More

    ರೈಲು ಸಂಚಾರ ನಿರಂತರ

    ಶಿವಮೊಗ್ಗ: ಶಿವಮೊಗ್ಗದಲ್ಲಿ ಆರಂಭವಾದ ಎಲ್ಲ ತತ್ಕಾಲ್ ರೈಲುಗಳು ಶಾಶ್ವತವಾಗಿ ಸಂಚರಿಸುತ್ತಿವೆ. ಈಗ ಆರಂಭವಾಗಿರುವ ಶಿವಮೊಗ್ಗ-ಯಶವಂತಪುರ ಎಕ್ಸ್​ಪ್ರೆಸ್ ರೈಲು ಕೂಡ ಮುಂದಿನ ದಿನಗಳಲ್ಲಿ ನಿರಂತರವಾಗಿ ಸಂಚಾರ ನಡೆಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನೂತನವಾಗಿ ಶಿವಮೊಗ್ಗ-ಯಶವಂತಪುರ ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸಲಿರುವ ತತ್ಕಾಲ್ ವಿಶೇಷ ಎಕ್ಸ್​ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿ, ಎಲ್ಲ ರೈಲು ಸಂಚಾರವನ್ನು ಆರಂಭದಲ್ಲಿ ತತ್ಕಾಲ್ ಎಂದೇ ಕರೆಯಲಾಗುತ್ತದೆ. ಹೀಗಾಗಿ ನಾಗರಿಕರಿಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

    ರೈಲ್ವೆ ಸೇವೆ ಹೆಚ್ಚಿಸಿದರೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂಬ ಉದ್ದೇಶದಿಂದ ರೈಲ್ವೆ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆ. ಸಣ್ಣ ನಿಲ್ದಾಣವಾಗಿದ್ದ ಶಿವಮೊಗ್ಗ ರೈಲು ನಿಲ್ದಾಣ ಇಂದು ಟರ್ವಿುನಲ್ ಹಂತಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಕೋಟೆಗಂಗೂರಿನಲ್ಲಿ ರೈಲ್ವೆ ಟರ್ವಿುನಲ್ ಸ್ಥಾಪನೆಯಾಗಲಿದೆ. ಗೂಡ್ಸ್ ರೈಲುಗಳು ಅಲ್ಲಿಯೇ ನಿಲುಗಡೆಯಾಗಲಿವೆ ಎಂದು ತಿಳಿಸಿದರು.

    ಶಿವಮೊಗ್ಗ ರೈಲ್ವೆ ನಿಲ್ದಾಣದ ಮೂಲಕ ಪ್ರತಿನಿತ್ಯ 16 ರೈಲುಗಳು 32 ಬಾರಿ ಸಂಚರಿಸುತ್ತಿವೆ. ಶಿವಮೊಗ್ಗ-ತಿರುಪತಿ ಸಂಪರ್ಕದಿಂದ ಜನರಿಗೆ ಅನುಕೂಲವಾಗಿದೆ. ಈ ರೈಲಿನ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

    100 ಅಡಿ ರಸ್ತೆಗೆ ಅನುದಾನ: ರೈಲ್ವೆ ನಿಲ್ದಾಣದ ಮೂಲಕ ಸಂಪರ್ಕ ಕಲ್ಪಿಸುವ 100 ಅಡಿ ವರ್ತಲ ರಸ್ತೆಗೆ ಇದ್ದ ಅಡೆತಡೆಗಳು ದೂರಾಗಿವೆ. ರೈಲ್ವೆ ಇಲಾಖೆಗೆ ಸೇರಿದ ಜಾಗವನ್ನು ರಸ್ತೆ ನಿರ್ವಣಕ್ಕೆ ಬಳಸಿಕೊಳ್ಳಲು 3 ಕೋಟಿ ರೂ. ಪರಿಹಾರವನ್ನು ಇಲಾಖೆಗೆ ನೀಡಲಾಗುವುದು. ಇದರ ಜತೆಗೆ ಬದಲಿ ಭೂಮಿಯನ್ನೂ ಹಸ್ತಾಂತರಿಸಲಾಗುವುದು. ಖಾಸಗಿ ಭೂಮಿಗಳಿಗೆ ಪರಿಹಾರಕ್ಕೆ ಎಂದು 20 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಮೇಯರ್ ಲತಾ ಗಣೇಶ್, ಉಪಮೇಯರ್ ಎಸ್.ಎನ್.ಚನ್ನಬಸಪ್ಪ, ರೈಲ್ವೆ ಸಲಹಾ ಸಮಿತಿ ಸದಸ್ಯ ಮಾಲತೇಶ್, ಡಿಸಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ದಯಾನಂದ, ಬಿಜೆಪಿ ನಿಯೋಜಿತ ಅಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ ಇತರರಿದ್ದರು.

    ವಾಟರ್​ವೇಸ್ ಬಾಕಿಯಿದೆ: ಜಿಲ್ಲೆಗೆ ರೈಲ್ವೇಸ್ ವ್ಯವಸ್ಥೆ ಬಹಳಷ್ಟು ಸಿಕ್ಕಿದೆ. ಏರ್​ವೇಸ್​ಗೂ ಪ್ರಯತ್ನ ಉತ್ತಮ ರೀತಿಯಲ್ಲಿದೆ. ಇನ್ನು ಬಾಕಿ ಉಳಿದಿರುವುದು ವಾಟರ್​ವೇಸ್(ಜಲ ಮಾರ್ಗ) ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು. ರೈಲ್ವೆ ಭೂಪಟದಲ್ಲಿ ಸಣ್ಣದಾಗಿ ಕಾಣಿಸಿಕೊಂಡಿದ್ದ ಶಿವಮೊಗ್ಗ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಬೆಳಗ್ಗೆ 4ರಿಂದ ರಾತ್ರಿ 12ರವರೆಗೆ ಶಿವಮೊಗ್ಗ ನಿಲ್ದಾಣದಲ್ಲಿ ನಿರಂತರ ರೈಲು ಸಂಚಾರವಿದೆ. ಮೂರು ಅವಧಿಯಲ್ಲಿ ಬಿ.ವೈ.ರಾಘವೇಂದ್ರ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು ಸಾರ್ಥಕವಾಯಿತು ಎಂದರು.

    ನಾಲ್ಕು ಮೇಲ್ಸೇತುವೆ: ರೈಲು ಸಂಚಾರದಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದ ನಾಲ್ಕು ಕಡೆಗಳಲ್ಲಿ ರೈಲ್ವೆ ಮೇಲ್ಸೇತುವೆ ನಿರ್ವಣಕ್ಕೆ ಅನುದಾನ ಬಿಡುಗಡೆಯಾಗಿದೆ. ಭದ್ರಾವತಿ ಸಮೀಪ ಕಡದಕಟ್ಟೆ, ಶಿವಮೊಗ್ಗದಲ್ಲಿ ಹೊಳೆಹೊನ್ನೂರು ರಸ್ತೆ, ಸವಳಂಗ ರಸ್ತೆ ಹಾಗೂ ಕಾಶಿಪುರ ಮುಖ್ಯ ರಸ್ತೆಯಲ್ಲಿ ಮೇಲ್ಸೇತುವೆ ನಿರ್ವಣವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ಸ್ಮಾರಕ ಧ್ವಜ ಲೋಕಾರ್ಪಣೆ: ದೇಶದ 75 ರೈಲ್ವೆ ನಿಲ್ದಾಣಗಳನ್ನು ಪ್ರಥಮ ದರ್ಜೆ ನಿಲ್ದಾಣಗಳೆಂದು ಗುರುತಿಸಲಾಗಿದೆ. ಈ ನಿಲ್ದಾಣಗಳ ಎದುರು ಶಾಶ್ವತವಾಗಿ ಸ್ಮಾರಕ ಧ್ವಜ ಹಾರಿಸಲಾಗುತ್ತದೆ. ಈ ಧ್ವಜ 20*30 ಅಡಿ ವಿಸ್ತೀರ್ಣದ್ದಾಗಿರುತ್ತದೆ. ಧ್ವಜ ಸ್ಥಂಭ 100 ಅಡಿಗೂ ಹೆಚ್ಚು ಎತ್ತರವಿರುತ್ತದೆ. ಗುರುವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗ ಸ್ಮಾರಕ ಧ್ವಜಾರೋಹಣ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts