More

    ಮೀನಿಗೆ ಬರ, ಕೋಳಿಯೇ ಆಹಾರ

    ಕಾರವಾರ: ‘ಕಾರವಾರ ಎಂದರೆ ಮೀನು. ಇಲ್ಲಿನ ಜನ ಮತ್ಸ್ಯ ಪ್ರಿಯರು. ಮೀನೂಟ ಇಲ್ಲದೆ ದಿನ ದೂಡುವುದೇ ಕಷ್ಟ’ ಎಂದು ಇಲ್ಲಿನ ಶೇ.80 ರಷ್ಟು ಜನ ಹೇಳುವ ಮಾತಿದು. ಆದರೆ, ವಾರದಿಂದ ಸ್ಥಗಿತಗೊಂಡ ಮೀನುಗಾರಿಕೆ ಮೀನೂಟ ಪ್ರಿಯರ ಊಟದ ರುಚಿ ಕೆಡಿಸಿದೆ.

    ಬಂದರು ಎರಡನೇ ಹಂತದ ವಿಸ್ತರಣೆ ವಿರೋಧಿಸಿ ತಾಲೂಕಿನ ಮೀನುಗಾರರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಮೀನುಗಾರಿಕೆಯೂ ಸಂಪೂರ್ಣ ಬಂದ್ ಮಾಡಲಾಗಿದೆ.

    ತಾಲೂಕಿನಲ್ಲಿ ಪ್ರಮುಖವಾಗಿ ಬೈತಖೋಲ್, ಮುದಗಾ, ಮಾಜಾಳಿ, ದೇವಬಾಗದಲ್ಲಿ ಮೀನು ಹಿಡಿದು ಮಾರುಕಟ್ಟೆಗೆ ರವಾನಿಸಲಾಗುತ್ತಿತ್ತು. ಎಲ್ಲ ಕಡೆಯೂ ದೋಣಿಗಳು ಸಮುದ್ರಕ್ಕೆ ಇಳಿದಿಲ್ಲ. ಕಾರವಾರ, ನಂದನಗದ್ದಾ, ಕೋಡಿಬಾಗ, ಮಾಜಾಳಿ ಸೇರಿ ನಾಲ್ಕು ಕಡೆಗಳಲ್ಲಿ ತಾಜಾ ಮೀನು ಸಿಗುವ ಮಾರುಕಟ್ಟೆಗಳಿವೆ. ಎಲ್ಲೆಡೆ ಮಾರಾಟವನ್ನು ಬಂದ್ ಮಾಡಲಾಗಿದೆ. ಇದರಿಂದ ಸದಾ ಗಿಜುಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿವೆ. ಊಟಕ್ಕೆ ಮೀನು ಬೇಕೇ ಬೇಕು ಎಂದವರು ಅಂಕೋಲಾಕ್ಕೆ ತೆರಳಿ ತಂದವರಿದ್ದಾರೆ. ಮೀನಿಗಾಗಿ ಪಕ್ಕದ ಗೋವಾ ರಾಜ್ಯದ ಗಡಿ ದಾಟಿದವರೂ ಇದ್ದಾರೆ. ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಒಣ ಮೀನಿಗೂ ಬರ ಕಂಡುಬಂತು. ಹಲವರು ಪ್ರತಿ ದಿನ ಬಂದು ಬಾಗಿಲು ಹಾಕಿದ ಮೀನು ಮಾರುಕಟ್ಟೆ ನೋಡಿ ವಾಪಸಾಗುತ್ತಿದ್ದಾರೆ. ಕೆಲವರು ಮೊಟ್ಟೆ, ಚಿಕನ್ ಮೊರೆ ಹೋಗಿದ್ದಾರೆ. ಮೊಟ್ಟೆ ಬೆಲೆ ಒಂದಕ್ಕೆ ಐದೂವರೆಯಿಂದ ಆರು ರೂ.ಗೆ ಮಾರಾಟವಾಗುತ್ತಿದೆ.

    ಹೋಟೆಲ್​ನವರಿಗೂ ಸಂಕಷ್ಟ:

    ಕಾರವಾರದ ಮೀನು ಹೋಟೆಲ್​ಗಳಲ್ಲಿ ಬಂಗುಡೆಯಂತಹ ರುಚಿಯಾದ ದೊಡ್ಡ ಮೀನುಗಳು ಸಿಗುತ್ತಿಲ್ಲ. ಅಡುಗೆಗೆ ಸಣ್ಣಪುಟ್ಟ ಮೀನುಗಳನ್ನು ಬಳಸಲಾಗುತ್ತಿದೆ. ಅದನ್ನೂ ಹೊರಗಿನ ಮಾರುಕಟ್ಟೆಯಿಂದ ತರಬೇಕಾಗಿದೆ ಎನ್ನುತ್ತಾರೆ ನಗರದ ಪಾರ್ವತಿ ಫಿಶ್ ಲ್ಯಾಂಡ್​ನ ಮಾಲೀಕ ಜಿತೇಂದ್ರ ಕೇಳಸ್ಕರ್.

    ಪ್ರತಿಭಟನೆ ಮತ್ತಷ್ಟು ತೀವ್ರ

    ಜಿಲ್ಲಾಧಿಕಾರಿ ಕಚೇರಿ ಎದುರು ಮೀನುಗಾರ ಮಹಿಳೆಯರು, ಪುರುಷರು ಗಾಂಧೀಜಿ, ಅಂಬೇಡ್ಕರ್ ಫೋಟೋಗಳನ್ನಿಟ್ಟು ಪ್ರತಿಭಟನೆ ಮುಂದುವರಿಸಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿ ಅಸಮಾಧಾನ ಹೊರ ಹಾಕಿದರು.

    ಟ್ಯಾಗೋರ್ ಕಡಲ ತೀರದಲ್ಲಿ ಪ್ರಾರಂಭ ಮಾಡಿರುವ ಅಲೆ ತಡೆಗೋಡೆ ಕಾಮಗಾರಿಗೆ ಜಿಲ್ಲಾಡಳಿತ ತಡೆ ನೀಡದ ಹಿನ್ನೆಲೆಯಲ್ಲಿ ಸೋಮವಾರದಿಂದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಮೀನುಗಾರರ ಮುಖಂಡ ರಾಜು ತಾಂಡೇಲ ಹೇಳಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಿಲ್ಲಾದ್ಯಂತ ಮೀನುಗಾರ ಮುಖಂಡರು, ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನಾಕಾರರ ಸಂಖ್ಯೆ ದ್ವಿಗುಣಗೊಳ್ಳಲಿದೆ. ಕಲ್ಲನ್ನು ತಂದು ಕಡಲ ತೀರದಲ್ಲಿ ರಾಶಿ ಹಾಕುತ್ತೇವೆ. ಕಾಮಗಾರಿ ಮಾಡುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತದೆ. ತೀರದಲ್ಲಿ ರಾಶಿ ಹಾಕಿದ ಕಲ್ಲನ್ನು ಕಡಲಿಗೆ ಹಾಕಲು ಎಷ್ಟು ಹೊತ್ತು ಬೇಕು. ಸಚಿವರು ಮಾತುಕತೆಗಾಗಿ ಸಭೆ ನಡೆಸುವುದಾಗಿ ತಿಳಿಸಿದ್ದರೂ ಅದರ ದಿನಾಂಕ ನಿಗದಿಯಾಗಿಲ್ಲ. ಇದರಿಂದ ಸಾಗರ ಮಾಲಾ ಯೋಜನೆ ತಡೆಯಲು ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts