More

    ಮಹಿಳೆ ಸಮಸ್ಯೆ ಮೆಟ್ಟಿ ನಿಲ್ಲಲಿ

    ಬೆಳಗಾವಿ: ಸಾಧನೆಯ ಹಾದಿಯಲ್ಲಿರುವ ಮಹಿಳೆಯರಿಗೆ ತೊಡಕುಗಳು, ಸಂಕಷ್ಟಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಬೇಕು ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಪ್ರಸಾದ ಹೇಳಿದರು.

    ಶಿವಬಸವ ನಗರದ ಡಾ.ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘22ನೇ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಕೃತಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ತಾಯಿ ಗರ್ಭದಲ್ಲಿ ಹೆಣ್ಣು ಮಗು ಮೂಡಿದಾಗಲೇ ಅದನ್ನು ಜಗತ್ತು ನೋಡಲು ಬಿಡುತ್ತಿಲ್ಲ. ಹೆಣ್ಣು ಭ್ರೂಣ ಹತ್ಯೆಗಳು ನಿರಾತಂಕವಾಗಿ ನಡೆದಿರುವುದು ಕಳವಳಕಾರಿ ಸಂಗತಿ ಎಂದರು.

    ಪರೀಕ್ಷೆಯಲ್ಲಿ ಅನುತ್ತೀರ್ಣವಾದೆ ಎಂದು ಯುವತಿಯರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಸರಿಯಲ್ಲ. ಒಂದು ಪರೀಕ್ಷೆಯೇ ಎಲ್ಲದಕ್ಕೂ ಮಾನದಂಡ ಅಲ್ಲ. ಜೀವನದಲ್ಲಿ ಏನೇ ಬಂದರೂ ಆತ್ಮವಿಶ್ವಾಸದಿಂದ ಎದುರಿಸಬೇಕು. ಇದೊಂದು ಅದ್ಭುತ ಸಮ್ಮೇಳನ. ವಿವಿಧ ರಾಜ್ಯಗಳ ಕವಯಿತ್ರಿಯರು ಒಂದೆಡೆ ಸೇರಿರುವುದು ಸಂತಸ ತಂದಿದೆ. ಈ ವೇದಿಕೆಯಿಂದ ಪ್ರೇರಣೆಗೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಹಿತ್ಯಿಕ ಕೃತಿಗಳನ್ನು ಬರೆಯಿಸಿ ಎಂದು ಪ್ರೋತ್ಸಾಹಿಸಿದರು.

    ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಕವಯತ್ರಿಯರ ಸಮ್ಮೇಳನ ಆಯೋಜಿಸಿರುವುದು ಪ್ರಶಂಸನೀಯ. ಇದರಿಂದ ನಮಗೆ ಹಾಗೂ ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿಗಳ ಪರಿಚಯವಾಗುತ್ತದೆ ಎಂದರು.

    ಸಂಯೋಜಕಿ ಜ್ಯೋತಿ ಬಾದಾಮಿ ಮಾತನಾಡಿ, 21ನೇ ಅಖಿಲ ಭಾರತ ಸಮ್ಮೇಳನ ಮೇಘಾಲಯದಲ್ಲಿ ನಡೆದಿತ್ತು. ಮುಂದಿನ ಸಮ್ಮೇಳನ ಬೆಳಗಾವಿಯಲ್ಲಿ ನಡೆಸುವ ಜವಾಬ್ದಾರಿ ಕೊಡಲಾಗಿತ್ತು. ಎಲ್ಲರ ಸಹಕಾರದಿಂದಾಗಿ ಕರ್ನಾಟಕದ ಬೆಳಗಾವಿಯಲ್ಲಿ 6ನೇ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

    ಆಲ್ ಇಂಡಿಯಾ ಪೋಯೆಟ್ ಕಾನ್ಫರೆನ್ಸ್(ಎಐಪಿಸಿ) ಗೌರವ ಸಂಸ್ಥಾಪಕ, ಮಹಿಳಾ ಚಿಂತಕ ಡಾ.ಲಾರಿ ಆಜಾದ್, ಕವಯಿತ್ರಿಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನನ್ನ ತಾಯಿಯ ಸ್ಮರಣೆಯಲ್ಲಿ ಈ ಸಂಘಟನೆ ಹುಟ್ಟುಹಾಕಿದ್ದೇನೆ. ದೇಶಾದ್ಯಂತ ಸಮ್ಮೇಳನಗಳನ್ನು ಸಂಘಟಿಸಿ, ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಲಾಗುತ್ತಿದೆ ಎಂದರು.

    ವಿವಿಧ ಲೇಖಕಿಯರು ರಚಿಸಿದ ಹಲವು ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಂಸದೆ ಮಂಗಲ ಅಂಗಡಿ, ಎಐಪಿಸಿ ಗೌರವ ಕಾರ್ಯದರ್ಶಿ ಡಾ.ವಿಜಯಲಕ್ಷ್ಮೀ ಕೋಸಗಿ, ಸಹ ಸಂಯೋಜಕಿ ಆರತಿ ಅಂಗಡಿ, ಕೋಶಾಧ್ಯಕ್ಷೆ ಪ್ರೊ. ರಾಜನಂದಾ ಗಾರ್ಗಿ, ಜ್ಯೋತಿ ಕಟ್ಟಿ, ಜಯಶೀಲಾ ಬ್ಯಾಕೋಡ, ಡಾ.ಶೈಲಜಾ ಕುಲಕರ್ಣಿ, ಶೈಲಜಾ ಭಿಂಗೆ, ಸರ್ವಮಂಗಳಾ ಅರಳಿಮಟ್ಟಿ, ನಿರ್ಮಲಾ ಬಟ್ಟಲ್ ಇದ್ದರು. ಮೈತ್ರೇಯಿಣಿ ಗದಿಗೆಪ್ಪಗೌಡರ ನಿರೂಪಿಸಿದರು. ಇದಕ್ಕೂ ಮುನ್ನ ಸಂಸ್ಥೆಯ ಆವರಣದಲ್ಲಿ ಸಮ್ಮೇಳನ ಅಂಗವಾಗಿ ಮೆರವಣಿಗೆ ಜರುಗಿತು.

    25 ಪುಸ್ತಕ ಬಿಡುಗಡೆ: ಸಮ್ಮೇಳನದಲ್ಲಿ ಅಸ್ಸಾಂ, ಒಡಿಶಾ, ಪಂಜಾಬ್, ಮೇಘಾಲಯ, ಉತ್ತರಪ್ರದೇಶ, ದೆಹಲಿ, ಕೇರಳ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಸೇರಿ ದೇಶದ ಸುಮಾರು 350 ಕವಯಿತ್ರಿಗಳು ಪಾಲ್ಗೊಂಡಿದ್ದಾರೆ. ಬೆಂಗಳೂರು, ಚಿತ್ರದುರ್ಗ, ತುಮಕೂರು, ಮೈಸೂರು, ಬೆಳಗಾವಿ, ಗೋಕಾಕ ಹಾಗೂ ಕೇರಳ, ರಾಜಸ್ಥಾನ, ಮಣಿಪುರ, ದೆಹಲಿ ರಾಜ್ಯಗಳ ಕವಿಯಿತ್ರಿಗಳ ಒಟ್ಟು 25 ಪುಸ್ತಕ ಬಿಡುಗಡೆಗೊಳಿಸಲಾಯಿತು. ಹಿಂದಿ, ಇಂಗ್ಲಿಷ್, ಕನ್ನಡ, ತುಳು, ಸಂಸ್ಕೃತ ಸೇರಿ ಬಹುಬಾಷಾ ಕವಿಗೋಷ್ಠಿ ಜರುಗಿತು. ಆಯಾ ರಾಜ್ಯಗಳ ಉಡುಗೆ-ತೊಡುಗೆಗಳಲ್ಲಿ ಕವಯಿತ್ರಿಯರು ಕಾವ್ಯ ವಾಚಿಸಿದ್ದು ವಿಶೇಷವಾಗಿತ್ತು. ಮಹಿಳಾ ದೌರ್ಜನ್ಯ ಖಂಡನೆ, ಮಹಿಳಾ ಸಬಲೀಕರಣದ ಉಪನ್ಯಾಸಗಳು ಜರುಗಿದವು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts