More

    ಶ್ರೀರಾಮ ನಾಮ ಸ್ಮರಿಸಿದ ಭಕ್ತರು

    ಚಿಕ್ಕಮಗಳೂರು: ಜಿಲ್ಲಾದ್ಯಂತ ಶ್ರೀ ರಾಮಾಂಜನೇಯರ ದೇವಾಲಯಗಳು ಸೇರಿದಂತೆ ಎಲ್ಲ ದೇಗುಲಗಳಲ್ಲಿ ಗುರುವಾರ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಶ್ರೀರಾಮ ತಾರಕ ಹೋಮದಲ್ಲಿ ಋತ್ವಿಜರಿಂದ ಒಂದು ಲಕ್ಷ ರಾಮನಾಮ ಸ್ವಾಹಾಕಾರ ಮಾಡಿದ್ದು, ಬೀದಿ ಬೀದಿಗಳಲ್ಲೂ ಭಕ್ತರು ಪಾನಕ-ಕೋಸಂಬರಿ ಹಂಚಿ ವಿಜೃಂಭಣೆಯಿಂದ ಆಚರಿಸಿದರು.

    ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಬೆಳಗ್ಗೆ ಸುಪ್ರಭಾತ ಸೇವೆ, ಲೋಕಕಲ್ಯಾಣಾರ್ಥ ಕನ್ನಡದಲ್ಲಿ ಸಂಕಲ್ಪ, ಶ್ರೀ ಸೀತಾರಾಮಚಂದ್ರ ಮೂರ್ತಿಗೆ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಅಳಸಿಂಗ ಭವನದಲ್ಲಿ ಗೋಪಿನಾಥ್ ನೇತೃತ್ವದಲ್ಲಿ 20 ಋತ್ವಿಜರಿಂದ ಒಂದು ಲಕ್ಷ ರಾಮನಾಮ ಸ್ವಾಹಾಕಾರ ನೆರವೇರಿಸಲಾಯಿತು. ಡೋಲೋತ್ಸವ, ಭಜನೆ, ಸಂಕೀರ್ತನೆಗಳೊಂದಿಗೆ ದೇವರನ್ನು ಕೊಂಡಾಡಿದರು.

    ರತ್ನಗಿರಿ ರಸ್ತೆ ಶ್ರೀರಾಮ ಮಂದಿರ, ಕೋಟೆ ಶ್ರೀ ಆಂಜನೇಯ ದೇವಾಲಯ, ನಗರ ಹಾಗೂ ಜಿಲ್ಲೆಯ ಶ್ರೀರಾಮ ದೇಗುಲದಲ್ಲಿ ಪಂಚಾಮೃತಾಭಿಷೇಕ, ಹೋಮ, ಹವನ, ಜಪ, ತಪಗಳು, ಭಜನೆ ವರ್ಣರಂಜಿತ ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಶ್ರೀ ಶಂಕರ ಮಠದಲ್ಲಿ ವಿಎಚ್​ಪಿಯಿಂದ ಪಾನಕ, ಕೋಸಂಬರಿ, ಬಸವನಹಳ್ಳಿ ಮುಖ್ಯರಸ್ತೆಯ ಶ್ರೀರಾಮ ಮಾರ್ಟ್​ನಲ್ಲಿ ರಾಮನ ಬೃಹತ್ ಕಟೌಟ್​ಗೆ ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಜನರಿಗೆ ಪಾನಕ ವಿತರಿಸಲಾಯಿತು.

    ನೇಕಾರ ಬೀದಿ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ, ನೈವೇದ್ಯ, ಪುಣ್ಯಾಹದ ನಂತರ ನವಗ್ರಹ ಹೋಮ, ರಾಮತಾರಕ ಹೋಮ, ಸೀತಾಹೋಮ ನೆರವೇರಿಸಿ ಉಯ್ಯಾಲೆ ಸೇವೆಯೊಂದಿಗೆ ರಾಜಬೀದಿ ಉತ್ಸವ ನಡೆಸಲಾಯಿತು. ಪ್ರಧಾನ ಅರ್ಚಕ ಪ್ರಸನ್ನ ಭಟ್, ಕೃಷ್ಣ ಭಟ್, ವೆಂಕಟೇಶ್, ರಾಘವೇಂದ್ರ, ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಧಾರ್ವಿುಕ ಕೈಂಕರ್ಯ ನೆರವೇರಿಸಲಾಯಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts