More

    ಯುಡಿಐಡಿ ಜಿಲ್ಲೆಗೆ 3ನೇ ಸ್ಥಾನ!

    ಚಾಮರಾಜನಗರ: ಹಲವು ತೊಡಕುಗಳ ನಡುವೆಯೂ ಅಂಗವಿಕಲರ ಪ್ರಮಾಣ ಪತ್ರ (ಯುಡಿಐಡಿ ಕಾರ್ಡ್) ವಿತರಣೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ.

    ಅಂಗವಿಕಲರಿಗೆ ಸರ್ಕಾರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಮತ್ತು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ 2019ರ ಜೂನ್‌ನಲ್ಲಿ ಕೇಂದ್ರ ಸರ್ಕಾರ ಯುಡಿಐಡಿ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿತು. ಇದರ ಮೂಲಕ ಅಂಗವಿಕಲರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ದೇಶಾದ್ಯಂತ ನೀಡಲಾಗುತ್ತಿದ್ದು, ಯಡಿಐಡಿ ಕಾರ್ಡ್ ವಿತರಣೆಯಲ್ಲಿ ಗಣನೀಯ ಸಾಧನೆ ಮಾಡುತ್ತಿರುವ ಜಿಲ್ಲೆಗಳ ಪಟ್ಟಿಯಲ್ಲಿ ಚಾಮರಾಜನಗರ ಮೂರನೇ ಸ್ಥಾನ ಪಡೆದುಕೊಂಡಿದೆ.

    ಗಡಿಜಿಲ್ಲೆ ಟಾಪ್ 3
    ಪ್ರತಿಯೊಬ್ಬ ಅಂಗವಿಕಲರೂ ಯುಡಿಐಡಿ ಕಾರ್ಡ್ ಮಾಡಿಸುವುದು ಕಡ್ಡಾಯವಾಗಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.

    ಇದರ ನಡುವೆಯೂ ರಾಜ್ಯದಲ್ಲಿ ಚಿತ್ರದುರ್ಗ, ರಾಮನಗರ, ಚಾಮರಾಜನಗರ, ರಾಯಚೂರು, ಕೊಪ್ಪಳ, ಕೋಲಾರ ಜಿಲ್ಲೆಗಳು ಅಂಗವಿಕಲರ ವಿಶೇಷ ಗುರುತಿನ ಚೀಟಿ ವಿತರಣೆಯಲ್ಲಿ ಮುಂದಿವೆ. ಉಳಿದಂತೆ ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ ಸ್ಥಾನ ಪಡೆದುಕೊಂಡಿವೆ.
    ಮಾಹಿತಿ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ 10,592 (ಶೇ.39.01)ಅಂಗವಿಕಲರಿಗೆ ಯಡಿಐಡಿ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ರಾಮನಗರ-6,182 (37.42), ಚಾಮರಾಜಗನರ-5,519 (ಶೇ.36.32), ರಾಯಚೂರು-7,407 (ಶೇ.19.94), ಕೊಪ್ಪಳ-5529 (ಶೇ.18.96), ಕೋಲಾರ-4094 (ಶೇ.17.25) ಕಾರ್ಡ್‌ಗಳನ್ನು ವಿತರಣೆ ಮಾಡಿದೆ. ಇಲ್ಲಿ ರಾಯಚೂರು ಗರಿಷ್ಠ ಪ್ರಮಾಣದಲ್ಲಿ ಯಡಿಐಡಿ ಕಾರ್ಡ್‌ಗಳನ್ನು ತಲುಪಿಸಿದ್ದರೂ ಕೂಡ ತಿರಸ್ಕೃತ ಅರ್ಜಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

    ಚಾಮರಾಜನಗರ ಜಿಲ್ಲೆ ಯಡಿಐಡಿ ಕಾರ್ಡ್ ವಿತರಣೆಯಲ್ಲಿ ಗಣನೀಯ ಸ್ಥಾನ ಪಡೆದು ಮುನ್ನಡೆಯುತ್ತಿದೆ. ಜಿಲ್ಲೆಯಲ್ಲಿ ಒಟ್ಟು 20,464 ಅಂಗವಿಕಲರನ್ನು ಇಲಾಖೆ ಗುರುತಿಸಿದೆ. ಕಣ್ಣಿನ ತೊಂದರೆ ಇರುವವರು-3,178 ಜನರು, ಮಾತು ಮತ್ತು ಕಿವಿ ದೋಷವಿರುವವರು-5,674, ದೈಹಿಕ ನ್ಯೂನತೆ ಇರುವವರು- 4,079, ಬುದ್ಧಿಮಾಂದ್ಯರು-1,377, ಬುದ್ಧಿ ಭ್ರಮಣೆ-325, ಮಿಶ್ರ ಅಂಗವಿಕಲರು-5831 ಜನರಿದ್ದು, ಇವರಲ್ಲಿ ಈವರೆಗೆ 5,519 ಅಂಗವಿಕಲರಿಗೆ ಯಡಿಐಡಿ ಕಾರ್ಡ್ ತಲುಪಿದೆ.

    ಅಗ್ರಸ್ಥಾನಕ್ಕೇರಲು ತೊಡಕು!
    ರಾಜ್ಯದ ಇತರೆ ಜಿಲ್ಲೆಗಳಲ್ಲಿ ತಾಲೂಕು ಕೇಂದ್ರಗಳಲ್ಲೂ ಯಡಿಐಡಿ ಕಾರ್ಡ್ ವಿತರಣೆ ಸಂಬಂಧ ವೈದ್ಯಕೀಯ ಪ್ರಮಾಣ ಪತ್ರ ನಡೆಯುತ್ತಿದೆ. ಆದರೆ ಚಾಮರಾಜನಗರದ ಜಿಲ್ಲಾಕೇಂದ್ರದಲ್ಲಿ (ಜಿಲ್ಲಾಸ್ಪತ್ರೆ) ಮಾತ್ರ ಪ್ರಮಾಣ ಪತ್ರ ನೀಡುತ್ತಿರುವುದು ಜಿಲ್ಲೆ ಅಗ್ರಸ್ಥಾನಕ್ಕೇರಲು ಸಾಧ್ಯವಾಗದಂತೆ ಮಾಡಿದೆ. ಜತೆಗೆ ಅಂಗವಿಕಲರಿಗೆ ಶೀಘ್ರದಲ್ಲಿ ಯುಡಿಐಡಿ ಕಾರ್ಡ್ ಕೈ ತಲುಪದಂತಾಗಿದೆ.

    ಅಂಗವಿಕಲರ ಪರದಾಟ:
    ಅಂಗವಿಕಲರು ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಾಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಂಗವಿಕಲರು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಪರದಾಡುತ್ತಿರುವುದನ್ನು ಗಮನಿಸಬೇಕಾಗಿದೆ.

    ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಸೌಲಭ್ಯವಿಲ್ಲದೆ ಅಂಗವಿಕಲರು ಜಿಲ್ಲಾಸ್ಪತ್ರೆಗೆ ಬರಬೇಕಾಗಿದೆ. ಒಂದೇ ಕೇಂದ್ರದಲ್ಲಿ ಜನರ ಸಂಖ್ಯೆ ಹೆಚ್ಚಾದರೆ ದಿನವಿಡೀ ಕಾಯುತ್ತಾ ಕೂರಬೇಕಾಗಿದೆ. ಈ ಸಮಸ್ಯೆಯನ್ನು ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರ ಗಮನಕ್ಕೆ ತಂದರೂ ಈವರೆಗೂ ಯಾವುದೇ ಪ್ರಯೋಜವಾಗದಿರುವುದು ಅಂಗವಿಕಲರ ಆಶಾಭಾವನೆ ಕ್ಷೀಣಿಸುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts