More

    ಮೈದುಂಬಿದೆ ಶಾಂಭವಿ ನದಿ

     ಬೆಳ್ಮಣ್: ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ನದಿ, ತೊರೆಗಳು ಬತ್ತುವುದು ಸಾಮಾನ್ಯ. ಆದರೆ ಸಂಕಲಕರಿಯ ವ್ಯಾಪ್ತಿಯಲ್ಲಿ ಶಾಂಭವಿ ನದಿ ನೀರಿನಿಂದ ತುಂಬಿ ತುಳುಕುತ್ತಿದೆ. ಮುಂಡ್ಕೂರು ಗ್ರಾಮದ ಸಂಕಲಕರಿಯದಲ್ಲಿ ಅಣೆಕಟ್ಟು ಬಾಗಿಲು ಹಾಕಿದುದರ ಪರಿಣಾಮ ಮೈದುಂಬಿ ಹರಿಯುತ್ತಿದೆ. ನದಿ ಪರಿಸರ ಹಚ್ಚ ಹಸಿರಿನಿಂದ ಕೂಡಿದ್ದು ಅಣೆಕಟ್ಟು ಭರ್ತಿಯಾಗಿ ಮಳೆಗಾಲದಲ್ಲಿ ಹರಿಯುವಂತೆ ಶಾಂಭವಿ ನದಿಯಲ್ಲಿ ನೀರು ಹರಿಯುತ್ತಿದೆ.
    ಇಲ್ಲಿನ ಕೃಷಿಕರು ಇಲಾಖೆಯ ಅನುದಾನ ಕಾಯದೆ ನದಿ ಮೂಲ ಬತ್ತುವ ಲಕ್ಷಣಗಳು ಕಂಡು ಬರುತ್ತಿದ್ದಂತೆ ಪ್ರತಿ ವರ್ಷದಂತೆ ಅಣೆಕಟ್ಟಿಗೆ ಹಲಗೆ ಹಾಕಿ ನೀರು ಸಂಗ್ರಹ ಮಾಡುತ್ತಾರೆ. ಈ ಬಾರಿಯೂ ಇಲ್ಲಿನ ಕೃಷಿಕರು ಸಂಕಲಕರಿಯ ಹಾಗೂ ಬಳ್ಕುಂಜೆಯಲ್ಲಿ ಹಲಗೆ ಹಾಕಿದ್ದು ಇದರಿಂದ ಶಾಂಭವಿ ನದಿಯಲ್ಲಿ ನೀರು ತುಂಬಿ ತುಳುಕುತ್ತಿದೆ. ಅಣೆಕಟ್ಟು ತುಂಬಿ ಮೇಲ್ಭಾಗದಲ್ಲಿ ನೀರು ಹರಿಯುತ್ತಿದ್ದು ನದಿ ಪರಿಸರದ ಕೃಷಿಕರು ಸಂತಸಗೊಂಡಿದ್ದಾರೆ. ತುಂಬಿದ ನದಿ ಕೃಷಿಕರ ಪಾಲಿಗೆ ವರದಾನವಾಗಿದೆ. ಪಲಿಮಾರು, ಬಳ್ಕುಂಜೆ ಹಾಗೂ ಸಂಕಲಕರಿಯದಲ್ಲಿ ಅಣೆಕಟ್ಟಿಗೆ ಹಲಗೆ ಹಾಕುವುದರಿಂದ ನದಿಯಲ್ಲಿ ನೀರು ಸಂಗ್ರಹವಾಗಿ ಸುಮಾರು ನದಿ ಪರಿಸರದ ಸುಮಾರು 20 ಕಿ.ಮೀ ಉದ್ದಕ್ಕೂ ಕೃಷಿಕರಿಗೆ ಉಪಯೋಗವಾಗಲಿದೆ. ನದಿ ಬದಿಯ ಕೃಷಿಕರು ನದಿ ನೀರು ಆಶ್ರಯಿಸಿ ಮತ್ತೊಂದು ಬೆಳೆ ಬೆಳೆಯುತ್ತಿದ್ದಾರೆ.

    ಬಾವಿಯ ಒರತೆ ಹೆಚ್ಚಳ: ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಿ ನದಿ ಮೂಲದ ಮನೆಗಳಲ್ಲಿ ಕುಡಿಯುವ ನೀರಿನ ಬಾವಿಗಳಲ್ಲಿ ಒರತೆ ಹೆಚ್ಚಾಗತೊಡಗಿದೆ. ಬಹುತೇಕ ಮನೆಗಳ ಬಾವಿಗಳು ನವೆಂಬರ್ ಅಂತ್ಯಕ್ಕೆ ಬತ್ತುತ್ತಿದ್ದು ಈ ಬಾರಿ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಿ ಬಾವಿಗಳಲ್ಲೂ ಒರತೆ ಹೆಚ್ಚಾಗಿದೆ. ಹೀಗಾಗಿ ಕೃಷಿಕರು ಖುಷಿಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

    ಶಾಂಭವಿ ನದಿ ಮೈದುಂಬಿ ಹರಿಯುತ್ತಿದ್ದು ಈ ಭಾಗದ ಗ್ರಾಮಸ್ಥರಿಗೆ ಈ ಬಾರಿ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ದೂರವಾಗಲಿದೆ. ಈ ಬಾರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಪೂರ್ಣ ಪ್ರಮಾಣದಲ್ಲಿ ಹಲಗೆ ಹಾಕಿಲ್ಲ. ಆದರೂ ನದಿ ತುಂಬಿ ಹರಿಯುತ್ತಿದೆ.
    -ಸುಧಾಕರ್ ಸಾಲ್ಯಾನ್, ಕೃಷಿಕರು

    ಸಂಕಲಕರಿಯ ಹಾಗೂ ಪಲಿಮಾರಿನಲ್ಲಿ ಅಣೆಕಟ್ಟಿಗೆ ಹಲಗೆ ಹಾಕಿದರೆ ಸುಮಾರು 20 ಕಿ.ಮೀ. ಉದ್ದಕ್ಕೂ ನದಿ ಬದಿಯ ಮನೆಗಳ ಬಾವಿಯಲ್ಲಿ ನೀರಿನ ಒರತೆ ಹೆಚ್ಚಾಗುತ್ತದೆ. ಕೃಷಿಕರಿಗೆ ನದಿಯ ನೀರು ಅತ್ಯಂತ ಉಪಯೋಗವಾಗಿದೆ.
    -ಭಾಸ್ಕರ್ ಶೆಟ್ಟಿ, ಪ್ರಗತಿಪರ ಕೃಷಿಕರು, ಪಲಿಮಾರು

    ಸಂಕಲಕರಿಯ ಸೇತುವೆಗೆ ತಡೆಬೇಲಿ ಅಗತ್ಯ: ತುಂಬಿ ಹರಿಯುವ ನದಿಯಾದರೂ ಸಂಕಲಕರಿಯ ಶಾಂಭವಿ ನದಿ ಸೇತುವೆಗೆ ತಡೆಬೇಲಿ ಇಲ್ಲದೆ ಅಪಾಯಕಾರಿಯಾಗಿದೆ. ಮುಳುಗು ಸೇತುವೆಯಾದ ಇದರ ಎರಡು ಭಾಗಕ್ಕೂ ತಡೆಬೇಲಿ ನಿರ್ಮಾಣದ ಅಗತ್ಯವಿದೆ. ವರ್ಷದ ಹಿಂದೆ ಅಣೆಕಟ್ಟಿನಲ್ಲಿ ಸಂಗ್ರಹವಿದ್ದ ನದಿ ನೀರಿಗೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಮಹಿಳೆಯೊಬ್ಬರು ಮೃತಪಟ್ಟಿದ್ದು ಮೂವರನ್ನು ಸ್ಥಳೀಯರು ರಕ್ಷಿಸಿದ್ದರು. ಘಟನೆ ನಡೆದು ಒಂದು ವರ್ಷವಾದರೂ ಸೇತುವೆಯ ಸಣ್ಣ ಪಿಲ್ಲರ್‌ಗಳನ್ನು ಇಂದಿಗೂ ಸರಿಪಡಿಸಿಲ್ಲ. ಮತ್ತೊಂದು ಅವಘಡ ನಡೆಯುವ ಮುನ್ನ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸೇತುವೆಗೆ ತಡೆ ಬೇಲಿ ನಿರ್ಮಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

     

    ಹರಿಪ್ರಸಾದ್ ನಂದಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts