More

    ರಸ್ತೆ ಸಂಚಾರಕ್ಕೆ ಸಂಚಕಾರ

    ಶಿರಸಿ: ಕರಾವಳಿ ಹಾಗೂ ಉತ್ತರ ಕರ್ನಾಟಕವನ್ನು ಬೆಸೆಯುವ ಉತ್ತರ ಕನ್ನಡದ ಪ್ರಮುಖ ಮಾರ್ಗವಾದ ಶಿರಸಿ- ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಫಾರೆಸ್ಟ್ ಕ್ಲಿಯರೆನ್ಸ್ ಇಲ್ಲದೆ ಕಾಮಗಾರಿಗೆ ಟೆಂಡರ್ ಕರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಯಿಂದ ರಸ್ತೆ ಅತ್ತ ಮೇಲ್ದರ್ಜೆಗೂ ಏರದೆ, ಇತ್ತ ಸಮರ್ಪಕ ನಿರ್ವಹಣೆಯೂ ಇಲ್ಲದೆ ವಾಹನ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

    ಹಾವೇರಿ- ಎಕ್ಕಂಬಿ (ರಾಜ್ಯ ಹೆದ್ದಾರಿ-2) ಹಾಗೂ ಎಕ್ಕಂಬಿಯಿಂದ ಕುಮಟಾ, ಬೇಲೆಕೇರಿ (ರಾಜ್ಯ ಹೆದ್ದಾರಿ-69) ವರೆಗಿನ ರಸ್ತೆಯು 2018ರ ಆ. 28ರಂದು ರಾಷ್ಟ್ರೀಯ ಹೆದ್ದಾರಿಯಾಗಿ ಅಧಿಕೃತವಾಗಿ ಘೊಷಣೆಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಯ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ತಕ್ಷಣದಿಂದಲೇ ವಹಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಮಗ್ರ ಯೋಜನಾ ವರದಿ (ಡಿಪಿಆರ್) ಆಧರಿಸಿ ಅದೇ ವರ್ಷ ಏಪ್ರಿಲ್​ನಲ್ಲಿ ಆರ್​ಎನ್​ಎಸ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಗಳಿಗೆ 360.60 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುತ್ತಿಗೆ ನೀಡಿತು. ಆದರೆ, ಈವರೆಗೂ ರಸ್ತೆ ಅಭಿವೃದ್ಧಿಯಾಗಲಿ, ವಿಸ್ತರಣೆಯಾಗಲಿ ನಡೆದಿಲ್ಲ. ಘಟ್ಟ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಹಾಗೂ ಮರ ಕಟಾವಿಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಈವರೆಗೆ ದೊರಕದಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ, ಗುತ್ತಿಗೆ ಪಡೆದ ಕಂಪನಿಗಳು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ಈ ನಡುವೆ ಕಳೆದ ಎರಡು ವರ್ಷಗಳಿಂದ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ಫಾರೆಸ್ಟ್ ಕ್ಲಿಯರನ್ಸ್​ಗೆ 2020ರ ಜ. 3ರಂದು ನೋಡಲ್ ಅಧಿಕಾರಿಯಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರುವುದು ಬಹುತೇಕರಿಗೆ ತಿಳಿಯದ ಸಂಗತಿಯಾಗಿದೆ.

    10 ಮೀಟರ್ ಅಗಲದ ರಸ್ತೆ ನಿರ್ವಣಕ್ಕೆ ಅನುಮತಿ ಕೋರಿ, ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪ್ರಾಧಿಕಾರವು 2018ರ ಜೂನ್​ನಲ್ಲಿ ಆನ್​ಲೈನ್ ಅರ್ಜಿ ಸಲ್ಲಿಸಿತ್ತು. ದಾಖಲೆ ಹಾಗೂ ತಾಂತ್ರಿಕ ಕಾರಣ ಮುಂದಿಟ್ಟು ಅರಣ್ಯ ಇಲಾಖೆ ಎರಡು ಬಾರಿ ಸ್ಪಷ್ಟನೆ ಕೇಳಿತ್ತು. ಅದನ್ನು ಪೂರೈಸುವ ಜತೆಗೆ, ಸ್ಥಳೀಯವಾಗಿ ಭೂಸ್ವಾಧೀನ, ಗಡಿ ಗುರುತು ಹಾಕುವ ಸಂಬಂಧ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಆದರೆ, ಗಡಿ ಗುರುತು ಹಾಕುವ ಸಿಬ್ಬಂದಿಗೆ ರಸ್ತೆ ವಿಸ್ತರಣೆಯ ಅಳತೆ ಕುರಿತು ಸ್ಪಷ್ಟತೆ ಇರಲಿಲ್ಲ. ಬೇಕೆಂದಲ್ಲಿ ಗುರುತು ಹಾಕಲಾಗಿದೆ ಎಂಬುದು ಸ್ಥಳೀಕರ ಆರೋಪವಾಗಿದೆ.

    ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ವಾಹನ ಚಲಾಯಿಸಲು ಸಾಧ್ಯವಾಗದಷ್ಟು ರಸ್ತೆ ದುಃಸ್ಥಿತಿಗೆ ತಲುಪಿದೆ. ಈಗ ಅಲ್ಲಲ್ಲಿ ತೇಪೆ ಹಚ್ಚುವ ಕಾರ್ಯ ಆರಂಭವಾಗಿದೆ. ರಸ್ತೆಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳಿಗಂತೂ ಲೆಕ್ಕವಿಲ್ಲ. ಒಟ್ಟಾರೆ ಪ್ರಾಧಿಕಾರದ ವಿಳಂಬದಿಂದ ಈಗಿರುವ ರಸ್ತೆ ಕೂಡ ನಿರ್ವಹಣೆಯಿಂದ ದೂರವೇ ಉಳಿದಿರುವುದು ಶೋಚನೀಯ ಸಂಗತಿ ಎನ್ನುತ್ತಾರೆ ಸ್ಥಳೀಯರಾದ ವೆಂಕಟೇಶ ನಾಯ್ಕ ಹಾಗೂ ದೇವರಾಜ ಮರಾಠೆ.

    ಅರಣ್ಯ ಇಲಾಖೆಯ ಅನುಮತಿ ಪಡೆಯುವ ಮೊದಲೇ ಪ್ರಾಧಿಕಾರವು ಯಾಕೆ ಕಾಮಗಾರಿ ಗುತ್ತಿಗೆ ಕರೆಯಬೇಕಿತ್ತು? ಅರಣ್ಯ ಇಲಾಖೆ ಮೇಲೆ ಆರೋಪ ಮಾಡುವ ಪ್ರಾಧಿಕಾರವು, ಹೊಣೆ ವಹಿಸಿಕೊಂಡ ಮೇಲೆ ಈ ರಸ್ತೆಯ ವ್ಯವಸ್ಥಿತ ನಿರ್ವಹಣೆ ಮಾಡಿಲ್ಲ. ಇದರ ಪರಿಣಾಮ ರಸ್ತೆಯಲ್ಲಿ ಕೆಲವೆಡೆ ತೇಪೆ ಹಚ್ಚಿದರೂ ಚಿಂದಿಯಾಗಿದೆ. ಸಂಚಾರಕ್ಕೆ ಯೋಗ್ಯವಿಲ್ಲದ ಈ ರಸ್ತೆಯಲ್ಲಿ ಜಿಲ್ಲಾಡಳಿತ ಸಂಚಾರ ನಿರ್ಬಂಧ ಹೇರಬೇಕು. – ಎ. ರವೀಂದ್ರ ನಾಯ್ಕ ವಕೀಲ

    ಫಾರೆಸ್ಟ್ ಕ್ಲಿಯರೆನ್ಸ್ ಸಂಬಂಧ ಹೆದ್ದಾರಿ ವಿಸ್ತರಣೆ ಯೋಜನೆಯಿಂದ ಕೊಡಲಿಯೇಟು ಬೀಳಲಿರುವ ಮರಗಳ ಲೆಕ್ಕ ಹಾಕಿ, ವಾಸ್ತವ ಸಂಗತಿಗಳನ್ನು ಕ್ರೋಡೀಕರಿಸಿ ಅರಣ್ಯ ಇಲಾಖೆಯು ನೋಡಲ್ ಅಧಿಕಾರಿಗೆ ವರದಿ ನೀಡಿತ್ತು. 2020ರ ಜ. 3ರಂದು ನೋಡಲ್ ಅಧಿಕಾರಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಕೇಂದ್ರ ಪರಿಸರ ಇಲಾಖೆ ಪರಿಶೀಲಿಸಿ ನಂತರ ಅನುಮತಿ ನೀಡಲಿದೆ. ತಿಂಗಳೊಳಗೆ ಅನುಮತಿ ಸಿಗುವ ವಿಶ್ವಾಸವಿದ್ದು, ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. – ಜಗದೀಶ ಎಲಿಗಾರ ಎನ್​ಎಚ್​ಎಐ ಧಾರವಾಡ ವಿಭಾಗದ ಮುಖ್ಯಸ್ಥ

    ಕುಮಟಾ ರಸ್ತೆ ಅಭಿವೃದ್ಧಿಗೆ ಪರಿಸರ ಸಂಘಟನೆಗಳು ಅಡ್ಡಿಪಡಿಸಿವೆ ಎಂಬುದು ತಪ್ಪು ಕಲ್ಪನೆ. ನಾವು ನ್ಯಾಯಾಲಯಕ್ಕೆ ಹೋಗಿಲ್ಲ. ರಸ್ತೆ ಅಭಿವೃದ್ಧಿಗೆ ನಮ್ಮ ವಿರೋಧವೂ ಇಲ್ಲ. ಆದರೆ, ಘಟ್ಟ ಪ್ರದೇಶದಲ್ಲಿ ಗುಡ್ಡ ಕಡಿದು ವಿಸ್ತರಣೆ ಮಾಡಿದರೆ, ಭೂಕುಸಿತ ಆಗುತ್ತದೆ. ಅಲ್ಲದೆ, ಸುಮಾರು 10 ಸಾವಿರ ಮರಗಳು ನಾಶವಾಗುವ ಸಾಧ್ಯತೆಯಿದೆ. ಇದನ್ನು ನಾವು ವಿರೋಧಿಸಿದ್ದೇವೆ. – ಅನಂತ ಅಶೀಸರ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts