More

    ಸಂಕೀರ್ಣದಲ್ಲಿರುವ ಕುಟುಂಬ ಸ್ಥಳಾಂತರಿಸಿ

    ಕುಂದಗೋಳ: ಕಳೆದ 6 ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ನೆಲೆ ಕಳೆದುಕೊಂಡ ಪಟ್ಟಣದ ವಾಣಿಜ್ಯ ಸಂಕೀರ್ಣದಲ್ಲಿ ಆಶ್ರಯ ಪಡೆದಿರುವ 7 ಕುಟುಂಬಗಳಿಗೆ ಬೇರೆಡೆ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರರಿಗೆ ತಾ.ಪಂ. ಇಒ ಎಂ.ಎಸ್. ಮೇಟಿ ಮನವಿ ಮಾಡಿದರು.

    ಪಟ್ಟಣದ ತಾ.ಪಂ. ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಇಒ, ವಾಣಿಜ್ಯ ಸಂಕೀರ್ಣದಲ್ಲಿ ಕುಟುಂಬಗಳು ವಾಸವಾಗಿರುವ ಕಾರಣ ಸರ್ಕಾರಿ ಕಚೇರಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಹೊಸ ಕಚೇರಿಗಳಿಗೆ ಜಾಗವಿಲ್ಲದಂತಾಗಿದೆ ಎಂದರು.

    ಆಗ ಮಧ್ಯ ಪ್ರವೇಶಿಸಿದ ಪ.ಪಂ. ಮುಖ್ಯಾಧಿಕಾರಿ ನಾರಾಯಣ ಡೊಂಬರ, ಈಗಾಗಲೇ ಈ ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಆದರೆ, ಮನೆ ನಿರ್ವಿುಸಿ ಕೊಡುವವರೆಗೂ ಇಲ್ಲಿಂದ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ, ಶಾಸಕರೇ ಅಲ್ಲಿಯೇ ಇರುವಂತೆ ಹೇಳಿದ್ದಾರೆ. ಅವರು ಹೇಳಿದ ಬಳಿಕವೇ ಸಂಕೀರ್ಣ ಖಾಲಿ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದರು. ಇಷ್ಟೆಲ್ಲ ನಡೆದರೂ ಸಭೆಯಲ್ಲಿದ್ದ ಶಾಸಕಿ ಕುಸುಮಾವತಿ ಶಿವಳ್ಳಿ ಮೌನ ವಹಿಸಿದ್ದರು.

    ಜಿ.ಪಂ. ಸದಸ್ಯ ಎನ್.ಎನ್. ಪಾಟೀಲ ಮಾತನಾಡಿ, ಸಂಶಿ ಗ್ರಾಮದ ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಅವರಿಗಾಗಿ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಹಸೀಲ್ದಾರರನ್ನು ಪ್ರಶ್ನಿಸಿದರು. ಆಗ ತಹಸೀಲ್ದಾರ್ ಬಸವರಾಜ ಮೆಳವಂಕಿ, ಈ ಕುಟುಂಬಗಳು ಕೆರೆಯ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದರು. ಅವರಿಗೆ ಪರಿಹಾರ ಕೊಡಲು ಆಗುತ್ತಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯರು, ಮಳೆಯಿಂದ ಮನೆಗೆ ಹಾನಿಯಾದರೂ ಪರಿಹಾರ ನೀಡಿಲ್ಲ ಎಂದು ಇಂಗಳಗಿ ಗ್ರಾಮದ ವಿಠ್ಠಲ ಮಾದರ ಎಂಬುವರು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ದೂರು ನೀಡಿದ್ದಾರೆ ಎಂದು ಸಭೆಗೆ ತಿಳಿಸಿದರು. ಇಂಗಳಗಿಯ ಈ ಕುಟುಂಬಗಳ ಮನೆಗೆ ನಾವು ಭೇಟಿ ನೀಡಿದ್ದೇವೆ, ಏನೂ ಹಾನಿಯಾಗಿಲ್ಲ ಎಂದು ತಹಸೀಲ್ದಾರ್ ಸಮಜಾಯಿಷಿ ನೀಡಿದರು.

    ಬೆಟದೂರ ಗ್ರಾಮದಲ್ಲಿ ಒಂದು ವಿದ್ಯುತ್ ಕಂಬ ಅಳವಡಿಸುವಂತೆ 6 ತಿಂಗಳ ಹಿಂದೆಯೇ ಸೂಚಿಸಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಎಂದು ಶಾಸಕಿ ಹೆಸ್ಕಾಂ ಅಧಿಕಾರಿ ಟಿ.ಎಸ್. ದೊಡಮನಿ ಅವರನ್ನು ತರಾಟೆ ತೆಗೆದುಕೊಂಡರು. ಆಗ ಅಧಿಕಾರಿ ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ ಎನ್ನುತ್ತಿದ್ದಂತೆ, ಇಒ ಮಧ್ಯಪ್ರವೇಶಿಸಿ, ತಾಲೂಕು ಪಂಚಾಯಿತಿಗೆ ಅರ್ಜಿ ಬರೆಯಿರಿ. ನಾವು ತಕ್ಷಣ ಅನುದಾನ ಬಿಡುಗಡೆ ಮಾಡುತ್ತೇವೆ ಎಂದರು.

    ಕೆಆರ್​ಐಡಿಎಲ್ ಅಧಿಕಾರಿ ಲಕ್ಷ್ಮಣ ನಾಯಕ ವರದಿ ಮಂಡಿಸಿದಾಗ ಸದಸ್ಯರು ಅವರ ವಿರುದ್ಧ ಹರಿಹಾಯ್ದು, ನೀವು ಜನ ಪ್ರತಿನಿಧಿಗಳಿಗೆ ಸಮರ್ಪಕವಾಗಿ ಉತ್ತರಿಸುವುದಿಲ್ಲ. ಜಿಪಂ ಕೆಡಿಪಿ ಸಭೆಯಲ್ಲಿ ಹಾರಿಕೆ ಉತ್ತರ ನೀಡುತ್ತೀರಿ. ನಿಮ್ಮ ಕೆಲಸ ಸಮರ್ಪಕವಾಗಿಲ್ಲ ಎಂದು ಆಕ್ರೋಶಗೊಂಡರೆ, ಅಧಿಕಾರಿ ಏನೂ ಉತ್ತರಿಸದೇ ನಕ್ಕು ಸುಮ್ಮನಾದರು.

    ಅರಣ್ಯ ಇಲಾಖೆ ಅಧಿಕಾರಿ ಚೇತನಾ ಮುದಿಗೌಡ್ರ ಇಲಾಖಾ ವರದಿ ಓದುತ್ತಿರುವಾಗ ಸದಸ್ಯರು ಮಧ್ಯ ಪ್ರವೇಶಿಸಿ, ತಾಲೂಕಿನಲ್ಲಿ ಸಸಿ ನೆಟ್ಟರೆ ಸಾಲದು ಅವುಗಳನ್ನು ಮಗುವಿನಂತೆ ಬೆಳಸಬೇಕೆಂದು ತಾಕೀತು ಮಾಡಿದರು. ಜಿಪಂ ಸದಸ್ಯ ಭರಮಣ್ಣ ಮುಗಳಿ ಮಾತನಾಡಿ, ಯಲಿವಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆರೋಗ್ಯ ಇಲಾಖೆ ಅಧಿಕಾರಿ ರೂಪಾ ತುರಮರಿ, ಸರಿಪಡಿಸುವ ಭರವಸೆ ನೀಡಿದರು. ಜಿ.ಪಂ. ಸದಸ್ಯ ಎನ್.ಎನ್. ಪಾಟೀಲ, ಇದ್ದರು.

    ಶಾಸಕಿ ಶಿವಳ್ಳಿ ಸಿಡಿಮಿಡಿ
    ಸಭೆಗೆ ಬಹಳ ಅಧಿಕಾರಿಗಳು ಗೈರಾಗಿರುವುದನ್ನು ಕಂಡು ಶಾಸಕಿ ಕುಸುಮಾವತಿ ಶಿವಳ್ಳಿ ಸಿಡಿಮಿಡಿಗೊಂಡರು. ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರುವಂತೆ ಇಒ ಅವರಿಗೆ ತಾಕೀತು ಮಾಡಿದರು. ಆಗ ಇಒ, ದೂರವಾಣಿ ಮೂಲಕ ಅಧಿಕಾರಿಗಳನ್ನು ಸಭೆಗೆ ಕರೆಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts