More

    ವನ್ಯಜೀವಿಧಾಮ ಕ್ರಿಯಾಯೋಜನೆಗೆ ತಾತ್ಸಾರ!

    ಗದಗ: ಅಪರೂಪದ ಅರಣ್ಯ ಸಂಪತ್ತಿನ ಕಣಜ ಎನಿಸಿರುವ ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಸರ್ಕಾರ ಆದೇಶ ಹೊರಡಿಸಿ ಒಂಬತ್ತು ತಿಂಗಳು ಕಳೆದಿವೆ. ಆದರೆ, ಮುಂದಿನ ಕಾರ್ಯಸೂಚಿ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದೇ ಅರಣ್ಯ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತ ಕಾಲ ಕಳೆಯುತ್ತಿದ್ದಾರೆ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಕಪ್ಪತಗುಡ್ಡ ಹಾಗೂ ಅಲ್ಲಿರುವ ವನ್ಯಜೀವಿಗಳ ರಕ್ಷಣೆ ಆಧರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹಿಂದಿನ ಡಿಎಫ್​ಒ ಸೋನಲ್ ವೃಷ್ಣಿ ಹೇಳಿಕೆ ನೀಡಿದ್ದರು. ಆದರೆ, ಸದ್ಯ ಅಧಿಕಾರದಲ್ಲಿರುವ ಡಿಎಫ್​ಒ ಸೂರ್ಯಸೇನ ಈ ಕುರಿತು ಮಾತನಾಡಲು ಇಚ್ಛಿಸುತ್ತಿಲ್ಲ. ಯಾವ ವರದಿ ಸಲ್ಲಿಸಬೇಕು? ಏನು ಹಾಗಂದರೆ ಎಂಬ ಮಾತುಗಳನ್ನಾಡುತ್ತಿರುವುದು ಅನೇಕ ಸಂದೇಹವನ್ನುಂಟು ಮಾಡಿದೆ. ಹೀಗಾಗಿ, ಜಿಲ್ಲೆ ಹಾಗೂ ಅಕ್ಕಪಕ್ಕದ ಕೆಲ ಪ್ರಭಾವಿಗಳು, ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪಕ್ಕೆ ರೆಕ್ಕೆಪುಕ್ಕಗಳು ಬಂದಿವೆ.

    ಒಂಬತ್ತು ತಿಂಗಳಾಯ್ತು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 2019ರ ಮೇ 6ರಂದು ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ಘೊಷಿಸಿ ಒಂಬತ್ತು ತಿಂಗಳು ಗತಿಸಿದರೂ ವರದಿ ಸಿದ್ಧಪಡಿಸಲು ಅಧಿಕಾರಿಗಳು ತಯಾರಿಲ್ಲ. ಕಾಣದ ಕೈಗಳು ವನ್ಯಜೀವಿಧಾಮ ಯೋಜನೆ ಜಾರಿಗೆ ಕೊಕ್ಕೆ ಹಾಕತೊಡಗಿವೆ ಎಂಬ ಆರೋಪಕ್ಕೆ ಅಧಿಕಾರಿಗಳ ಧೋರಣೆ ಪುಷ್ಟಿ ನೀಡುತ್ತಿದೆ.

    ಹುಸಿಯಾದ ಭರವಸೆ

    ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೊಷಣೆ ಮಾಡಿದ್ದರಿಂದ ಕಪ್ಪತಗುಡ್ಡದ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ. ತದನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿಯಮಗಳ ಪ್ರಕಾರ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ಆಧರಿಸಿ ಕ್ರಿಯಾ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲ ಕಾರ್ಯಗಳಿಗೆ ಕನಿಷ್ಠ ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ ಎಂದು ಮೇ ತಿಂಗಳಲ್ಲಿ ಆಗಿನ ಗದಗ ಅರಣ್ಯ ಉಪಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ ನೀಡಿದ್ದ ಹೇಳಿಕೆ ಹುಸಿಯಾಗಿದೆ. ಕೆಲ ಪ್ರಭಾವಿ ಜನಪ್ರನಿಧಿಗಳು, ಪ್ರತಿಷ್ಠಿತ ಉದ್ಯಮಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ಅಧಿಕಾರಿಗಳು ಸಮೀಕ್ಷಾ ಕಾರ್ಯ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳಿವೆ.

    ಗಣಿ ಕುಳಗಳ ಆಸೆ ಜೀವಂತ

    ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸಿದ್ದ ವನ್ಯಜೀವಿ ಮಂಡಳಿ ಸಭೆಯಲ್ಲಿ ಕಪ್ಪತಗುಡ್ಡ ವನ್ಯಜೀವಿ ಧಾಮ ಅಧಿಸೂಚನೆ ರದ್ದುಪಡಿಸುವ ಕುರಿತು ಚರ್ಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ನೀಡಲಲ್ಲ. ಉಪಚುನಾವಣೆ ಪೂರ್ಣಗೊಳ್ಳುವವರೆಗೂ ಅಧಿಸೂಚನೆ ರದ್ದುಗೊಳಿಸುವ ಪ್ರಸ್ತಾವನೆಯನ್ನು ರ್ಚಚಿಸದಿರಲು ಸರ್ಕಾರ ತೀರ್ವನಿಸಿತ್ತು. ಹೀಗಾಗಿ, ಗಣಿ ಕುಳಗಳ ಆಸೆ ಇನ್ನೂ ಜೀವಂತವಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮುಂದಿನ ಮೂರು ವರ್ಷ ರಾಜ್ಯದಲ್ಲಿ ಆಡಳಿತ ನಡೆಸುವುದು ಖಚಿತವಾಗಿದೆ. ಸದ್ಯ ಸಂಪುಟ ವಿಸ್ತರಣೆಯಲ್ಲಿ ಸರ್ಕಾರ ಮಗ್ನವಾಗಿರುವುದರಿಂದ ಇತ್ತ ಕಡೆಗೆ ಗಮನ ಹರಿಸಿಲ್ಲ. ಬಹುಶಃ ಫೆಬ್ರವರಿ ನಂತರ ಕಪ್ಪತಗುಡ್ಡ ವಿಷಯವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.

    ಸಚಿವರು ಉತ್ತರಿಸಲಿ

    ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಬಳಿ ಅರಣ್ಯ ಇಲಾಖೆ ಇದ್ದು, ಈ ಕುರಿತು ಸಚಿವರು ಜನರಿಗೆ ಸ್ಪಷ್ಟ ಸಂದೇಶ ನೀಡುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಸರ್ಕಾರದ ನಿಲುವು ಏನೆಂಬುದನ್ನು ಜನರು ಎದುರು ನೋಡುತ್ತಿದ್ದಾರೆ. ಹೀಗಾಗಿ ಅರಣ್ಯ ಸಚಿವ ಸಿ.ಸಿ. ಪಾಟೀಲ ಅವರು ವನ್ಯಜೀವಿಧಾಮ ಯೋಜನೆ ಜಾರಿ ಕುರಿತು ಆಗಿರುವ ವಿಳಂಬ ಮತ್ತು ಅಡೆತಡೆಗಳ ಕುರಿತು ಉತ್ತರ ನೀಡಬೇಕೆಂದು ಜಿಲ್ಲೆಯ ಜನರು ಆಗ್ರಹಿಸುತ್ತಿದ್ದಾರೆ.

    ಆಗಬೇಕಿರುವುದೇನು?

    ಕಪ್ಪತಗುಡ್ಡದಲ್ಲಿರುವ 33 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 24,415 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿಧಾಮ ಪ್ರದೇಶ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬ್ಲಾಕ್ 1, ಬ್ಲಾಕ್ 2, ಬ್ಲಾಕ್ 3, ಮತ್ತು ಬ್ಲಾಕ್ 4 ಎಂದು ನಾಲ್ಕು ವಲಯಗಳನ್ನು ಮಾಡಲಾಗಿದೆ. ಪ್ರತಿ ಬ್ಲಾಕ್​ಗೂ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಬೇಕು. 1 ಮೀಟರ್​ನಿಂದ 10 ಕಿಮೀ ವ್ಯಾಪ್ತಿಯೊಳಗೆ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಬೇಕು. ಇದು ನಿಷೇಧಿತ ಪ್ರದೇಶವಾಗಿದ್ದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವಂತಹ ಗಣಿಗಾರಿಕೆ, ಕ್ವಾರಿಗಳ ಕಾರ್ಯನಿರ್ವಹಣೆ ಮತ್ತು ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಯಾವುದೇ ತರಹದ ಕೈಗಾರಿಕೆಗಳನ್ನು ನಡೆಸಲು ಅವಕಾಶ ಇಲ್ಲ. ಇದೆಲ್ಲವನ್ನೂ ನಿರ್ಧರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಪಂ ಸಿಇಒ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ. 100 ಮೀಟರ್ ನಿಂದ 10 ಕಿಮೀ ವರೆಗೂ ಪರಿಸರ ಸೂಕ್ಷ್ಮ ಪ್ರದೇಶ ಎಂದು ಡಿಕ್ಲರ್ ಮಾಡುವ ಅವಕಾಶ ಇರುತ್ತದೆ. ಇಂತಹ ಎಲ್ಲ ಅಂಶಗಳನ್ನು ಒಳಗೊಂಡಂತೆ ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ.

    ಕಪ್ಪತಗುಡ್ಡ ವನ್ಯಜೀವಿ ಧಾಮ ಕುರಿತಂತೆ ವಾರದೊಳಗೆ ಅಧಿಕೃತ ಮಾಹಿತಿ ನೀಡಲಾಗುವುದು. ವಿಷಯ ಸೂಕ್ಷ್ಮವಾಗಿರುವುದರಿಂದ ಸದ್ಯಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ. ನಾವು ಸರ್ಕಾರಕ್ಕೆ ಎಂತಹ ವರದಿ ಸಲ್ಲಿಸಬೇಕು? ಅದೇನೆ ಇರಲಿ ವಾರದೊಳಗೆ ಸಮಗ್ರ ಮಾಹಿತಿ ನೀಡಲಾಗುವುದು.

    | ಸೂರ್ಯಸೇನ, ಡಿಎಫ್​ಒ, ಗದಗ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts