More

    ಮೈಸೂರಂತೆ ಸಿಂಹಧಾಮ ಅಭಿವೃದ್ಧಿ

    ಶಿವಮೊಗ್ಗ: ಮುಂದಿನ ಮೂರು ವರ್ಷಗಳಲ್ಲಿ ತ್ಯಾವರೆಕೊಪ್ಪ ಹುಲಿ ಸಿಂಹಧಾಮವನ್ನು ಮೈಸೂರು ಮೃಗಾಲಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ವಿವಿಧ ಹಂತಗಳಲ್ಲಿ ಅಂದಾಜು 50 ಕೋಟಿ ರೂ. ಅನುದಾನ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಸೆಳೆಯುವುದಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

    ತ್ಯಾವರೆಕೊಪ್ಪ ಸಿಂಹಧಾಮದ ಅಭಿವೃದ್ಧಿ ಸಂಬಂಧ ಈಗಾಗಲೇ ಅನುಮೋದನೆಗೊಂಡಿರುವ ಪ್ರಸ್ತಾವನೆ ಬಗ್ಗೆ ಶುಕ್ರವಾರ ಸಿಂಹಧಾಮದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಹಿಂದಿನ ಬಾರಿ ಲೋಕಸಭಾ ಸದಸ್ಯನಾಗಿದ್ದ ಅವಧಿಯಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಅದಕ್ಕೆ ಅನುಮೋದನೆ ದೊರೆತಿದೆ ಎಂದರು.

    ಪ್ರಸ್ತುತ ಮೃಗಾಲಯ ಪ್ರಾಧಿಕಾರ 9 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಹಾಗೂ ವಿವಿಧ ಪ್ರಾಣಿಗಳನ್ನಿರಿಸಲು ವ್ಯವಸ್ಥೆ ಕಲ್ಪಿಸುತ್ತದೆ. ಉದ್ದೇಶಿತ ನೀಲಿನಕ್ಷೆಯಂತೆ ಅಭಿವೃದ್ಧಿಪಡಿಸಲು ಈ ಹಣ ಸಾಕಾಗುವುದಿಲ್ಲ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮುಂಬರುವ ಬಜೆಟ್​ನಲ್ಲಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

    ಸಫಾರಿ ವಿಸ್ತರಣೆ: ಪ್ರಸ್ತುತ 80 ಹೆಕ್ಟೇರ್​ನಲ್ಲಿ ಹುಲಿ, ಸಿಂಹಧಾಮ, ಜಿಂಕೆ, ಮೊಸಳೆ, ಪಕ್ಷಿಗಳು, ಏಮು, ಆಸ್ಟ್ರಿಚ್ ಮುಂತಾದವುಗಳನ್ನು ಇರಿಸಲಾಗಿದೆ. ಉದ್ದೇಶಿತ ನೀಲಿನಕ್ಷೆಯಂತೆ ಕಾಮಗಾರಿ ಪೂರ್ಣಗೊಂಡರೆ ಸಿಂಹಧಾಮದ 250 ಹೆಕ್ಟೇರ್ ಜಾಗವನ್ನೂ ಸದ್ಬಳಕೆ ಮಾಡಿಕೊಳ್ಳುವುದು ಸಾಧ್ಯವಿದೆ. ಪ್ರಾಣಿ ಸಂಗ್ರಹಾಲಯ ಇನ್ನಷ್ಟು ಆಕರ್ಷಣೀಯವಾಗಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

    ಒಂದೇ ಬಾರಿಗೆ 50 ಕೋಟಿ ರೂ. ಅನುದಾನ ಒದಗಿಸುವುದು ಕಷ್ಟವಾಗುತ್ತದೆ. ಹೀಗಾಗಿ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ರ್ಚಚಿಸಲಾಗುವುದು. ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೂ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

    ದೇಶದ ಮೊದಲ ಕಾಡುಕೋಣ ಸಫಾರಿ: ಉದ್ದೇಶಿತ ಪ್ರಸ್ತಾವನೆಯಲ್ಲಿ ಪ್ರತ್ಯೇಕ ಕಾಡುಕೋಣ ಸಫಾರಿ ಆರಂಭದ ಬಗ್ಗೆಯೂ ಉಲ್ಲೇಖವಿದೆ. ಇದು ಕಾರ್ಯಗತವಾದರೆ ದೇಶದ ಮೊದಲ ಕಾಡುಕೋಣ ಸಫಾರಿ ಎಂಬ ಹೆಗ್ಗಳಿಕೆಗೆ ತ್ಯಾವರೆಕೊಪ್ಪ ಪಾತ್ರವಾಗಲಿದೆ. ಇದರ ಜೊತೆಗೆ ಜಿಬ್ರಾ, ನೀರಾನೆ, ಕಾಡುನಾಯಿ, ತೋಳ, ನಿಶಾಚರಿ ಪ್ರಾಣಿಗಳು, ಸರಿಸೃಪಗಳನ್ನೂ ಪ್ರಾಣಿ ಸಂಗ್ರಹಾಲಯದಲ್ಲಿ ಸೇರಿಸಲಾಗುವುದು. ಇದರೊಂದಿಗೆ ಸಫಾರಿಯಲ್ಲಿ ಒಟ್ಟು 67 ಬಗೆಯ 450 ಪ್ರಾಣಿ, ಪಕ್ಷಿಗಳು ವೀಕ್ಷಣೆಗೆ ಲಭ್ಯವಾಗಲಿವೆ.

    ಬಗೆಹರಿದ ನೀರಿನ ಸಮಸ್ಯೆ: 2008ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಗಾಜನೂರಿನ ತುಂಗಾ ಜಲಾಶಯದಿಂದ ಸಫಾರಿಗೆ ನೇರವಾಗಿ ನೀರಿನ ಸಂಪರ್ಕ ಒದಗಿಸಿದ್ದರು. ಈಗ ಓವರ್​ಹೆಡ್ ಟ್ಯಾಂಕ್ ನಿರ್ಮಾಣ ಆರಂಭವಾಗಿದೆ. ಇದರ ಸಾಮರ್ಥ್ಯ 2.50 ಲಕ್ಷ ಲೀಟರ್. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಫಾರಿಯಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ಮೃಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಬಿ.ಪಿ.ರವಿ, ಮುಖ್ಯಮಂತ್ರಿ ವಿಶೇಷ ಅಧಿಕಾರಿ ಎ.ಆರ್.ರವಿ, ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಪಡೆ ಸದಸ್ಯ ಲಕ್ಷ್ಮೀನಾರಾಯಣ ಕಾಶಿ, ಸಿಂಹಧಾಮದ ಕಾರ್ಯನಿರ್ವಹಣಾಧಿಕಾರಿ ಮುಕುಂದ್​ಚಂದ್ರ, ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts