More

    ಮೇಲುಕೋಟೆಯಲ್ಲಿ ಭಕ್ತರ ದಂಡು

    ಮೇಲುಕೋಟೆ: ಭೂ ವೈಕುಂಠ ಶ್ರೀಚೆಲುವನಾರಾಯಣಸ್ವಾಮಿ ಶ್ರೀಕೇತ್ರ ಮೇಲುಕೋಟೆ ಹೊಸ ವರ್ಷದ ಮೊದಲ ದಿನವಾದ ಭಾನುವಾರ ಭಕ್ತ ಸಾಗರದಿಂದ ತುಂಬಿ ತುಳುಕುತ್ತಿತ್ತು.
    50 ಸಾವಿರಕ್ಕೂ ಹೆಚ್ಚು ಭಕ್ತರು ಚೆಲುವನಾರಾಯಣಸ್ವಾಮಿ, ಯೋಗನರಸಿಂಹಸ್ವಾಮಿಯ ದರ್ಶನ ಪಡೆದರು.


    ಪಂಚಕಲ್ಯಾಣಿ, ಯೋಗನರಸಿಂಹಸ್ವಾಮಿ ಬೆಟ್ಟ, ಅಕ್ಕ ತಂಗಿಕೊಳ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳಲ್ಲೂ ಅಪಾರ ಸಂಖ್ಯೆಯ ಭಕ್ತ ಸಮೂಹ ನೆರೆದಿತ್ತು.
    ಹೊಸ ವರ್ಷದ ಮೊದಲ ದಿನ ಶ್ರೀ ಚೆಲುವನಾರಾಯಣನ ದರ್ಶನ ಭಾಗ್ಯದಿಂದ ಇಡೀ ವರ್ಷ ಉಲ್ಲಾಸದಾಯಕವಾಗಿರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಮುಂಜಾನೆಯಿಂದಲೇ ಬಿಸಿಲನ್ನೂ ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.


    ಜನದಟ್ಟಣೆಗೆ ಹೆದರಿ ದೇವಾಲಯಕ್ಕೆ ಹೋಗಲು ಸಾಧ್ಯವಾಗದ ಭಕ್ತರು ಹೊರಭಾಗದಲ್ಲೇ ಚತುರ್ಮುಖ ಗೋಪುರಕ್ಕೆ ನಮಸ್ಕಾರ ಮಾಡಿ ಹೋಗುತ್ತಿದ್ದರು. ಧನುರ್ಮಾಸದ ಪ್ರಯುಕ್ತ ದೇವಾಲಯದಲ್ಲಿ ಮುಂಜಾನೆ 4-30 ರ ವೇಳೆಗೆ ಪೂಜಾ ಕೈಂಕರ್ಯಗಳು ಆರಂಭವಾಗಿ ಏಳು ಗಂಟೆಗೆ ಮುಕ್ತಾಯವಾದವು. ಹೊಸ ವರ್ಷದ ನಿಮಿತ್ತ ದೇವಾಲಯದಲ್ಲಿ ಯಾವುದೇ ಪೂಜಾ ಕೈಂಕರ್ಯಗಳು ನಡೆಯದಿದ್ದರೂ ಧನುರ್ಮಾಸದ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ದೇವಾಲಯದ ಗೋಪುರದ ಬಾಗಿಲನ್ನು ತಳಿರು ತೋರಣ, ಬಾಳೆ ಕಂಬಗಳಿಂದ ಸಿಂಗಾರ ಮಾಡಲಾಗಿತ್ತು.


    ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ದೇವಾಲಯದ ಬಳಿಗೆ ವಾಹನ ಪ್ರವೇಶ ನಿರ್ಬಂಧಿಸಿದ್ದ ಪೊಲೀಸರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಮೈದಾನ ಸೇರಿದಂತೆ ಇತರ ಕಡೆ ವಾಹನ ನಿಲುಗಡೆ ಮಾಡಿಸಿದ್ದರು.


    ರಾಮಾನುಜರೇ ಭಿಕ್ಷೆ ಸ್ವೀಕರಿಸಿದ್ದ ಯತಿರಾಜದಾಸರ್ ಗುರುಪೀಠದಲ್ಲಿ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಭಕ್ತರಿಗೆ ಅನ್ನದಾನ ಏರ್ಪಡಿಸಿದ್ದರು.
    ಸಾವಿರಾರು ಭಕ್ತರು ಗುರುಪೀಠಕ್ಕೆ ಆಗಮಿಸಿ ಭೋಜನ ಸ್ವೀಕರಿಸಿದರು. ಆಂಧ್ರದ ಚಿನ್ನಜೀಯರ್ ಮಠದಲ್ಲೂ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.


    ಮೇಲುಕೋಟೆಯಲ್ಲಿ ಮಧ್ಯರಾತ್ರಿಯ ಮೋಜು ಮಸ್ತಿಯನ್ನು ನಿಷೇಧಾಜ್ಞೆ ಜಾರಿಗೊಳಿಸಿ ನಿಷೇಧಿಸಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಸುಮಾರಾಣಿ ಭಕ್ತರು ಸುಗಮವಾಗಿ ದೇವರ ದರ್ಶನ ಮಾಡಲು ಸುಗಮ ವ್ಯವಸ್ಥೆ ಮಾಡಿದ್ದರು.


    ಹಣ್ಣು, ಕಾಯಿ, ಪುರಿ, ಸಿಹಿ ತಿನಿಸು, ಪುಳಿಯೋಗರೆ, ಆಟಿಕೆಗಳ ಅಂಗಡಿಯ ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts