More

    ಯೋಗೀಶಗೌಡ ಗೌಡರ ಕೊಲೆ ಪ್ರಕರಣ, ದಾಂಡೇಲಿಯಲ್ಲಿ ವಿಚಾರಣೆ

    ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ 6 ಸುಪಾರಿ ಹಂತಕರ ವಿಚಾರಣೆ ಶುಕ್ರವಾರವೂ ನಡೆಯಿತು. ಅಧಿಕಾರಿಗಳ ತಂಡ ಆರೋಪಿಗಳನ್ನು ದಾಂಡೇಲಿಯ ರೆಸಾರ್ಟ್​ವೊಂದಕ್ಕೆ ಕರೆದೊಯ್ದು, ಅಲ್ಲಿ ತಂಗಿದ್ದ ಸ್ಥಳ ಮಹಜರು ನಡೆಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

    2016ರ ಜೂನ್ 15ರಂದು ಯೋಗೀಶಗೌಡ ಕೊಲೆಗೂ ಮುಂಚೆ ಬೆಂಗಳೂರು ಮೂಲದ ಆರೋಪಿಗಳಾದ ದಿನೇಶ, ಸುನೀಲ, ನೂತನ್, ಅಶ್ವತ್ಥ್, ಶಾನವಾಜ್ ಹಾಗೂ ನಜೀರಅಹಮದ್ ದಾಂಡೇಲಿಯ ರೆಸಾರ್ಟ್​ನಲ್ಲಿ 3 ದಿನ ತಂಗಿದ್ದರು ಎನ್ನಲಾಗಿದೆ. ರೆಸಾರ್ಟ್ ಧಾರವಾಡ ಮೂಲದ ಇಂಜಿನಿಯರ್ ರೂಪೇಂದ್ರ ಸೇರಿ ಮೂವರ ಒಡೆತನದಲ್ಲಿದೆ.

    ವಿಚಾರಣೆ ವೇಳೆ ಆರೋಪಿಗಳು ತಾವು

    ರೆಸಾರ್ಟ್​ನಲ್ಲಿ ತಂಗಿದ್ದ ವಿಷಯ ಬಾಯಿಬಿಟ್ಟಿದ್ದರು. ಹಾಗಾಗಿ ಸಿಬಿಐ ಅಧಿಕಾರಿಗಳು ಅಲ್ಲಿಗೆ ಕರೆದೊಯ್ದಿದ್ದಾರೆ.

    ಶುಕ್ರವಾರ ಸಿಬಿಐ ತಂಡ ನಗರದಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. 3-4 ದಿನಗಳಿಂದ ಉಪನಗರ ಠಾಣೆ ಹಾಗೂ ಜರ್ಮನ್ ಆಸ್ಪತ್ರೆ ವೃತ್ತದ ಪೊಲೀಸ್ ಅತಿಥಿಗೃಹಕ್ಕೆ ಆರೋಪಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದರು. ಒಂದು ತಂಡ ಅಜ್ಞಾತ ಸ್ಥಳದಲ್ಲಿ ಕೆಲ ಆರೋಪಿಗಳನ್ನು ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ.

    ನ್ಯಾಯಾಲಯಕ್ಕೆ ಇಂದು: ಬೆಂಗಳೂರಿನಲ್ಲಿ ಬಂಧಿತ 6 ಆರೋಪಿಗಳ ಸಿಬಿಐ ಕಸ್ಟಡಿ ಮಾ. 7ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ಆರೋಪಿಗಳನ್ನು ಅಧಿಕಾರಿಗಳು ಶನಿವಾರ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

    ಪೊಲೀಸರಿಗೂ ಡ್ರಿಲ್?: ಆರಂಭದಲ್ಲಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಉಪನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ ಕೊಲೆಗಾಗಿ ಬಳಸಲಾಗಿದ್ದ ಕಪ್ಪು ಬಣ್ಣದ ಶವರ್ಲೆ ಕಾರನ್ನು ಸಿಬಿಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪೊಲೀಸ್ ತನಿಖೆಯಲ್ಲಿ ಹಲವು ಅಂಶಗಳು ಬಿಟ್ಟು ಹೋಗಿರುವುದು ಬಯಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂದು ಉಪನಗರ ಠಾಣೆಯಲ್ಲಿ ಸೇವೆಯಲ್ಲಿದ್ದ ಕೆಲ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳನ್ನೂ ಸಿಬಿಐ ತಂಡ ಈಗಾಗಲೇ ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts