಾರಿ ಆರೋಗ್ಯ ಸೇವೆಯನ್ನು ಮುಂದುವರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ ತಿಳಿಸಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗುರುವಾರ ಆಯೋಜನೆಯಾಗಿದ್ದ ವಾರ್ತಾ ಸ್ಪಂದನ ಎಂಬ ನೇರ ಫೋನ್​ಇನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಯಲ್ಲಾಪುರ ಬೈಲಂದೂರು ಗ್ರಾಮಸ್ಥರೊಬ್ಬರ ಕರೆಗೆ ಉತ್ತರಿಸಿದರು. ಜಿಲ್ಲೆಯ 8 ತಾಲೂಕುಗಳಲ್ಲಿ ಕಳೆದ ವರ್ಷ ಖಾಸಗಿ ಸಂಸ್ಥೆಗಳ ಮೂಲಕ ಸಂಚಾರಿ ಆರೋಗ್ಯ ಘಟಕ ಸೇವೆ ಲಭ್ಯವಿತ್ತು. ಆದರೆ, ಈ ಬಾರಿ ನಾಲ್ಕು ತಾಲೂಕುಗಳಿಗೆ ಮಾತ್ರ ಮಂಜೂರಾಗಿದೆ. ಎಲ್ಲ ತಾಲೂಕುಗಳಿಗೂ ಈ ವ್ಯವಸ್ಥೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

    ನಕಲಿ ವೈದ್ಯರ ಹಾವಳಿ ತಡೆಯಲು ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿರುವ 85 ಆಸ್ಪತ್ರೆಗಳ ಪೈಕಿ 35 ಆಸ್ಪತ್ರೆಗಳಲ್ಲಿ ಮಾತ್ರ ಎಂಬಿಬಿಎಸ್ ವೈದ್ಯರಿದ್ದಾರೆ. ಉಳಿದೆಲ್ಲ ಕಡೆ ಬಿಎಎಂಎಸ್ ವೈದ್ಯರನ್ನು ನೇಮಕ ಮಾಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದರು.

    ತಮಗೆ ವೇತನ ಪಾವತಿಯಾಗದ ಬಗ್ಗೆ ದಾಂಡೇಲಿ ಆಸ್ಪತ್ರೆಯ ಗುತ್ತಿಗೆ ನೌಕರರ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ವೇತನಕ್ಕಾಗಿ ಕಳೆದ ಸಾಲಿನಲ್ಲಿ 5 ಕೋಟಿ ರೂ. ಅನುದಾನ ಬಂದಿತ್ತು. ಈ ಬಾರಿ ಕೇವಲ 3 ಕೋಟಿ ಅನುದಾನ ಬಿಡುಗಡೆಯಾಗಿದ್ದರಿಂದ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ಹೊರ ಗುತ್ತಿಗೆ ನೌಕರರಿಗೆ ವೇತನವಾಗಿಲ್ಲ. ವ್ಯತ್ಯಾಸದ ಹಣ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

    ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರಮೇಶ ರಾವ್, ಡಾ.ಶಂಕರ ರಾವ್, ಡಾ.ಮಹಾಬಲೇಶ್ವರ ಹೆಗಡೆ, ಡಾ.ವಿನೋದ ಭೂತೆ, ಡಾ.ಸತೀಶ ಶೇಟ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಇದ್ದರು. ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಸ್ವಾಗತಿಸಿದರು.

    ಲಸಿಕೆ ಹಾಕಿಸಿಕೊಳ್ಳಿ: ಮಂಗನ ಕಾಯಿಲೆ (ಕೆಎಫ್​ಡಿ)ಮಾರಣಾಂತಿಕ ಸ್ವರೂಪಕ್ಕೆ ಹೋಗದಂತೆ ತಡೆಯಲು ನಿಯಮಾನುಸಾರ ಮೂರು ಬಾರಿ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಮೊದಲ ಲಸಿಕೆ ಪಡೆದ ಒಂದು ತಿಂಗಳ ನಂತರ ಎರಡನೇ ಬಾರಿ ಹಾಗೂ 6 ತಿಂಗಳ ನಂತರ ಮೂರನೇ ಬಾರಿ ಪಡೆದರೆ ಕಾಯಿಲೆಯನ್ನು ಶೇ. 80 ರಷ್ಟು ತಡೆಗಟ್ಟಬಹುದು. ಆದರೆ, ಹಲವರು ಒಂದು ಲಸಿಕೆ ಪಡೆದು ಬಿಡುತ್ತಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಎರಡನೇ ಲಸಿಕೆ ಪಡೆದು ತಿಂಗಳ ನಂತರವಷ್ಟೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಪ್ರಾರಂಭವಾಗುತ್ತದೆ. ಇದರಿಂದ ಕಾಯಿಲೆ ಕಾಣಿಸಿಕೊಂಡ ನಂತರವೂ ಲಸಿಕೆ ಹಾಕಿಸಿಕೊಂಡಲ್ಲಿ ಪ್ರಯೋಜನವಿಲ್ಲ. ಕಳೆದ ವರ್ಷ ಮಂಗನ ಕಾಯಿಲೆ ಪ್ರಕರಣಗಳು ಜಾಸ್ತಿ ಪ್ರಮಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಏಳು ತಾಲೂಕುಗಳಲ್ಲಿ 1 ಲಕ್ಷ ರೋಗ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದುವರೆಗೆ ಕೇವಲ 25 ಸಾವಿರ ಜನರಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಜನರಿಗೆ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಕೆಎಫ್​ಡಿ ವೈದ್ಯಾಧಿಕಾರಿ ಡಾ.ಸತೀಶ ಶೇಟ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts