More

    ಮಾಹಿತಿ ಇಲ್ಲದವರಿಂದ ಗೊಂದಲ

    ಗದಗ: ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ನಾಗರಿಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಮ್ಮ ದೇಶದ ನಾಗರಿಕರ ಮೂಲ ಹಕ್ಕಿನ ಮೇಲಾಗಲಿ, ನಾಗರಿಕತ್ವದ ಮೇಲಾಗಲಿ ಇದರಿಂದ ಯಾವುದೇ ಪರಿಣಾಮವಿಲ್ಲ. ನಾಗರಿಕರ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ವಿಶ್ವ ಹಿಂದು ಪರಿಷತ್​ನ ಪ್ರಚಾರಕ ರಘುನಂದನಜೀ ಸ್ಪಷ್ಟಪಡಿಸಿದರು.

    ಸ್ಥಳೀಯ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷತ್ ಗದಗ ಜಿಲ್ಲಾ ಘಟಕ ಹಾಗೂ ಅಭಿನವ ಭಾರತ ಪ್ರತಿಷ್ಠಾನ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪೌರತ್ವ ತಿದ್ದುಪಡಿ ಕಾಯ್ದೆ-2019ರ ಅನ್ವಯ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ವಿುಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೊಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆನಿಂತಿದ್ದಾರೆ. 2014ರ ಡಿಸೆಂಬರ್ 31ಕ್ಕೂ ಮೊದಲು ಭಾರತ ಪ್ರವೇಶಿಸಿದ ಹಿಂದು, ಬೌದ್ಧ, ಸಿಖ್, ಜೈನ್, ಪಾರ್ಸಿ ಹಾಗೂ ಕ್ರೖೆಸ್ತರಿಗೆ ಪೌರತ್ವವನ್ನು ನೀಡುವುದೇ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ವಿವರಿಸಿದರು.

    ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದವರು ವಿಷಯವನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ. ಮತಬ್ಯಾಂಕ್ ರಾಜಕಾರಣ ಮಾಡುವ ಕೆಲವು ರಾಜಕೀಯ ಪಕ್ಷಗಳು ಮತ್ತು ಸ್ವಹಿತಾಸಕ್ತಿ ಹೊಂದಿರುವ ಸೆಕ್ಯುಲರ್​ವಾದಿಗಳು ಕಾನೂನು ತಿದ್ದುಪಡಿಯ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಅಲ್ಪ ಸಂಖ್ಯಾತರ ಹಕ್ಕುಗಳು ಇದರಿಂದ ಮೊಟಕಾಗಲಿದೆ ಎಂದು ಅನಗತ್ಯವಾಗಿ ಹುಯಿಲೆಬ್ಬಿಸುತ್ತಿವೆ. ಆದರೆ, ಈ ವಾದದಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲ ಎಂದರು.

    ಸಾನ್ನಿಧ್ಯ ವಹಿಸಿದ್ದ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಸಂಸ್ಕಾರವಿದೆ, ಸಂಸ್ಕೃತಿ ಇದೆ. ವಿಶಾಲವಾದ ಮನಸ್ಸಿನಿಂದ ಬದುಕಬೇಕೆಂಬುದನ್ನು ದೇಶ ಕಲಿಸಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುನ್ನಡೆಯಬೇಕು ಎಂದರು.

    ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ವಿಶ್ವ ಹಿಂದು ಪರಿಷತ್ ಗದಗ ಜಿಲ್ಲಾ ಘಟಕ ಅಧ್ಯಕ್ಷ ಪಿ.ಆರ್.ಇನಾಮದಾರ ಸ್ವಾಗತಿಸಿ ಪರಿಚಯಿಸಿದರು. ಪುನೀತ್​ಕುಮಾರ ನಿರೂಪಿಸಿದರು. ಸುಧೀರ ಘೊರ್ಪಡೆ ವಂದಿಸಿದರು.

    ರಾಷ್ಟ್ರದಲ್ಲಿ ಕಾಂಗ್ರೆಸ್​ನಿಂದ ಅರಾಜಕತೆ ನಿರ್ಮಾಣ

    ಗದಗ: ದೇಶದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ರಾಷ್ಟ್ರದಲ್ಲಿ ಅರಾಜಕತೆ ನಿರ್ವಿುಸತೊಡಗಿವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಆರೋಪಿಸಿದರು.

    ನಗರದ ವಾರ್ಡ್ ನಂ. 22ರಲ್ಲಿ ಶನಿವಾರ ಏರ್ಪಡಿಸಿದ್ದ ಪೌರತ್ವ ಕಾಯ್ದೆ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶದಿಂದ ಬಂದಿರುವ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು, ಕ್ರೖೆಸ್ತ, ಪಾರ್ಸಿ, ಜೈನ್, ಬೌದ್ಧ, ಸಿಕ್ ಜನರಿಗೆ ನಮ್ಮ ದೇಶದ ಪೌರತ್ವ ನೀಡುವ ಬಗ್ಗೆ ಕೇಂದ್ರ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ. ಈ ಕಾಯ್ದೆಯಿಂದ ಭಾರತದ ಯಾವುದೇ ಸಮುದಾಯದ ಜನರಿಗೆ ತೊಂದರೆ ಆಗುವುದಿಲ್ಲ ಎಂದರು.

    ಈ ಸಂದರ್ಭದಲ್ಲಿ ಸುರೇಶ ನಿಲುಗಲ್, ಚನ್ನಪ್ಪ ದ್ಯಾಂಪೂರ, ರಾಚಪ್ಪ ಕೋರಿ, ವಿರೂಪಾಕ್ಷಪ್ಪ ಅಂಗಡಿ, ಶೇಖಪ್ಪ ಹೊಂಬಳ, ಅಶೋಕ ಕೋಟಿ, ತೋಟಪ್ಪ ಕರಮುಡಿ, ಸಂಗಪ್ಪ ದ್ಯಾಂಪೂರ, ಯಲ್ಲಪ್ಪ ಕತ್ತಿ, ಬಸವರಾಜ ಮೊರಬದ, ಬಸವಣ್ಣೆಪ್ಪ ಅಗ್ಗದ, ಈಶ್ವರಪ್ಪ ಲಕ್ಕುಂಡಿ ಮತ್ತಿತರರು ಇದ್ದರು.

    ಲಕ್ಷ್ಮೇಶ್ವರದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಲಕ್ಷ್ಮೇಶ್ವರ: ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಅಂಜುಮನ್ ಎ ಇಸ್ಲಾಂ ಸಂಸ್ಥೆ, ವೀರಕನ್ನಡಿಗ ಟಿಪ್ಪು ಸೇನೆ ಸೇರಿ ವಿವಿಧ ಮುಸ್ಲಿಂ ಮತ್ತು ದಲಿತ ಸಂಘಟನೆಗಳು ಶನಿವಾರ ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದವು.

    ಪಟ್ಟಣದ ಶಿಗ್ಲಿ ರಸ್ತೆಯಲ್ಲಿರುವ ಮಲೀಕ್ ಶಾದತ್ ದರ್ಗಾ ಹತ್ತಿರ ಜಮಾಯಿಸಿದ ಪ್ರತಿಭಟನಾಕಾರರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ರಾಷ್ಟ್ರಧ್ವಜ ಹಿಡಿದು ಹಿಂದುಸ್ತಾನ್ ಜಿಂದಾಬಾದ್, ಭಾರತ ಮಾತಾಕೀ ಜೈ ಎಂಬ ಘೊಷಣೆ ಕೂಗಿದರು.

    ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಂಜುಮನ್ ಕಮಿಟಿ ಅಧ್ಯಕ್ಷ ಅನ್ವರಸಾಬ ಹವಾಲ್ದಾರ, ಹಾಫೀಜ್​ಸಾ ಜಮಖಂಡಿ, ಮೌಲ್ವಿ ಮೌಲಾನ ಮಹಮ್ಮದಹುಸೇನ ಸಿದ್ಧಾಪುರ, ಬದ್ರುದ್ದೀನಸಾಬ ಮಂಗಳೂರ, ಅಬ್ದುಲ್​ಖಯೂಮ ಗುಡಗೇರಿ ಅವರು ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಹುನ್ನಾರವನ್ನು ಮಾಡುತ್ತಿದೆ. ದೇಶದ ಪವಿತ್ರ ಸಂವಿಧಾನಕ್ಕೆ ಅಪಚಾರವೆಸಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಆರೋಪಿಸಿದರು.

    ಚನ್ನಪ್ಪ ಜಗಲಿ, ಸೋಮಣ್ಣ ಬೆಟಗೇರಿ, ರಾಮು ಗಡದವರ, ತಿಪ್ಪಣ್ಣ ಸಂಶಿ ಮಾತನಾಡಿದರು. ಪ್ರತಿಭಟನೆ ಬಳಿಕ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ದರ್ಗಾ ಕಮಿಟಿಯ ಸುಲೇಮಾನ ಕಣಿಕೆ, ದಾದಾಪೀರ ಮುಚ್ಚಾಲೆ, ಫಿರ್ದೊಸ್ ಆಡೂರ, ವೀರಕನ್ನಡಿಗ ಟಿಪ್ಪು ಸುಲ್ತಾನ್ ಸಂಘಟನೆ ಅಧ್ಯಕ್ಷ ಜಾಕೀರಹುಸೇನ ಹವಾಲ್ದಾರ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಇಸ್ಮಾಯಿಲ್ ಆಡೂರ, ಮುಸ್ತಾಕಹ್ಮದ ಶಿರಹಟ್ಟಿ, ಇಕ್ಬಾಲ್ ಸೂರಣಗಿ, ಅಬ್ಜಲ್ ರಿತ್ತಿ, ಎಂ.ಎಂ. ಗದಗ, ಇಮ್ತಿಯಾಜ ಪಲ್ಲಿ, ಮಾಬೂಬಲಿ ಹೆಸರೂರ ಇತರರಿದ್ದರು. ಎನ್.ಎಂ. ಗದಗ, ಸಾಹೇಬಜಾನ್ ಹವಾಲ್ದಾರ ನಿರ್ವಹಿಸಿದರು. ಡಿಎಸ್​ಪಿ ಸಿ.ಕೆ. ಪ್ರಹ್ಲಾದ್ ನೇತೃತ್ವದಲ್ಲಿ 6 ಜನ ಸಿಪಿಐ, 8 ಜನ ಪಿಎಸ್​ಐ ಸೇರಿ 150 ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts