More

    ರಸ್ತೆ ಧೂಳು, ಬೆಳೆ ಹಾಳು

    ಲಕ್ಷೆ್ಮೕಶ್ವರ: ಲಕ್ಷೆ್ಮೕಶ್ವರ-ಗದಗ ಸಂಪರ್ಕ ಕಲ್ಪಿಸುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ರೈತರ ಪಾಲಿಕೆ ಮಾರಕವಾಗಿ ಪರಿಣಮಿಸಿದೆ.

    ಹೆದ್ದಾರಿಯಲ್ಲಿ ತಗ್ಗು, ಗುಂಡಿಗಳು ನಿರ್ವಣವಾಗಿದ್ದೇ ಇದಕ್ಕೆ ಕಾರಣ. ರಸ್ತೆ ತುಂಬ ಹೊಂಡಗಳು ನಿರ್ವಣವಾಗಿದ್ದರಿಂದ ಅಪಾರ ಪ್ರಮಾಣದಲ್ಲಿ ಧೂಳು ಹೊರಸೂಸುತ್ತದೆ. ಈ ಧೂಳು ಅಕ್ಕಪಕ್ಕದ ಹೊಲಗಳಲ್ಲಿನ ಬೆಳೆಗಳ ಮೇಲೆ ಕೂರುವುದರಿಂದ ಬೆಳೆಗಳಿಗೆ ವಿಷಪ್ರಾಶಣ ಮಾಡಿದಂತಾಗಿದೆ.

    ಅಪಾರ ಪ್ರಮಾಣದ ಮಳೆ ಬಿದ್ದಿದ್ದರಿಂದ ಹಾಗೂ ಕಲ್ಲು, ಮಣ್ಣು, ಮರಳು, ಇತರೆ ಸರಕು ವಾಹನ ಸೇರಿ ಭಾರವಾದ ವಾಹನಗಳ ಓಡಾಟದಿಂದ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದೆ.

    2 ತಿಂಗಳ ಹಿಂದೆ ರಸ್ತೆಯ ಗುಂಡಿ ಮುಚ್ಚಲು ಸರ್ಕಾರ ಲಕ್ಷಾಂತರ ರೂ. ಹಣ ಸುರಿದಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ಮೇಲೆ ಇರುವ ಶ್ರೀರಕ್ಷೆಯಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳಲಿಲ್ಲ. ಹೀಗಾಗಿ, ಹೆದ್ದಾರಿಯು ಧೂಳು ಸೂಸುವ ರಸ್ತೆಯಾಗಿ ಮಾರ್ಪಟ್ಟಿದೆ.

    ಲಕ್ಷೆ್ಮೕಶ್ವರ ಸಮೀಪದ ಮೆಣಸಿನಕಾಯಿ ಅವರ ಹೊಲದ ಹತ್ತಿರದ ರಸ್ತೆಯಲ್ಲಿ ಗುತ್ತಿಗೆದಾರರು ತಿಂಗಳ ಹಿಂದೆ ಕಲ್ಲಿನ ಪುಡಿ ಮತ್ತು ಜಲ್ಲಿಕಲ್ಲುಗಳ ಗುಂಪಿ ಹಾಕಿ ಹೋಗಿದ್ದು, ಮರಳಿ ಇತ್ತ ಕಡೆ ಸುಳಿದಿಲ್ಲ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಉತ್ತಮವಾಗಿ ಬೆಳೆದಿರುವ ಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗೆ ಧೂಳು ಮೆತ್ತುತ್ತಿದೆ. ಇದರಿಂದ ಬೆಳೆಗಳೆಲ್ಲ ಹಾಳಾಗಿವೆ. ರೈತರು ಜಮೀನಿನಲ್ಲಿ ಕಾಲಿಡದಂತಹ ಪರಿಸ್ಥಿತಿ ನಿರ್ವಣವಾಗಿದೆ.

    ದ್ವಿಚಕ್ರ ವಾಹನ ಸವಾರರ ಸಂಕಟ: ದೊಡ್ಡ ವಾಹನಗಳ ಹಿಂದೆ ಹೋಗುವ ಬೈಕ್ ಸವಾರರು ಹಗಲು ಹೊತ್ತಿನಲ್ಲೇ ಲೈಟ್ ಹಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ರೈತರು ಹಾಗೂ ವಾಹನ ಚಾಲಕರು, ಪ್ರಯಾಣಿಕರು ಅನುಭವಿಸುತ್ತಿರುವ ಸಂಕಟ ತಿಳಿಯುತ್ತಿಲ್ಲವೇ? ತಿಳಿದು ತಿಳಿಯದಂತೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆಯೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

    ಮುಂಗಾರಿನ ಬೆಳೆಗಳು ವಿಪರೀತ ಮಳೆಯಿಂದ ಹಾಳಾದವು. ಕಷ್ಟದ ನಡುವೆಯೇ ಸಾಲಸೂಲ ಮಾಡಿ ಹಿಂಗಾರಿನಲ್ಲಿ ಜೋಳ, ಕಡಲೆ ಬಿತ್ತನೆ ಮಾಡಿದ್ದು, ಉತ್ತಮವಾಗಿ ಬೆಳೆದಿವೆ. ಆದರೆ, ಬೆಳೆಗಳೆಲ್ಲ ಧೂಳಿನಿಂದಾವೃತವಾಗಿ ಹಾಳಾಗುತ್ತಿವೆ. ನಮ್ಮ ಕಷ್ಟವನ್ನು ಎಲ್ಲರಿಗೂ ಹೇಳಿದ್ದಾಯಿತು. ದಯವಿಟ್ಟು ಧೂಳಿನಿಂದ ಬೆಳೆ ಉಳಿಸಿಕೊಡಿ.
    | ಬಸವರಾಜ ಅಣ್ಣಿಗೇರಿ, ಮುತ್ತಣ್ಣ ಹುಳಕನವರ, ಬಸವರಾಜ ಬಾವಿಕಟ್ಟಿ , ರೈತರು

    ಸರ್ಕಾರವು ರಸ್ತೆ ಗುಂಡಿ ಮುಚ್ಚಲು ಅನುದಾನ ನೀಡಿ ಗಡುವು ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಗುತ್ತಿಗೆದಾರರ ಪರವಾಗಿಯೇ ಮಾತನಾಡುತ್ತಾರೆ. ಜನತೆ, ರೈತರು ಅನುಭವಿಸುತ್ತಿರುವ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕೂಡಲೆ ಅಧಿಕಾರಿಗಳು ಎಚ್ಚೆತ್ತು 2 ದಿನದೊಳಗೆ ರಸ್ತೆ ದುರಸ್ತಿ ಮಾಡಬೇಕು. ಇಲ್ಲವಾದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ.
    | ಬಸವರಾಜ ಹೊಗೆಸೊಪ್ಪಿನ, ರೈತ ಮುಖಂಡ

    ಲಕ್ಷೆ್ಮೕಶ್ವರ-ಗದಗ ಸಂಪರ್ಕ ಕಲ್ಪಿಸುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇನೆ.
    | ಎ. ರಾಮಮೂರ್ತಿ, ಪಿಡಬ್ಲ್ಯುಡಿ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts