More

    ವ್ಯವಸ್ಥೆಯತ್ತ ನಂಬಿಕೆ ಮೂಡಿಸಿ ಜಿಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೂಚನೆ

    ಚಿಕ್ಕಬಳ್ಳಾಪುರ:  ಜನಸಾಮ್ಯಾನರಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಇಮ್ಮಡಿಯಾಗಲು ತ್ವರಿತವಾಗಿ ಸಮಸ್ಯೆ ಪರಿಹರಿಸುವ ಮತ್ತು ಸವಲತ್ತುಗಳನ್ನು ಒದಗಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.
    ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ, ಮನೆ ಬಾಗಿಲಿಗೆ ಸವಲತ್ತು ಒದಗಿಸುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯ. ಈ ಮೂಲಕ ಕಟ್ಟಕಡೆಯ ಫಲಾನುಭವಿಯೂ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಸೂಚಿಸಿದರು.
    ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ 3ರಲ್ಲಿ ಆಸ್ಪತ್ರೆ, ಶಾಲೆ, ಗ್ರಾಮೀಣ ಮಾರುಕಟ್ಟೆ, ಪದವಿ ಕಾಲೇಜುಗಳಿಗೆ ಅತ್ಯಾಧುನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಕ್ರಿಯಾಯೋಜನೆ ರೂಪಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಪಂ ಕಾರ್ಯಪಾಲಕ ಅಭಿಯಂತರ ಸುನಂದಾ ಮಾಹಿತಿ ನೀಡಿದರು.
    ರಾಗಿ ಖರೀದಿಗೆ ರೈತರು ಹೆಸರು ನೋಂದಾಯಿಸಿಕೊಳ್ಳಲು ಫೆ.29ರ ವರೆಗೂ ಅವಧಿ ವಿಸ್ತರಿಸಲಾಗಿದೆ. ಕೆಲವು ಭಾಗಗಳಲ್ಲಿ ತಾಂತ್ರಿಕ ದೋಷದಿಂದ ರೈತರು ಗೊಂದಲಕ್ಕೊಳಗಾಗಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಯಾವುದೇ ದೂರುಗಳು ಬಂದರೂ ಪರಿಹರಿಸಲಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ರೂಪಾ ಮಾಹಿತಿ ನೀಡಿದರು.
    ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ ಈಗಾಗಲೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗೇಶ್ ತಿಳಿಸಿದರು.
    ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ 68 ಸಮುದಾಯ ಶೌಚಾಲಯಗಳನ್ನು ನಿರ್ಮಾಣದ ಗುರಿ ಪೈಕಿ 20 ಪೂರ್ಣಗೊಂಡಿದ್ದು, ಉಳಿದ 48 ಪ್ರಗತಿಯಲ್ಲಿವೆ ಎಂದು ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್ ಮಾಹಿತಿ ನೀಡಿದರು.
    ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸಿಇಒ ಬಿ. ಫೌಜಿಯಾ ತರುನ್ನುಮ್ ಇತರರಿದ್ದರು.
    ದ್ರಾಕ್ಷಿಗೆ ಉತ್ತೇಜನ:  ನರೇಗಾ ಯೋಜನೆಯಲ್ಲಿ ಗುಲಾಬಿ ಬೆಳೆಗಾರರಿಗೆ 2 ಹೆಕ್ಟೇರ್‌ಗೆ 1,92,000 ಲಕ್ಷ ರೂ. ಸಹಾಯಧನ ನೀಡುತ್ತಿದ್ದು ಇದೇ ಮಾದರಿಯಲ್ಲಿ ದ್ರಾಕ್ಷಿ ಬೆಳೆಗೂ ಒದಗಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇದರಿಂದ ಈ ಭಾಗದಲ್ಲಿ ಬೆಳೆಗಾರರಿಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದು ಅಧ್ಯಕ್ಷ ಚಿಕ್ಕನರಸಿಂಹಯ್ಯ ಸಲಹೆ ನೀಡಿದರು.
    .15,16ಕ್ಕೆ ಕೃಷಿ ಮೇಳೆ: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ರಾಗಿ, ಜೋಳ, ತೊಗರಿ ಸೇರಿ ಸಿರಿಧಾನ್ಯಗಳು ಉತ್ತಮ ಫಸಲು ನೀಡಿವೆ, ಪ್ರತಿ ವರ್ಷದಂತೆ ಈ ಬಾರಿಯೂ ಸಹ ಫೆ.15, 16 ರಂದು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ರೂಪಾ ತಿಳಿಸಿದರು.
    ಅವ್ಯವಹಾರದ ವರದಿಯೇ ಬಂದಿಲ್ಲ:  ಜಿಲ್ಲೆಯಲ್ಲಿ ಹನಿ ನೀರಾವರಿ ಪದ್ಧತಿ ಅನುಷ್ಠಾನದಲ್ಲಿ ಭಾರೀ ಅವ್ಯವಹಾರ ನಡೆದಿರುವುದರ ಬಗ್ಗೆ ಒಂದೂವರೆ ವರ್ಷದ ಹಿಂದೆ ಆರೋಪ ಕೇಳಿ ಬಂದಿತ್ತು. ತನಿಖೆ ನಡೆಸಲು ಸಮಿತಿಯನ್ನೂ ರಚಿಸಲಾಗಿತ್ತು. ಆದರೆ, ಇದುವರೆಗೂ ವರದಿಯೇ ಬಂದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸದೇ ನಿರ್ಲಕ್ಷ್ಯ ತೋರುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಿಗೆ ನೆರವು ನೀಡಿದಂತಾಗಿದೆ. ಕೂಡಲೇ ಸತ್ಯಾಸತ್ಯತೆ ಬಹಿರಂಗಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಕೆ.ಸಿ.ರಾಜಾಕಾಂತ್ ಒತ್ತಾಯಿಸಿದರು. ಕೂಡಲೇ ವರದಿ ತರಿಸಿಕೊಳ್ಳಲು ಸಿಇಒಗೆ ಸಭೆ ಸೂಚಿಸಿತು.
    ಶಿಕ್ಷಕರ ರಾಜಕೀಯ : ಒಂದೆಡೆ ಉತ್ತಮ ಶೈಕ್ಷಣಿಕ ಫಲಿತಾಂಶಕ್ಕೆ ಕಸರತ್ತು ನಡೆಸಲಾಗುತ್ತಿದೆ. ಆದರೆ, ಶಾಲೆಯಲ್ಲಿ ಬೋಧಿಸಬೇಕಾದ ಶಿಕ್ಷಕರು ಹಾಲು ಉತ್ಪಾದಕರ ಸಹಕಾರ ಚುನಾವಣೆಯಲ್ಲಿ ತಲ್ಲೀನರಾಗಿ ರಾಜಕೀಯದಲ್ಲಿ ಮುಳುಗಿದ್ದಾರೆ. ಚುನಾವಣೆಯ ಗುಂಗಿನಲ್ಲಿರುವಾಗ ಮಕ್ಕಳಿಗೆ ಯಾವಾಗ ಪಾಠ ಮಾಡ್ತಾರೆ ಎಂದು ಜಿಪಂ ಸದಸ್ಯರಾದ ಸ್ಕೂಲ್ ಸುಬ್ಬಾರೆಡ್ಡಿ, ಮುನಿಯಪ್ಪ ಪ್ರಶ್ನಿಸಿದರು. ಸಮಸ್ಯೆಯಾಗದ ರೀತಿಯಲ್ಲಿ ಶಿಕ್ಷಕರನ್ನು ಚುನಾವಣೆಗೆ ನಿಯೋಜಿಸಲಾಗುತ್ತಿದೆ ಎಂದು ಡಿಡಿಪಿಐ ನಾಗೇಶ್ ಪ್ರತಿಕ್ರಿಯಿಸಿದರು.
    ತ್ಯಾಜ್ಯ ಘಟಕದಲ್ಲಿ ನಿರ್ಲಕ್ಷ್ಯ : ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಘಟಕದ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ಕಂಡು ಬರುತ್ತಿದೆ. ಘಟಕಕ್ಕೆ ಅಗತ್ಯ ಜಾಗ ಗುರುತಿಸಲು ಇಲ್ಲವೇ ಸಂಬಂಧಪಟ್ಟ ಇಲಾಖೆಗೆ ನಿಗದಿತ ಸ್ಥಳದ ಹಸ್ತಾಂತರಕ್ಕೆ ಮೀನಮೇಷ ಎಣಿಸಲಾಗುತ್ತಿದೆ. ಇದರಿಂದಾಗಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ. ಅನುದಾನ ಮೀಸಲಿಟ್ಟರೂ ಪ್ರಯೋಜನವಿಲ್ಲದಂತಾಗಿದೆ ಎಂದು ಜಿಪಂ ಸದಸ್ಯ ಪಿ.ಎನ್.ಪ್ರಕಾಶ್ ಬೇಸರ ವ್ಯಕ್ತಪಡಿಸಿದರು. 42 ಘಟಕಗಳು ಸ್ಥಾಪನೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಗುರಿ ಸಾಧಿಸಲು ಸೂಚಿಸಲಾಗುವುದು ಎಂದು ಸಿಇಒ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts