More

    ಮಳೆ, ಕೊಳೆಗೆ ಇಳುವರಿ ಕುಂಠಿತ

    ಸಿದ್ದಾಪುರ: ಕೆಂಪಡಕಗೆ ಪ್ರಸಕ್ತ ವರ್ಷ ಉತ್ತಮ ದರ ಬಂದರೂ ಬೆಳೆಗಾರರ ಮೊಗದಲ್ಲಿ ನಗು ಇಲ್ಲದಂತಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಅತಿಯಾದ ಮಳೆ, ಕೊಳೆರೋಗದಿಂದ ಅಡಕೆ ಬೆಳೆ ಕಡಿಮೆಯಾಗಿದೆ. ಇದ್ದ ಬೆಳೆಯನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಲಾಗದೇ ಚಾಲಿ ಮಾಡುವ ಸ್ಥಿತಿ ಬೆಳೆಗಾರರದ್ದಾಗಿದೆ.

    ಮಳೆ, ಕೊಳೆರೋಗ, ಪ್ರವಾಹದಿಂದ ಪ್ರಸಕ್ತ ವರ್ಷ ಶೇ. 60ರಷ್ಟು ಬೆಳೆ ಕಡಿಮೆಯಾಗಿದೆ ಎನ್ನುತ್ತಾರೆ ಬೆಳೆಗಾರರು. ಇನ್ನು ಬೆಳೆ ವಿಮೆ ಪರಿಹಾರವೂ ರೈತರ ಖಾತೆಗೆ ಜಮಾ ಆಗದಿರುವುದರಿಂದ ಕೆಂಪಡಕೆ ದರದಲ್ಲಿ ಹೆಚ್ಚಾದರೂ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಈಗ ಎಲ್ಲ ಕಡೆಗಳಲ್ಲಿ ಒಮ್ಮೆಲೆ ಅಡಕೆ ಕೊಯ್ಲು ಪ್ರಾರಂಭವಾಗಿದ್ದರಿಂದ ಕೂಲಿಕಾರರ ಸಮಸ್ಯೆ ಹೆಚ್ಚಾಗಿದೆ. ಹೇಗೋ ಕೊನೆ ಕೊಯ್ಲು ಮಾಡಿದರೂ ಅದನ್ನು ಸಂಸ್ಕರಿಸುವ ಕಾರ್ಯ ಹಿಂದಕ್ಕೆ ಬೀಳುತ್ತಿದೆ.

    ಸಿದ್ದಾಪುರ ಮಾರುಕಟ್ಟೆಯಲ್ಲಿ ಕಳೆದ ವರ್ಷ ಈ ದಿನದಲ್ಲಿ ಕೆಂಪಡಕೆ ಪ್ರತಿ ಕ್ವಿಂಟಾಲ್​ಗೆ 29 ಸಾವಿರದಿಂದ 33 ಸಾವಿರ ರೂಪಾಯಿಗಳಷ್ಟಿತ್ತು. ಆದರೆ, ಈ ವರ್ಷ 33 ಸಾವಿರ ರೂ. ಸರಾಸರಿ ನಡೆಯುತ್ತಿದೆ. ಶುಕ್ರವಾರ 35,609 ರೂ.ಗೆ ಮಾರಾಟವಾಗಿದೆ.

    ಪ್ರತಿವರ್ಷ ಮಾರುಕಟ್ಟೆಗೆ ಈ ದಿನದಲ್ಲಿ ಕೆಂಪಡಕೆ ಹೆಚ್ಚು ವ್ಯಾಪಾರಕ್ಕೆ ಬರುತ್ತಿತ್ತು. ಈ ವರ್ಷ ಅಡಕೆ ಪ್ರಮಾಣ ತೀವ್ರ ಕಡಿಮೆಯಾಗಿದ್ದರಿಂದ ನಿತ್ಯ 30 ಚೀಲವೂ ಬರುತ್ತಿಲ್ಲ ಎಂದು ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಾರೆ.

    ದಾಖಲೆ ದರ: ನಾಲ್ಕು ವರ್ಷದಿಂದ 29ರಿಂದ 34 ಸಾವಿರ ರೂ.ವರೆಗೆ ಅಡಕೆ ಮಾರಾಟವಾಗಿತ್ತು. ಈ ವರ್ಷ ದಾಖಲೆಯ ದರ ಇದ್ದರೂ ರೈತರಲ್ಲಿ ಕೆಂಪಡಕೆ ಇಲ್ಲದಿರುವುದರಿಂದ ಚಡಪಡಿಸುವ ಸ್ಥಿತಿ ಉಂಟಾಗಿದೆ.

    ಕೆಂಪಡಕೆಗೆ ಈ ವರ್ಷ ಐವತ್ತು ಸಾವಿರ ರೂ. ಬಂದರೂ ಬೆಳೆಗಾರರಿಗೆ ಸಿಗದಂತಾಗಿದೆ. ಮಳೆ, ಕೊಳೆ ರೋಗದಿಂದ ಅಡಕೆ ಬೆಳೆ ಸಂಪೂರ್ಣ ನಾಶವಾಗಿದೆ. ದಿನಸಿ ವಸ್ತುಗಳ ಬೆಲೆ, ಕೂಲಿಕಾರರ ವೇತನ ಎಲ್ಲವೂ ಹೆಚ್ಚಾಗುತ್ತಿದೆ. ಇದ್ದ ಬೆಳೆಗಾದರೂ ಉತ್ತಮ ದರ ಎಲ್ಲ ಬೆಳೆಗಾರರಿಗೆ ಸಿಗುವಂತಾದರೆ ಮಾತ್ರ ಸಮಾಧಾನ.

    | ಜಯಪ್ರಕಾಶ ಹೆಗಡೆ ಮಾವಿನಗುಂಡಿ, ಅಡಕೆ ಬೆಳೆಗಾರ

    ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿದ್ದರಿಂದ ಹೊರಗಡೆಯಿಂದ ಬರುವ ಅಡಕೆ ಪ್ರಮಾಣ ಕಡಿಮೆಯಾಗಿರುವುದು ಉತ್ತಮ ಬೆಳೆವಣಿಗೆ. ಪಾರಂಪರಿಕವಾಗಿ ಅಡಕೆ ಬೆಳೆಯುತ್ತಿದ್ದ ಬೆಳೆಗಾರರಿಗೆ ಈ ವರ್ಷದ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾಗಿದೆ. 40 ಸಾವಿರ ರೂ.ವರೆಗೂ ಕೆಂಪಡಕೆ ದರ ಆಗುವ ಸಾಧ್ಯತೆ ಇದೆ. ಆದರೆ, ಈಗಿರುವ ದರ ನಿರಂತರವಾಗಿದ್ದರೆ ಉತ್ತಮ.

    | ಆರ್.ಎಂ. ಹೆಗಡೆ ಬಾಳೇಸರ, ಟಿಎಂಎಸ್ ಅಧ್ಯಕ್ಷ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts