More

    ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದೇ ಕೊನೇ

    ಹನೂರು: ಮಂಗಳವಾರ ರಾತ್ರಿ ವಿಧಿವಶರಾದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ತಿಂಗಳ ಹಿಂದೆಯಷ್ಟೇ ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಮಲೆಮಹದೇಶ್ವರ ಬೆಟ್ಟ, ಮೇಕೆದಾಟು ನದಿಪಾತ್ರ ಹಾಗೂ ಹೊಗೇನಕಲ್ ಫಾಲ್ಸ್‌ಗೆ ಭೇಟಿ ನೀಡಿದ್ದರು.


    ಮೇಕೆದಾಟು ಯೋಜನೆಯ ಅನುಷ್ಠಾನ, ಮಲೆ ಮಹದೇಶ್ವರ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಘೋಷಣೆ, ಹೊಗೇನಕಲ್ ಫಾಲ್ಸ್‌ನಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸಚಿವರು ಚಿಂತನೆ ಇರಿಸಿಕೊಂಡಿದ್ದರು.


    ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ 2ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ‘ಎರಡು ವರುಷ ಪಟ್ಟಾಭಿಷೇಕ ಹರುಷ’ ಶೀರ್ಷಿಕೆಯಡಿ ‘ವಿಜಯವಾಣಿ’ ದಿನಪತ್ರಿಕೆ ಹೊರತಂದಿದ್ದ ವಿಶೇಷ ಸಂಚಿಕೆಯನ್ನು ಉಮೇಶ್ ಕತ್ತಿ ಅವರು ಆ. 8ರಂದು (ಸರಿಯಾಗಿ ಇಂದಿಗೆ ಒಂದು ತಿಂಗಳು) ಬಿಡುಗಡೆಗೊಳಿಸಿದ್ದು, ಇದೀಗ ನೆನಪು ಮಾತ್ರ.


    ಮಠಕ್ಕೆ ಆಗಮಿಸಿದ್ದ ವೇಳೆ ಸಚಿವರು, ಗುರು ಪರಂಪರೆ ಹೊಂದಿರುವ ಸಾಲೂರು ಮಠ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತ ಬಂದಿರುವುದು ಹಾಗೂ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಮಠದ ಹಿರಿಯ ಶ್ರೀಗಳಾದ ಗುರುಸ್ವಾಮೀಜಿ ಅವರ ಯೋಗಕ್ಷೇಮ ವಿಚಾರಿಸಿ ಮಠದಲ್ಲೇ ಉಪಾಹಾರ ಸೇವಿಸಿದ್ದರು.


    ಆ. 7ರಂದು ತಾಲೂಕಿನ ಶಾಗ್ಯ ಬಳಿಯ ಬೂದಿಕರೆ ಅರಣ್ಯ ಪ್ರದೇಶದ ಮೇಕೆದಾಟು ನದಿ ಪಾತ್ರಕ್ಕೆ ಭೇಟಿ ನೀಡಿ ನೀರು ಹರಿವಿನ ಪ್ರಮಾಣವನ್ನು ವೀಕ್ಷಿಸಿದ್ದರು. ಈ ವೇಳೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ ಎಂಬ ಬದ್ಧತೆಯ ತೀರ್ಮಾನವನ್ನು ಪ್ರಕಟಿಸಿದ್ದರು. ಅಲ್ಲದೆ, ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡುವುದು ನನ್ನ ಪ್ರಕಾರ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ, ಹೊಗೇನಕಲ್ ಫಾಲ್ಸ್‌ಗೆ ಭೇಟಿ ಅಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts