More

    ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆ ಉದ್ಘಾಟನೆ

    ಹುಬ್ಬಳ್ಳಿ: ಕರೊನಾ ಸೋಂಕು ಅನಿರೀಕ್ಷಿತವಾಗಿ ಬಂದೆರಗಿದ ಮಹಾ ಮಾರಿ. ಜಗತ್ತಿನ ಶ್ರೀಮಂತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ ದೇಶಗಳೇ ಇದರಿಂದ ತತ್ತರಿಸಿ ಹೋಗಿವೆ. ಇಂತಹ ಸಂದರ್ಭದಲ್ಲಿ ಭಾರತ ಇರುವ ಸೌಲಭ್ಯಗಳ ಮಧ್ಯೆಯೇ ಉತ್ತಮವಾಗಿ ನಿರ್ವಹಣೆ ಮಾಡಿತು. ಇದೀಗ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಇಲ್ಲಿಯ ಕಿಮ್್ಸ ಆವರಣದಲ್ಲಿ ನಿರ್ವಿುಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ವೇದಾಂತ ಕೇರ್ಸ್ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಶನಿವಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಎರಡನೇ ಅಲೆ ಹೀಗೇ ಇರಲಿದೆ ಎಂದು ಯಾವುದೇ ತಜ್ಞರು ಹೇಳಿರಲಿಲ್ಲ. ಆಮ್ಲಜನಕದ ಬೇಡಿಕೆ ಏಕಾಏಕಿ 10 ಪಟ್ಟು ಜಾಸ್ತಿಯಾಯಿತು. ಇದರಿಂದ ಸಮಸ್ಯೆಯಾಯಿತು. ಆದಾಗ್ಯೂ ಸವಾಲಾಗಿ ಸ್ವೀಕರಿಸಿದ ಕೇಂದ್ರ ಸರ್ಕಾರ ಕೇವಲ 10 ದಿನದಲ್ಲಿ ಅಗತ್ಯ ಆಕ್ಸಿಜನ್ ಅನ್ನು ದೇಶದ ಎಲ್ಲ ರಾಜ್ಯಗಳಿಗೆ ತಲುಪಿಸುವ ಕೆಲಸ ಮಾಡಿತು. ಇದೀಗ ಉತ್ಪಾದನೆಗೂ ಆದ್ಯತೆ ನೀಡಿದೆ. ಬರುವ ಡಿಸೆಂಬರ್ ಒಳಗೆ ದೇಶದ ಎಲ್ಲರಿಗೂ ಕರೊನಾ ಲಸಿಕೆ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಷ್ಟಿದ್ದರೂ ಕೆಲವರು ರಾಜಕೀಯಕ್ಕೆ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಭಾರತದ ಲಸಿಕೆ ಸುರಕ್ಷಿತವಾಗಿದೆ. ಜಗತ್ತಿನ ಬಹಳಷ್ಟು ದೇಶಗಳಿಗೆ ನಮ್ಮ ಲಸಿಕೆ ಕಳುಹಿಸಿ ಕೊಡಲಾಗಿದೆ. ಇದೀಗ ಕರೊನಾ ಕಡಿಮೆಯಾಗುತ್ತಿದ್ದರೂ ಸಂಭಾವ್ಯ ಮೂರನೇ ಅಲೆ ಹಾಗೂ ಪ್ರಸ್ತುತ ರೋಗಿಗಳ ಅನುಕೂಲಕ್ಕಾಗಿ ಒಂದೇ ಕಡೆ ಸಕಲ ಸೌಲಭ್ಯ ಒದಗಿಸಲು ಈ ಆಸ್ಪತ್ರೆ ಬಳಸಿಕೊಳ್ಳಬಹುದು. ಇಲ್ಲಿ 80 ಆಕ್ಸಿಜನ್ ಬೆಡ್, ಉಳಿದವು ಐಸಿಯು ಬೆಡ್ ಇವೆ ಎಂದರು.

    ಕೇವಲ ಒಂದು ಮನವಿ ಮೇರೆಗೆ ವೇದಾಂತ ಗ್ರುಪ್ ಚೇರ್ಮನ್ ಅನಿಲ್ ಅಗರವಾಲ್ ಅವರು 100 ಬೆಡ್​ನ ದೊಡ್ಡ (ಮೇಕ್ ಶಿಫ್ಟ್) ಆಸ್ಪತ್ರೆ ನಿರ್ವಿುಸಿಕೊಟ್ಟಿದ್ದಾರೆ. ಚಿತ್ರದುರ್ಗದಲ್ಲಿಯೂ ಇಂತಹ ಒಂದು ಆಸ್ಪತ್ರೆ ನಿರ್ವಿುಸಿದ್ದಾರೆ. ಇದು ಅವರ ಸಾಮಾಜಿಕ ಕಳಕಳಿ ತೋರಿಸುತ್ತದೆ ಎಂದು ಪ್ರಶಂಸಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಇತರರು ಇದ್ದರು.

    ವೇದಾಂತ ಗ್ರುಪ್​ನ ಕಬ್ಬಿಣ ಹಾಗೂ ಸ್ಟೀಲ್ ಘಟಕದ ಸಿಇಒ ಸೌವಿಕ್ ಮುಜುಂದಾರ್ ಸ್ವಾಗತಿಸಿದರು. ವೇದಾಂತ ಕೇರ್ಸ್​ನ ನಿರ್ದೇಶಕ ಕೃಷ್ಣ ರೆಡ್ಡಿ ವಂದಿಸಿದರು.

    ಕರ್ನಾಟಕ ಹೃದಯಕ್ಕೆ ಹತ್ತಿರ

    ವೇದಾಂತ ಗ್ರುಪ್ ಚೇರ್ಮನ್ ಅನಿಲ್ ಅಗರವಾಲ್ ಅವರು ಲಂಡನ್​ನಿಂದ ವರ್ಚ್ಯುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಕೋವಿಡ್ ಎದುರಿಸಲು ಸರ್ಕಾರಕ್ಕೆ ಎಲ್ಲ ರೀತಿಯಲ್ಲಿ ಬೆಂಬಲ ನೀಡಲು ಸಿದ್ಧರಿದ್ದೇವೆ. ಆಸ್ಪತ್ರೆ ಸ್ಥಾಪಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವೇದಾಂತವನ್ನು ಆಯ್ಕೆ ಮಾಡಿದ್ದು ನಮ್ಮ ಭಾಗ್ಯ ಎಂದು ಹೇಳಿದರು. ಧಾರವಾಡ ಜಿಲ್ಲೆ ಹಾಗೂ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಕೇಂದ್ರ ಸಚಿವರು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಅವರ ಆತ್ಮೀಯ ಕರೆ ಮೇರೆಗೆ ಆಸ್ಪತ್ರೆ ಸ್ಥಾಪಿಸಿದ್ದೇವೆ ಎಂದರು. ಕರ್ನಾಟಕವು ನಮ್ಮ ಹೃದಯಕ್ಕೆ ಬಹಳ ಹತ್ತಿರದಲ್ಲಿದೆ. ಮಗಳನ್ನು ಇಲ್ಲಿಗೆ ಮದುವೆ ಮಾಡಿ ಕೊಟ್ಟಿದ್ದೇವೆ. ರಾಜ್ಯದ ಆರೋಗ್ಯ ಮೂಲಸೌಕರ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಿದ್ಧರಿದ್ದೇವೆ ಎಂದರು.

    ಮಾದರಿ ಕಾರ್ಯ

    ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆ ಇನ್ನಷ್ಟು ಸುಸಜ್ಜಿತವಾಗಿದೆ. ಮತ್ತಷ್ಟು ಸೌಕರ್ಯ ಕೊಡಲು ಸರ್ಕಾರ ಸಿದ್ಧವಿದೆ. ವೇದಾಂತದವರು ಮೇಕ್ ಶಿಫ್ಟ್ ಆಸ್ಪತ್ರೆ ನಿರ್ವಿುಸಿ ಕೊಟ್ಟಿದ್ದಾರೆ. ಇದೊಂದು ಮಾದರಿ ಕಾರ್ಯ ಎಂದರು. ಕಿಮ್ಸ್​ನಲ್ಲಿ ಸದ್ಯ 105 ಬ್ಲಾ್ಯಕ್ ಫಂಗಸ್ ಕೇಸ್​ಗಳಿವೆ. ಇಲ್ಲಿ 80ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಇದು ರಾಜ್ಯದಲ್ಲಿಯೇ ಪ್ರಥಮ ಎಂದರು. ಕರ್ನಾಟಕ ಅಭಿವೃದ್ಧಿ ಹೊಂದುತ್ತಿದೆ. ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಹೂಡಿಕೆ ಪ್ರಸ್ತಾವನೆ ಬಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಮುಖ್ಯಮಂತ್ರಿಯವರು ಆಕ್ಸಿಜನ್ ನಿರ್ವಹಣೆ ಜವಾಬ್ದಾರಿಯನ್ನು ತಮಗೆ ನೀಡಿದಾಗ ಯಾವುದೇ ಹಾಹಾಕಾರವಾಗದಂತೆ ನೋಡಿಕೊಳ್ಳಲಾಯಿತು. ಪ್ರಸ್ತುತ ವೈದ್ಯಕೀಯಕ್ಕೆ ಸಾಕಾಗಿ ಉಳಿದ ಆಕ್ಸಿಜನ್ ಕೈಗಾರಿಕೆಗೆ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.

    ಲೆಕ್ಕ ಪರಿಶೋಧನೆಯಾಗಲಿ

    ಕರೊನಾ ಕಾಲಿಟ್ಟಾಗಿನಿಂದ ಕಿಮ್ಸ್​ಗೆ ಅನೇಕ ದಾನಿಗಳು ಹಲವು ರೀತಿಯಲ್ಲಿ ನೆರವು ನೀಡಿದ್ದಾರೆ. ಅವುಗಳ ಸದ್ಬಳಕೆಯಾಗಬೇಕು. ಈ ದಿಸೆಯಲ್ಲಿ ಯಾರು ಯಾವ ದೇಣಿಗೆ ಕೊಟ್ಟಿದ್ದಾರೆ, ಅದರ ಬಳಕೆ ಹೇಗೆ ಆಗುತ್ತಿದೆ ಎಂಬ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡಿಸುವುದು ಅಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts