More

    ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ

    ಚಿಕ್ಕಮಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಮಸೂದೆ ಮಂಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

    ವಕೀಲರು ಸಮಾಜದ ಹಿತ ಕಾಯುವ ಕೆಲಸದಲ್ಲಿ ನಿರತರಾಗಿರುತ್ತಾರೆ. ವೃತ್ತಿ ಅವಧಿಯಲ್ಲಿ ಅನೇಕ ಏಳುಬೀಳುಗಳನ್ನು ಎದುರಿಸುತ್ತಿರುತ್ತಾರೆ. ಈ ನಡುವೆ ಅನೇಕ ವಕೀಲರು ತಮ್ಮದಲ್ಲದ ತಪ್ಪಿಗೆ ದಾಳಿಗಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಹಾಗೂ ಹಲ್ಲೆಗೊಳಗಾಗುತ್ತಾರೆ. ಹಾಗಾಗಿ ಕಾಯ್ದೆ ಅವಶ್ಯ ಎಂದು ಒತ್ತಾಯಿಸಿದರು.

    ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ಸುಧಾಕರ್ ಮಾತನಾಡಿ, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ವಕೀಲರಿಗೇ ಇಂದು ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಇದೆ. ಸರ್ಕಾರ ಇದನ್ನು ಮನಗಂಡು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿಯೂ ತುರ್ತು ಸಭೆ ನಡೆಸಿ ಡಿಸಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

    ಉಪಾಧ್ಯಕ್ಷ ಕೆ.ಬಿ.ನಂದೀಶ್ ಮಾತನಾಡಿ, ಕಾಯ್ದೆ ಜಾರಿಗೆ ಸರ್ಕಾರ ವಿಫಲವಾದರೆ ನಿರಂತರ ಹೋರಾಟಕ್ಕೆ ಎಲ್ಲ ವಕೀಲರ ಸಂಘಗಳು ಒಕ್ಕೊರಲಿನಿಂದ ತೀರ್ವನಿಸಿವೆ. ಅದಕ್ಕೆ ಆಸ್ಪದ ನೀಡದಂತೆ ಸರ್ಕಾರ ವಕೀಲರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

    ವಕೀಲರ ಸಂಘದ ಕಾರ್ಯದರ್ಶಿ ಸಿ.ಬಿ.ರುದ್ರೇಶ್, ಖಜಾಂಚಿ ಎಚ್.ಟಿ.ಸುನೀಲ್​ಕುಮಾರ್, ಸಹ ಕಾರ್ಯದರ್ಶಿ ಕೆ.ಆರ್.ಪ್ರದೀಪ್, ಎಸ್.ಎಚ್.ಮಹೇಶ್​ಕುಮಾರ್, ಜಿ.ಎನ್.ಕೃಷ್ಣೇಗೌಡ, ವಿ.ಕೆ.ರಘು, ಹಾಲಪ್ಪ, ಎನ್.ಬಿ.ಕಲಾವತಿ, ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts