More

    ಮೇ 10ರಂದು ಮತದಾನ: ಮೈಸೂರಿನಲ್ಲಿ ಸಕಲ ಸಿದ್ಧತೆ

    ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆಯ ಮತಸಮರ ಮೇ 10ರಂದು ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ಪ್ರಭುಗಳು ಬರೆಯಲಿದ್ದಾರೆ.

    ಬುಧವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇ 13ರಂದು ಮತಗಳ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದ್ದು, ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮತದಾರರ ತೀರ್ಪು ಬಹಿರಂಗವಾಗಲಿದೆ.

    ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದ್ದು, ಮತದಾರರು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ.


    ಅಳಿಸಲಾಗದ ಶಾಯಿ:
    ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಿಗೆ ಅಗತ್ಯ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಶೌಚಗೃಹ, ವಿದ್ಯುತ್ ಸಂಪರ್ಕ, ರ‌್ಯಾಂಪ್ ವ್ಯವಸ್ಥೆ ಒದಗಿಸಲು ಕ್ರಮ ವಹಿಸಲಾಗಿದೆ.
    ಅಂಗವಿಕಲರು, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಎಲ್ಲ ಮತಗಟ್ಟೆಗಳಲ್ಲಿ ವ್ಹೀಲ್‌ಚೇರ್, ಬೂತುಗನ್ನಡಿ ಇರಲಿದೆ. ಜತೆಗೆ, ಇವರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.

    ರಜೆ ಘೋಷಣೆ:
    ಮತದಾನ ಮಾಡಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ, ನೌಕರರಿಗೆ ಮೇ 10ರಂದು ವೇತನಸಹಿತ ರಜೆ ನೀಡಲಾಗಿದೆ.

    ಸಿಬ್ಬಂದಿ ನಿಯೋಜನೆ:
    ಜಿಲ್ಲೆಯ 11 ಕ್ಷೇತ್ರಗಳ ವ್ಯಾಪ್ತಿಯ 2,905 ಮತಗಟ್ಟೆಗಳಿಗೆ ಮೀಸಲು ಸೇರಿದಂತೆ 3,156 ಅಧ್ಯಕ್ಷಾಧಿಕಾರಿಗಳು, 3,250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ 6,352 ಮತದಾನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. 600 ಕೇಂದ್ರ ಸರ್ಕಾರದ ಅಧಿಕಾರಿಗಳು, ನೌಕರರನ್ನು ಮೈಕ್ರೋ ಅಬ್ಸರ್‌ವರ್ ಆಗಿ ನೇಮಕ ಮಾಡಲಾಗಿದ್ದು, ಅವರಿಗೂ ತರಬೇತಿ ನೀಡಲಾಗಿದೆ.

    ಮತದಾನದ ಹಿಂದಿನ ದಿನ ಮತ್ತು ಮತದಾನದ ದಿನದಂದು ಮಳೆ ಬರುವ ಸಾಧ್ಯತೆ ಇರುವುದರಿಂದ ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲ ಸಿಬ್ಬಂದಿ ರೇನ್‌ಕೋಟ್ ತರುವಂತೆ ಕೋರಲಾಗಿದೆ.

    ಕಣದಲ್ಲಿ 143 ಅಭ್ಯರ್ಥಿಗಳು:
    ಜಿಲ್ಲೆಯ 11 ಕ್ಷೇತ್ರಗಳ ಕಣದಲ್ಲಿ ಒಟ್ಟು 143 ಅಭ್ಯರ್ಥಿಗಳು ಇದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ 10, ಕೃಷ್ಣರಾಜನಗರದಲ್ಲಿ 8, ಹುಣಸೂರು 12, ನಂಜನಗೂಡು 12, ಎಚ್.ಡಿ.ಕೋಟೆ 12, ಚಾಮುಂಡೇಶ್ವರಿ 14, ಕೃಷ್ಣರಾಜ 17, ಚಾಮರಾಜ 14, ನರಸಿಂಹರಾಜ 17, ತಿ.ನರಸೀಪುರ 12, ವರುಣ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ಜಯಕ್ಕಾಗಿ ಹೋರಾಟ ನಡೆದಿದೆ.


    ಮತಯಂತ್ರ ಬಳಕೆ:
    ಮತದಾನಕ್ಕಾಗಿ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗುತ್ತಿದೆ. ಈ ಚುನಾವಣೆಗೆ 5,620 ಬ್ಯಾಲೆಟ್ ಯೂನಿಟ್, 3,936 ಕಂಟ್ರೋಲ್ ಯೂನಿಟ್ ಮತ್ತು 4,266 ವಿ.ವಿ. ಪ್ಯಾಟ್ ಬಳಸಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆಗಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ 22 ಇಸಿಐಎಲ್ ಹೈದರಾಬಾದ್ ಇಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ.


    ಮತಗಟ್ಟೆ ಬಳಿ ಪ್ರಚಾರಕ್ಕೆ ನಿರ್ಬಂಧ:
    ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಠ 200 ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಆದರೆ, ಯಾವುದೇ ರೀತಿಯ ಪ್ರಚಾರ ಮಾಡುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್‌ನಲ್ಲಿ ಮತದಾರರ ಭಾಗಸಂಖ್ಯೆ, ಕ್ರಮಸಂಖ್ಯೆ, ಹೆಸರನ್ನು ಮಾತ್ರ ಬರೆಯಬೇಕು. ಯಾವುದೇ ರೀತಿಯ ಚಿಹ್ನೆಗಳು, ಅಭ್ಯರ್ಥಿ ಭಾವಚಿತ್ರ ಇರದಂತೆ ಎಚ್ಚರ ವಹಿಸಬೇಕು. 2 ಚೇರ್, 1 ಮೇಜು, ಚಿಕ್ಕ ಬ್ಯಾನರ್ ಹಾಕಿಕೊಳ್ಳಲು ಅವಕಾಶವಿದ್ದು, ಇದಕ್ಕಾಗಿ ಚುನಾವಣಾಧಿಕಾರಿ, ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು.

    ಪೋಲಿಂಗ್ ಏಜೆಂಟರ್ ನೇಮಕಾತಿ:
    ಎಲ್ಲ ಅಭ್ಯರ್ಥಿಗಳು ಮತಗಟ್ಟೆಗೆ ಒಬ್ಬರಂತೆ ಮತದಾನ ಏಜೆಂಟರನ್ನು ನೇಮಿಸಬಹುದಾಗಿದೆ. ಈ ಏಜೆಂಟರು ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಮತದಾನಾಧಿಕಾರಿಗಳು ಅವಕಾಶ ಮಾಡಿಕೊಡುತ್ತಾರೆ. ಬದಲಿ ಏಜೆಂಟರನ್ನು ನೇಮಿಸಿಕೊಂಡಿದ್ದರೂ ಒಬ್ಬ ಏಜೆಂಟರ್‌ಗೆ ಮಾತ್ರ ಮತಗಟ್ಟೆಯಲ್ಲಿ ಇರಲು ಅವಕಾಶ ಇದೆ.

    ಮೊಬೈಲ್ ನಿಷೇಧ:
    ಮತದಾರರು ಮೊಬೈಲ್ ಫೋನ್, ಕ್ಯಾಮರಾಗಳನ್ನು ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಮತ ಚಲಾವಣೆಯ ಛಾಯಾಚಿತ್ರ ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಬೆಂಕಿಪೊಟ್ಟಣ ತೆಗೆದುಕೊಂಡು ಹೋಗುವುದನ್ನೂ ನಿಷೇಧಿಸಲಾಗಿದೆ.

    ಪೊಲೀಸ್ ಭದ್ರತೆ:
    ಆಯ್ದ ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್ ನೇಮಕಾತಿ, ವೆಬ್‌ಕಾಸ್ಟಿಂಗ್ ಸೌಲಭ್ಯ, ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೂ ಅಗತ್ಯ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

    1950ಕ್ಕೆ ದೂರು ನೀಡಬಹುದು
    ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿಚಾರಣೆ, ದೂರುಗಳನ್ನು 1950 ಮುಖಾಂತರ ನಿರ್ವಹಿಸಲಾಗುತ್ತದೆ. ಮತದಾನ ಎಲ್ಲರ ಸಾಂವಿಧಾನಿಕ ಹಕ್ಕು. ಎಲ್ಲ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ, ಸುಗಮವಾಗಿ ನಡೆಸಲು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮನವಿ ಮಾಡಿದ್ದಾರೆ.

    ಭದ್ರತಾ ಕೊಠಡಿ:

    ಮತದಾನ ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರ ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ ಮಸ್ಟರಿಂಗ್ ಸ್ಥಳದಿಂದ ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ಭದ್ರತಾ ಕೊಠಡಿಗೆ 3 ಸುತ್ತಿನ ಭದ್ರತೆ ಕಲ್ಪಿಸಲಾಗಿದೆ. 1ನೇ ಭದ್ರತೆಯನ್ನು ಸಿಎಪಿಎಫ್ ತುಕಡಿ, 2ನೇ ಭದ್ರತೆಯನ್ನು ಸಶಸ್ತ್ರ ಮೀಸಲು ಪಡೆ, 3ನೇ ಹಂತದಲ್ಲಿ ಸ್ಥಳೀಯ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಭದ್ರತಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಲಾಗ್‌ಬುಕ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

    ಮತದಾರರ ಗುರುತಿಗಾಗಿ ಪೂರಕ ದಾಖಲೆ
    ಮತದಾರರು ಭಾರತ ಚುನಾವಣಾ ಆಯೋಗ ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ ಹಾಜರುಪಡಿಸಬೇಕು. ಅದು ಇಲ್ಲದ ಮತದಾರರು ಕೆಳಕಂಡ 11 ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ಗುರುತಿಗಾಗಿ ತೋರಿಸಬೇಕು. ಮತದಾರರ ಭಾವಚಿತ್ರವಿರುವ ವೋಟರ್ ಸ್ಲಿಪ್ ಅನ್ನೂ ಮತದಾರರಿಗೆ ವಿತರಣೆ ಮಾಡಲಾಗಿದೆ.

    1. ಆಧಾರ್ ಕಾರ್ಡ್
      2.ನರೇಗಾ ಯೋಜನೆಯ ಉದ್ಯೋಗ ಕಾರ್ಡ್
      3.ಭಾವಚಿತ್ರವಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಪಾಸ್ ಪುಸ್ತಕ
      4.ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‌ಗಳು (ಕಾರ್ಮಿಕ ಮಂತ್ರಾಲಯ ಯೋಜನೆ)
      5.ವಾಹನ ಪರವಾನಗಿ(ಡಿಎಲ್)
      6.ಪಾನ್‌ಕಾರ್ಡ್
      7.ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಯೋಜನೆಯಡಿ ವಿತರಿಸಿರುವ ಸ್ಮಾರ್ಟ್‌ಕಾರ್ಡ್
      8.ಭಾರತೀಯ ಪಾಸ್‌ಪೋರ್ಟ್
      9.ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶ
      10.ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
      11.ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts