More

    ಮಾನ್ಯತೆ ರದ್ದು ತೂಗುಗತ್ತಿ

    ಧಾರವಾಡ: ಹಲವು ನಿಯಮ-ಷರತ್ತುಗಳಿಗೆ ಒಳಪಟ್ಟು ಮಾನ್ಯತೆ ಪಡೆದು, ದಾಖಲಾತಿ ಹೊಂದಿಲ್ಲದ ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳಿಗೆ ಶಿಕ್ಷಣ ಇಲಾಖೆ ಛಾಟಿ ಬೀಸಿದೆ. ಸತತ 5 ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಶೂನ್ಯವಾಗಿರುವ ಕಾಲೇಜುಗಳ ಪಟ್ಟಿ ಮಾಡಿರುವ ಇಲಾಖೆ, ಕಾರಣ ಕೇಳಿ (ಶೋಕಾಸ್) ನೋಟಿಸ್ ನೀಡುವ ಮೂಲಕ ಬಿಸಿ ಮುಟ್ಟಿಸಿದೆ.

    ಹುಬ್ಬಳ್ಳಿ ನವನಗರದ ಶ್ರೀ ಮೈತ್ರಿ ಪಿಯು ಕಾಲೇಜ್, ವಿದ್ಯಾಚೈತನ್ಯ ಪಿಯು ಕಾಲೇಜ್, ರಾಜಾಜಿನಗರದ ವೈಷ್ಣವಿ ಚೇತನಾ ಪಿಯು ಕಾಲೇಜ್, ವಿದ್ಯಾನಗರದ ಸೇಂಟ್ ಅಂಥೋನಿ ಪಿಯು ಕಾಲೇಜ್, ವಿಶ್ವಚೇತನ ಪಿಯು ಕಾಲೇಜ್, ತಾರಿಹಾಳದ ಎಸ್​ಎಸ್​ಬಿಎಚ್ ಪಿಯು ಕಾಲೇಜ್, ಗೋಕುಲ ಕ್ಯಾಂಪಸ್ ಮಿಶ್ರಿಕೋಟಿಯ ಪರಿವರ್ತನ ಎಲೈಟ್ ಪಿಯು ಕಾಲೇಜ್ ಹಾಗೂ ಧಾರವಾಡ ಶ್ರೀನಗರದ ಎಸ್​ಕೆಸ್ ಪಿಯು ಕಾಲೇಜ್, ರೀಗಲ್ ವೃತ್ತದ ಬಳಿಯ ಆರ್​ಜಿಇಎಸ್ ಪಿಯು ಕಾಲೇಜ್, ಬಾರಾಕೊಟ್ರಿಯ ಪವನ ಪಿಯು ಕಾಲೇಜ್​ಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

    ಹುಬ್ಬಳ್ಳಿ- ಧಾರವಾಡದ 10 ಕಾಲೇಜುಗಳಲ್ಲಿ ಕೆಲವು 2008- 2009ರಂದ 2012- 2013ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡಿವೆ. ಆದರೆ ಈ ಎಲ್ಲ ಕಾಲೇಜುಗಳಲ್ಲಿ 2015- 2016ರಿಂದ 2019- 2020ನೇ ಸಾಲಿನ 5 ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೂನ್ಯವಾಗಿದೆ.

    ನೋಟಿಸ್​ನಲ್ಲೇನಿದೆ?

    ನಿರಂತರ 5 ವರ್ಷಗಳಲ್ಲಿ ಈ ಸಂಸ್ಥೆಗಳ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೂನ್ಯವಾಗಿದ್ದು, ಶೈಕ್ಷಣಿಕ ಚಟುವಟಿಕೆ ನಡೆಯದಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪುನಃ ಆರಂಭಿಸಲು ಪೂರ್ವಾನುಮತಿ ಪಡೆಯದೆ ವಿದ್ಯಾರ್ಥಿಗಳನ್ನು ಅನಧಿಕೃತವಾಗಿ ದಾಖಲಾತಿ ಮಾಡಿಕೊಂಡು ಪರೀಕ್ಷೆ ವೇಳೆಯಲ್ಲಿ ಹತ್ತಿರದ ಕಾಲೇಜುಗಳಿಗೆ ಸ್ಥಳಾಂತರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರುವುದು, ನ್ಯಾಯಾಲಯದ ಮೊರೆ ಹೋಗುವುದು ಕಂಡುಬರುತ್ತಿದೆ. ಚಾಲ್ತಿ ಹಾಗೂ ಕಡ್ಡಾಯ ನಿಯಮಗಳನ್ನು ಪಾಲಿಸುವಲ್ಲಿ ಸಂಸ್ಥೆಗಳು ವಿಫಲವಾಗಿವೆ. ಹಾಗಾಗಿ ಶೈಕ್ಷಣಿಕ ಮಾನ್ಯತೆಯನ್ನು ಏಕೆ ರದ್ದುಪಡಿಸಬಾರದು/ಹಿಂಪಡೆಯಬಾರದು ಎಂದು ಲಿಖಿತವಾಗಿ ಉತ್ತರ ಸಲ್ಲಿಸಬೇಕು. ಹೇಳಿಕೆ ಸಲ್ಲಿಸದಿದ್ದರೆ ಏಕಪಕ್ಷೀಯವಾಗಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಶೋಕಾಸ್ ನೋಟಿಸ್​ನಲ್ಲಿ ತಿಳಿಸಲಾಗಿದೆ.

    ಉತ್ತರ ಆಧರಿಸಿ ಕ್ರಮ

    ಪಿಯು ಕಾಲೇಜು ಆರಂಭದ ಮಾನ್ಯತೆ ಪಡೆಯಲು ಸರ್ಕಾರ ಹಲವಾರು ಮಾನದಂಡಗಳನ್ನು ವಿಧಿಸಿದೆ. ಆದಾಗ್ಯೂ ಪ್ರತಿವರ್ಷ ಹತ್ತಾರು ಕಾಲೇಜುಗಳು ತಲೆ ಎತ್ತುತ್ತಿವೆ. ಖಾಸಗಿ ಅನುದಾನ ರಹಿತ ಕಾಲೇಜುಗಳೂ ವಿದ್ಯಾರ್ಥಿಗಳ ಪ್ರವೇಶಾತಿ ನಿಯಮಕ್ಕೆ ಒಳಪಟ್ಟಿರುತ್ತವೆ. ಖಾಸಗಿ ಕಾಲೇಜುಗಳ ಅಬ್ಬರದ ಪ್ರಚಾರದಿಂದಾಗಿ ಸರ್ಕಾರಿ, ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದೆ ಬಳಲುತ್ತಿವೆ. ಈ ಮಧ್ಯೆ ಅವಳಿ ನಗರದ 10 ಖಾಸಗಿ ಕಾಲೇಜುಗಳು ಶೂನ್ಯ ಪ್ರವೇಶಾತಿಯಿಂದ ನಲುಗಿದ್ದು, ಮಾನ್ಯತೆ ರದ್ದಾಗುವ ತೂಗುಗತ್ತಿ ನೇತಾಡುತ್ತಿದೆ. ಆಯಾ ಸಂಸ್ಥೆಗಳು ನೀಡುವ ಉತ್ತರ ಆಧರಿಸಿ ಇಲಾಖೆ ಕ್ರಮ ಕೈಗೊಳ್ಳಲಿದೆ.

    ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಶೂನ್ಯ ಇದ್ದ ಕಾಲೇಜುಗಳ ಪಟ್ಟಿಯನ್ನು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅಂಥ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಇಲಾಖೆಯಿಂದ ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕಾಲೇಜು ಆರಂಭವಾದ ವರ್ಷದಿಂದ ಸತತ 3 ವರ್ಷ ಶೂನ್ಯ ದಾಖಲಾತಿ ಇದ್ದರೆ ಮಾನ್ಯತೆ ರದ್ದಾಗುವ ಸಾಧ್ಯತೆ ಇದೆ. ಇಲಾಖೆ ಜರುಗಿಸುವ ಕ್ರಮವನ್ನು ಮುಂಬರುವ ಶೈಕ್ಷಣಿಕ ವರ್ಷದಿಂದ ಅನುಷ್ಠಾನ ಮಾಡಲಾಗುವುದು.

    – ಶಾರದಾ ಕಿರೇಸೂರ, ಡಿಡಿಪಿಯು ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts