More

    ಶಾಸನೋಕ್ತ ವೀರ ಮಹಾಸತಿ ಕಲ್ಲು ಪತ್ತೆ

    ಶಿವಮೊಗ್ಗ: ವಿಜಯನಗರ ಅರಸರ ಆಡಳಿತ ಕಾಲಕ್ಕೆ ಸೇರಿದ ಶಾಸನೋಕ್ತ ವೀರ ಮಹಾಸತಿ ಕಲ್ಲೊಂದು ಶಿಕಾರಿಪುರ ತಾಲೂಕಿನ ಅರಿಶಿಣಗೇರಿಯಲ್ಲಿ ಪತ್ತೆಯಾಗಿದೆ. ಶಿವಮೊಗ್ಗ ಕಮಲಾ ನೆಹರು ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೆಗಡೆ ಕ್ಷೇತ್ರ ಕಾರ್ಯದಲ್ಲಿ ಈ ಶಾಸನೋಕ್ತ ಮಹಾಸತಿ ಕಲ್ಲನ್ನು ಗುರುತಿಸಿದ್ದಾರೆ.

    ಅರಿಶಿಣಗೇರಿಯ ವೀರೇಂದ್ರ ಪಾಟೀಲರ ಮನೆಯ ಮುಂದಿನ ಅಂಗಳದಲ್ಲಿ ಈ ಶಾಸನವಿದ್ದು, ಇದು 4 ಪಟ್ಟಿಕೆಗಳನ್ನು ಹೊಂದಿದೆ. 14ನೇ ಶತಮಾನದ ಕನ್ನಡ ಲಿಪಿ ಹೊಂದಿದೆ. ಮೊದಲ ಪಟ್ಟಿಕೆಯಲ್ಲಿ ಯುದ್ಧದ ಸನ್ನಿವೇಶ, ಎರಡನೇಯ ಪಟ್ಟಿಕೆಯಲ್ಲಿ ವೀರನೊಬ್ಬನು ಪಲ್ಲಕ್ಕಿಯಲ್ಲಿ ಕುಳಿತಿದ್ದು ಅವನೋರ್ವ ಪ್ರಮುಖ ವ್ಯಕ್ತಿ ಎಂದು ಅವನ ತಲೆಯ ಮೇಲಿರುವ ಛತ್ರಿಯಿಂದ ಹೇಳಬಹುದಾಗಿದೆ ಎಂದು ಡಾ. ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

    ಮೂರನೇ ಪಟ್ಟಿಕೆಯಲ್ಲಿ ವೀರನನ್ನು ಮಂಚದಲ್ಲಿ ಕುಳ್ಳಿರಿಸಿಕೊಂಡು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. 4ನೇ ಪಟ್ಟಿಕೆಯಲ್ಲಿ ಶಿವನ ಸನ್ನಿಧಿಯಲ್ಲಿ 4 ಜನರಿದ್ದಾರೆ. ಸಾಮಾನ್ಯವಾಗಿ ಸಹಗಮನದ ಯಾವುದೇ ಪ್ರಸ್ತಾಪ ಆರಂಭಿಕ ಶಾಸನಗಳಲ್ಲಿ ಇರುವುದಿಲ್ಲ. ಅದರ ಉಲ್ಲೇಖವೇನಿದ್ದರೂ ನಂತರದ ಕಾಲದ ಶಾಸನಗಳಲ್ಲಿ ಬರುತ್ತದೆ. ಆದರೆ ಈ ಕಲ್ಲಿನಲ್ಲಿ ಸತ್ತ ವೀರ ಮತ್ತು ಸಹಗಮನ ಮಾಡಿದ ಚಿತ್ರ ಕೆತ್ತಿರುವುದು ವಿಶೇಷ.

    ಶಾಸನದ ಆರಂಭ ನಮಸ್ತುಂಗ ಶಿರಸ್ತುಂಬಿ…ಎಂಬ ಶಿವನ ಸ್ತುತಿಯೊಂದಿಗೆ ಆರಂಭವಾಗಿದ್ದು ಮೂರನೇ ಸಾಲಿನ ಆರಂಭಿಕ 4 ಅಕ್ಷರಗಳು ಅಳಸಿವೆ. ಜೇಷ್ಠ ಮಾಸ ಶುದ್ಧದ ಉಲ್ಲೇಖ ಸ್ಪಷ್ಟವಾಗಿದೆ. 4ನೇ ಸಾಲಿನ ಆರಂಭದಲ್ಲಿ 4 ಅಕ್ಷರಗಳು ಅಳಿಸಿದ್ದು ವೀರ ಬುಕ್ಕರಾಯನ ಕುಮಾರ ಶ್ರೀ ವೀರ ಹರಿಹರರಾಯ ಎಂಬ ಉಲ್ಲೇಖವಿರುವುದಲ್ಲದೆ ಶಾಸನದ ಕೊನೆಯಲ್ಲಿ ಸ್ವರ್ಗ ಪ್ರಾಪ್ತನಾದನು ಎಂಬರ್ಥದ ಅಕ್ಷರಗಳಿವೆ.

    ಇದು ವಿಜಯನಗರ ಆಳ್ವಿಕೆಯ ಇಮ್ಮಡಿ ಹರಿಹರನ (ಕ್ರಿ.ಶ.1377-1404) ಕಾಲಕ್ಕೆ ಸೇರಿದ ಶಾಸನ. ಈ ಶಾಸನವನ್ನು ವಿಜಯನಗರದ ಮಾಂಡಲೀಕ ಅರಸರು ಅಥವಾ ಯಾವುದೇ ಅಧಿಕಾರಿ ಬರೆಸಿರಬಹುದೇ ಎಂಬುದನ್ನು ಇನ್ನಷ್ಟು ಸಂಶೋಧನೆಗಳಿಂದ ತಿಳಿಯಲು ಅವಕಾಶವಿದೆ ಎಂದು ಡಾ. ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts