More

    ಸಂಕಷ್ಟ ತಂದಿತ್ತ ಕಿಂಡಿ ಅಣೆಕಟ್ಟು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಅಂತರ್ಜಲ ವೃದ್ಧಿ, ಕುಡಿಯುವ ನೀರು ಸಮಸ್ಯೆ ಪರಿಹಾರ, ಕೃಷಿ ಭೂಮಿಗೆ ನೀರು ಮುಂತಾದ ಉಪಯೋಗಕ್ಕಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟೆಯೇ ಪ್ರಸಕ್ತ ಕೃಷಿಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಬೈಂದೂರು ತಾಲೂಕು ಹಕ್ಲಾಡಿ ಗ್ರಾಮ ತೊಪ್ಲು ಕಿಂಡಿ ಅಣೆಕಟ್ಟು ಕೃಷಿಕರಿಗೆ, ಪರಿಸರ ನಿವಾಸಿಗಳಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಹಕ್ಲಾಡಿ, ಹೆಮ್ಮಾಡಿ, ಕಟ್‌ಬೇಲ್ತೂರು, ವಂಡ್ಸೆ ಹೋಬಳಿಯ 100 ಹೆಕ್ಟೇರ್ ಕೃಷಿ ಭೂಮಿಗೆ ನೀರು ಕೊಡಬೇಕಿದ್ದ ಕಿಂಡಿ ಅಣೆಕಟ್ಟು ಕೃಷಿಕರಿಗೆ ಕಣ್ಣೀರು ತಂದರೆ, ಪರಿಸರ ನಿವಾಸಿಗಳು ಕುಡಿಯುವ ನೀರಿಗೆ ನಲ್ಲಿಯನ್ನೇ ಆಶ್ರಯಿಸುವಂತಾಘಿದೆ. 12 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ಸಿಹಿ ನೀರು ಕೊಡೋದು ಹಾಗಿರಲಿ, ಪರಿಸರದ ಬಾವಿ ನೀರನ್ನೂ ಹಾಳುಗೆಡವಿದೆ. ದಶಕದ ಹಿಂದೆ ತೊಪ್ಲು ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳು ತಿರುಗಿಯೂ ನೋಡಿಲ್ಲ.
    ಡಿಸಿ ಭೇಟಿಗೆ ಒತ್ತಾಯ ಕಿಂಡಿ ಅಣೆಕಟ್ಟು ತೊಪ್ಲುವಿನಲ್ಲಿ ನಿರ್ಮಾಣವಾದಾಗಿನಿಂದ ಸಮಸ್ಯೆ ಕಾಡುತ್ತಿದೆ. ಕೃಷಿ ಭೂಮಿ ಕಳೆದಕೊಂಡಿದ್ದೇವೆ. ಸಿಹಿ ನೀರಿನ ಬಾವಿ ಉಪ್ಪಾಗಿದೆ. ಧಾನ್ಯ, ಎರಡನೇ ಬೆಳೆ ಕೈಬಿಟ್ಟಿದ್ದೇವೆ. ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುವುದರಿಂದ ಫಲವತ್ತತೆ ಕಳೆದುಕೊಂಡು ಇಳುವರಿ ಕಡಿಮೆಯಾಗುತ್ತಿದೆ. ಹಿಂದೆ ಕುಂದಾಪುರ ಉಪವಿಭಾಗಾಧಿಕಾರಿ ಕಿಂಡಿ ಅಣೆಕಟ್ಟು ವೀಕ್ಷಣೆಗೆ ಬಂದಾಗ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದೆವು. ಅವರು 25 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಗೇಟ್ ಅಳವಡಿಸುವ ಭರವಸೆ ನೀಡಿದ್ದರು. ಆದರೂ ಈ ಬಾರಿ ಕಿಂಡಿ ಅಣೆಕಟ್ಟು ಹಲಗೆ ಅಡಿಯಿಂದ ನೀರು ಹೊರ ಬರುತ್ತಿದೆ. ಹಲಗೆ ಸಂದಿಯಲ್ಲೂ ನೀರು ನಿಲ್ಲುತ್ತಿಲ್ಲ. ಕಳಪೆ ಕಾಮಗಾರಿ ಆದರೆ ಸುಮ್ಮನಿರೋದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಎಚ್ಚರಿಸಿದ್ದರೂ ಕಿಂಡಿ ಅಣೆಕಟ್ಟು ಹಲಗೆ ಜೋಡಣೆ ನಿಕೃಷ್ಟವಾಗಿದೆ. ಜಿಲ್ಲಾಧಿಕಾರಿ ತೊಪ್ಲು ಕಿಂಡಿ ಆಣೆಕಟ್ಟು ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ರೈತರ ನೆರವಿಗೆ ಬರಬೇಕು. ಮೀನು ಹಿಡಿಯುವವರ ಹಾಗೂ ಅಸಮರ್ಪಕ ಹಲಗೆ ಜೋಡಣೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಮಹಿಳೆಯರ ಜೀವನ ನಿರ್ವಹಣೆಯೂ ಸಮಸ್ಯೆ: ಕಿಂಡಿ ಅಣೆಕಟ್ಟಿದ್ದರೂ ಕೃಷಿಕರಿಗೆ ಒಂದು ಕಡೆ ಕಣ್ಣೀರು ತರುತ್ತಿದ್ದರೆ ಮತ್ತೊಂದು ಕಡೆ ಮಳಿ(ಕಪ್ಪೆಚಿಪ್ಪು) ಆಯ್ದು ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿದ್ದ ಮಹಿಳೆಯರ ಜೀವನ ಬೀದಿಗೆ ತಂದಿದೆ. ಬಂಟ್ವಾಡಿ ಸೌಪರ್ಣಿಕಾ ನದಿ, ತೊಪ್ಲು ಚಕ್ರಾ ನದಿ ಪಾತ್ರದಲ್ಲಿ ಹಿಂದೆ ನೂರಾರು ಮಹಿಳೆಯರು ಮಳಿ ಆಯ್ದು ಮಾರಾಟ ಮಾಡಿ ಕುಟುಂಬದ ನೆರವಿಗೆ ಬರುತ್ತಿದ್ದರು. ಈಗ ಎಲ್ಲೂ ಆ ಸ್ಥಿತಿ ಇಲ್ಲ. ಕಿಂಡಿ ಅಣೆಕಟ್ಟು ಆದ ನಂತರ ಹೊಳೆಯಲ್ಲಿ ನಿರಂತರ ನೀರು ಭರ್ತಿಯಾಗುವುದರಿಂದ ಸಾಂಪ್ರದಾಯಕ ಮಳಿ ಹೆಕ್ಕುವವರ ಬದುಕು ಸಮಸ್ಯೆಗೆ ಸಿಲುಕಿದೆ. ಕಿಂಡಿ ಅಣೆಕಟ್ಟು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಕೊಕ್ಕೆ ಹಾಕಿದೆ.

    ತೊಪ್ಲು ಕಿಂಡಿ ಅಣೆಕಟ್ಟು ನಿರ್ವಹಣೆ ಸಣ್ಣ ನೀರಾವರಿ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಗ್ರಾಪಂನಿಂದ ಈ ಬಗ್ಗೆ ಮಾಹಿತಿ ನೀಡಿದರೂ ಇಲಾಖೆಯಿಂದ ಸ್ಪಂದನೆ ಇಲ್ಲ. ಕಿಂಡಿ ಅಣೆಕಟ್ಟೆಯಿಂದ ಹಕ್ಲಾಡಿ ಗ್ರಾಮದ ನೀರಿನ ಮೂಲಕ್ಕೇ ಧಕ್ಕೆಯಾಗಿದೆ. ಕಿಂಡಿ ಅಣೆಕಟ್ಟು ನಿರ್ವಹಣೆ ಹೊಣೆಯನ್ನು ಗ್ರಾಪಂಗೆ ನೀಡಬೇಕು. ಹಲಗೆ ತೆಗೆದು ಮೀನು ಹಿಡಿಯುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು.
    ಸುಭಾಸ್ ಶೆಟ್ಟಿ ಹೊಳ್ಮಗೆ, ಹಕ್ಲಾಡಿ ಗ್ರಾಪಂ ಉಪಾಧ್ಯಕ್ಷ

    ತೊಪ್ಲು ಕಿಂಡಿ ಅಣೆಕಟ್ಟು ವೈರುಧ್ಯಗಳ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ದೂರು ನೀಡಿದ್ದರೂ ಗಮನ ಕೊಡದೆ, ಹಲಗೆ ಹಾಕುವ ಗುತ್ತಿಗೆದಾರರ ಹಿತಾಸಕ್ತಿ ಕಾಯುವುದರಲ್ಲೇ ಹೆಚ್ಚು ಆಸಕ್ತಿ ವಹಿಸಿದೆ. ಜಿಲ್ಲಾ ರೈತ ಸಂಘಕ್ಕೆ ಕಿಂಡಿ ಅಣೆಕಟ್ಟು ನಿರ್ವಹಣೆ ಜವಾಬ್ದಾರಿ ನೀಡುವಂತೆ ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ. ರೈತರಿಗಾಗಿ ನಿರ್ಮಿಸಿದ ಕಿಂಡಿ ಅಣೆೆಕಟ್ಟಿನ ನಿರ್ವಹಣೆ ಜವಾಬ್ದಾರಿಯನ್ನು ರೈತರಿಗೇ ನೀಡಲಿ. ಸಮಸ್ಯೆ ಬಗೆಹರಿಸದಿದ್ದರೆ ಡಿಸಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ.
    ಶರತ್ ಕುಮಾರ್ ಶೆಟ್ಟಿ ಬಾಳೆಕೆರೆ, ಕುಂದಾಪುರ ಎಪಿಎಂಸಿ ಅಧ್ಯಕ್ಷ

    ತೊಪ್ಲು ಕಿಂಡಿ ಅಣೆಕಟ್ಟು ಹಲಗೆ ಜೋಡಣೆ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದು ತಕ್ಷಣ ಸರಿಪಡಿಸುವಂತೆ ಸೂಚಿಸುತ್ತೇನೆ. ಕಿಂಡಿ ಅಣೆಕಟ್ಟು ರೈತರ, ಸಾರ್ವಜನಿಕರ ನೆರವಿಗೆ ಬರಬೇಕು. ಆದರಿಂದ ಸಮಸ್ಯೆ ಆಗುತ್ತದೆ ಎಂದರೆ ಸಹಿಸಲು ಸಾಧ್ಯವಿಲ್ಲ. ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ, ತಕ್ಷಣ ಸಮಸ್ಯೆ ಪರಿಹಾರ ಮಾಡುವಂತೆ ಸೂಚಿಸುತ್ತೇನೆ.
    ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts