More

    ಮಾಜಿ ಸಚಿವ ವಿನಯ ಕುಲಕರ್ಣಿಗೆ ಜೈಲೇ ಗತಿ

    ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

    ನ. 5ರಂದು ವಿನಯ ಕುಲಕರ್ಣಿಯನ್ನು ಸಿಬಿಐ ತಂಡ ಬಂಧಿಸಿತ್ತು. ಕಳೆದ ಬಾರಿಯ ವಿಚಾರಣೆ ವೇಳೆ ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್, ದೆಹಲಿಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ವಾದ ಮಂಡಿಸಿದ್ದರು. ವಿನಯ ಕುಲಕರ್ಣಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

    ವಿನಯ ಪರ ವಾದ ಮಂಡಿಸಿದ್ದ ವಕೀಲ ಬಾಹುಬಲಿ ಧಾನವಾಡೆ, ತಮ್ಮ ಕಕ್ಷಿದಾರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಯೋಗೀಶಗೌಡ ಹತ್ಯೆಗೆ ಬಳಸಿದ ಬಡಿಗೆ ಮತ್ತು ಮಚ್ಚುಗಳಿಗೆ ಲೇಪಿಸಲು ರಕ್ತ ಸಿಕ್ಕಿದ್ದು ಹೇಗೆ? ಅದಕ್ಕೆ ಸಹಕರಿಸಿದ ವೈದ್ಯ ಯಾರು? ಆ ವೈದ್ಯನ ವಿಚಾರಣೆ ಏಕೆ ಮಾಡಿಲ್ಲ? ಎಂದಿದ್ದರು.

    ವಾದ- ಪ್ರತಿವಾದ ಆಲಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿಯ ತೀರ್ಪನ್ನು ಡಿ. 14ಕ್ಕೆ ಕಾಯ್ದಿರಿಸಿತ್ತು.

    ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ತನಿಖಾಧಿಕಾರಿ ಆರೋಪಿ (ಕುಲಕರ್ಣಿ) ವಿರುದ್ಧ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜಾಮೀನು ನೀಡಿದರೆ, ಆರೋಪಿಯು ಸಾಕ್ಷಿಗಳನ್ನು ಬೆದರಿಸುವ ಮತ್ತು ಪುರಾವೆಗಳನ್ನು ಹಾಳುಗೆಡಹುವ ಸಾಧ್ಯತೆ ಇದೆ. ಆರೋಪಿ ವಿರುದ್ಧ ಘೊರ ಕೃತ್ಯ ಮಾಡಿದ ಮತ್ತು ಸಾಕ್ಷಿ ನಾಶದ ಅಪವಾದವಿದೆ. ತನಿಖೆ ಬಾಕಿ ಇದ್ದು, ಈಗ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಯಾರಾದರೂ ಏನಾದರೂ ಮಾಡಿಕೊಂಡು ಕಾನೂನು ಹಿಡಿತದಿಂದ ಸುಲಭವಾಗಿ ಹೊರಗೆ ಬರಬಹುದು ಎಂದು ಸಮಾಜ ಭಾವಿಸುತ್ತದೆ. ಅಲ್ಲದೆ, ದೇಶದ ಅಪರಾಧಿಕ ನ್ಯಾಯಿಕ ವ್ಯವಸ್ಥೆಯಲ್ಲಿ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಜಾಮೀನು ನೀಡಲಾಗದು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

    40 ದಿನಗಳಿಂದ ಬಂಧನದಲ್ಲಿರುವ ವಿನಯ ಕುಲಕರ್ಣಿಗೆ ಜಾಮೀನು ನಿರಾಕರಣೆ ಒಂದು ದೊಡ್ಡ ಆಘಾತ. ಇದೇ ದಿನದಂದು ಸೋದರ ಮಾವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುವುದು ಕುಲಕರ್ಣಿಗೆ ಮತ್ತೊಂದು ಆಘಾತವಾಗಿದೆ.

    ಧಾರವಾಡ ಜೈಲಿಗೆ ಇಂಡಿ: ಸಿಬಿಐ ಅಧಿಕಾರಿಗಳು ಭಾನುವಾರ ಬಂಧಿಸಿರುವ ವಿಜಯಪುರದ ಚಂದ್ರಶೇಖರ ಇಂಡಿಗೆ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸೋಮವಾರ ಆದೇಶಿಸಿದೆ. ಬೆಳಗ್ಗೆ 11 ಗಂಟೆಗೆ ಸಿಬಿಐ ತನಿಖಾಧಿಕಾರಿ ರಾಕೇಶ ರಂಜನ್ ನೇತೃತ್ವದ ತಂಡ, ಇಂಡಿಯನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಹೆಚ್ಚಿನ ತನಿಖೆಗಾಗಿ 2 ದಿನ ಕಸ್ಟಡಿಗೆ ನೀಡುವಂತೆ ಅಧಿಕಾರಿ ರಾಕೇಶ ರಂಜನ್ ಕೋರಿದರು. ನಿಮ್ಮನ್ನು ಯಾವಾಗ ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ಕೇಳಿದರು. ಶನಿವಾರ ಎಂದು ಇಂಡಿ ತಿಳಿಸಿದರು. ಭಾನುವಾರ ಮಧ್ಯಾಹ್ನ ಎಂದು ಅಧಿಕಾರಿ ತಿಳಿಸಿದರು. ಶನಿವಾರವೇ ಬಂಧಿಸಿರುವುದಾಗಿ ಪುನರುಚ್ಚರಿಸಿದ ಇಂಡಿ, ನನ್ನ ತಂದೆ ಕೋವಿಡ್​ನಿಂದ ಬಳಲುತ್ತಿದ್ದಾರೆ. ಆಸ್ಪತ್ರೆ ಬಳಿ ಇದ್ದಾಗಲೇ ನನ್ನನ್ನು ವಶಕ್ಕೆ ಪಡೆದರು. ಯಾವುದೇ ಮಾಹಿತಿ, ನೋಟಿಸ್ ನೀಡದೆ ಕರೆತಂದಿದ್ದಾರೆ ಎಂದರು. ಕಂಟ್ರಿ ಪಿಸ್ತೂಲು ಪೂರೖಕೆ ಮಾಡಿರುವುದು ಖಚಿತವಾದ ಬಳಿಕ ಬಂಧಿಸಲಾಗಿದೆ ಎಂದ ರಾಕೇಶ ರಂಜನ್, ರೌಡಿ ಧರ್ಮರಾಜ ಚಡಚಣನಿಂದ ಪಿಸ್ತೂಲ್ ಪಡೆಯಲಾಗಿತ್ತು. ಇದು ತನಿಖೆ ವೇಳೆ ತಿಳಿದುಬಂದಿದೆ. ಬಳಿಕವಷ್ಟೇ ಇವರನ್ನು ಬಂಧಿಸಲಾಗಿದೆ. ಇನ್ನಷ್ಟು ವಿಚಾರಣೆಗಾಗಿ ಎರಡು ದಿನ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ಈ ಪ್ರಕರಣದಲ್ಲಿ ತನ್ನದೇನೂ ಪಾತ್ರವಿಲ್ಲ. ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಇಂಡಿ ತಿಳಿಸಿದರು. ಕೆಲ ಹೊತ್ತಿನ ನಂತರ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದರು. ಮಧ್ಯಾಹ್ನ ಮತ್ತೆ ವಿಚಾರಣೆ ಆರಂಭವಾದಾಗ, ‘ನಿಮಗೆ ಏನಾದರೂ ತೊಂದರೆ ಕೊಟ್ಟಿದ್ದಾರಾ?’ ಎಂದು ನ್ಯಾಯಾಧೀಶರು ಕೇಳಿದರು. ‘6 ತಿಂಗಳಿಂದ ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿದ್ದಾರೆ ಸರ್’ ಎಂದು ಇಂಡಿ ತಿಳಿಸಿದರು. ತಮ್ಮ ಕಕ್ಷಿದಾರ ವಿಚಾರಣೆಗೆ ಕರೆದಾಗಲೆಲ್ಲ ಬಂದಿದ್ದಾರೆ. ಈವರೆಗೆ 15- 16 ಬಾರಿ ಹಾಜರಾಗಿದ್ದಾರೆ ಎಂದ ಇಂಡಿ ಪರ ವಕೀಲ ಐ.ವೈ. ಪಾಟೀಲ, ಸಿಬಿಐ ಕಸ್ಟಡಿ ಕೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

    14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನ್ಯಾ. ಗಂಗಾಧರ ಅವರು, ಸಿಬಿಐ ಕಸ್ಟಡಿ ಕೇಳಿರುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಆದೇಶ ಹೊರಡಿಸಿದರು. ಮಂಗಳವಾರ ವಿಚಾರಣೆ ನಡೆಯುವ ನಿರೀಕ್ಷೆ ಇದೆ. ಚಂದ್ರಶೇಖರ ಇಂಡಿಯನ್ನು ಸಿಬಿಐ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಿದರು.

    ಠಾಣೆಯಲ್ಲಿ 2 ದಿನ: ಯೋಗೀಶಗೌಡ ಕೊಲೆಗೆ ಮೊದಲು ರೂಪಿಸಲಾಗಿತ್ತು ಎನ್ನಲಾದ ಸಂಚಿನಲ್ಲಿ ಚಂದ್ರಶೇಖರ ಇಂಡಿ ವಿರುದ್ಧ ನಾಡಪಿಸ್ತೂಲ್ ಪೂರೈಸಿರುವ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರನ್ನು ಶನಿವಾರ ಮಧ್ಯಾಹ್ನ ವಿಜಯಪುರದಲ್ಲಿ ವಶಕ್ಕೆ ಪಡೆದು ರಾತ್ರಿ ನಗರಕ್ಕೆ ಕರೆತಂದು ಉಪನಗರ ಠಾಣೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಭಾನುವಾರವೂ ಸುದೀರ್ಘ ವಿಚಾರಣೆ ನಡೆಸಿ ಸಂಜೆ ಕೋವಿಡ್ ಪರೀಕ್ಷೆ ಹಾಗೂ ಆರೋಗ್ಯ ತಪಾಸಣೆ ನಡೆಸಿ ನಂತರ ಉಪನಗರ ಠಾಣೆಯಲ್ಲಿರಿಸಿದ್ದರು. ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts