More

    ಮಲ್ಟಿ ಲೆವೆಲ್ ಪಾರ್ಕಿಂಗ್ ಯೋಜನೆ

    ಅವಿನ್ ಶೆಟ್ಟಿ ಉಡುಪಿ
    ಉಡುಪಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸಂಚಾರ ದಟ್ಟಣೆ, ಮಾರುಕಟ್ಟೆ ವ್ಯವಸ್ಥೆ ಅಭಿವೃದ್ಧಿ, ಜನರ ಓಡಾಟ ಹೆಚ್ಚಳವಾಗಿದೆ. 10-15 ವರ್ಷಗಳಿಂದ ನಗರದಲ್ಲಿ ವಿಪರೀತ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ. ಜನರ ಒತ್ತಾಸೆಯಂತೆ ನಗರದಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಇನ್ನೂ ನಿರ್ಮಾಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿಲೇನ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ನಗರಸಭೆ ಚಿಂತನೆ ಮಾಡಿದೆ. ಇದಕ್ಕಾಗಿ ಹೀಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಬಳಸಿಕೊಳ್ಳುವ ಬಗ್ಗೆ ಯೋಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಹಾಕುವ ಬಗ್ಗೆ ನಗರಸಭೆ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಇದಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಪಾರ್ಕಿಂಗ್ ವ್ಯವಸ್ಥೆಯೇ ನಗರಸಭೆ, ನಗರ ಪೊಲೀಸ್ ಠಾಣೆ, ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶದಲ್ಲಿರುವ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ ಜಾಗದಲ್ಲಿ ಮಲ್ಟಿಲೇನ್ ಪಾರ್ಕಿಂಗ್ ಮತ್ತು ಕಾಂಪ್ಲೆಕ್ಸ್ ನಿರ್ಮಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದರೂ, ಅವರು ವರ್ಗಾವಣೆ ಆದ ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗಿನ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತೆ ನಗರಸಭೆ ವ್ಯಾಪ್ತಿಯಲ್ಲಿ ಮಲ್ಟಿಲೇನ್ ಪಾರ್ಕಿಂಗ್ ಮಾಡುವ ಬಗ್ಗೆ ಮತ್ತೆ ಚಿಂತನೆ ನಡೆಸಿದ್ದಾರೆ.

    ನಗರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ : ಒಂದೆಡೆ ಉಡುಪಿ ನಗರ ಬೆಳೆಯುತ್ತಿದೆ, ಸಂಚಾರ ದಟ್ಟಣೆ ಹೆಚ್ಚುತ್ತಿದೆ, ವಾಹನಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ಸಮಸ್ಯೆಯೂ ಹೆಚ್ಚಾಗುತ್ತಿದೆ. ಉಡುಪಿ ನಗರಕ್ಕೆ ಆಗಮಿಸುವ ದೂರದ ಊರಿನ ಪ್ರಯಾಣಿಕರು, ಪ್ರವಾಸಿಗರು, ಹೊರ ಊರಿನಿಂದ ಶಾಪಿಂಗ್, ಉದ್ಯೋಗ ನಿಮಿತ್ತ ಆಗಮಿಸುವವರು, ವಾಹನ ಪಾರ್ಕಿಂಗ್ ಮಾಡಿ ದೂರದ ಊರಿಗೆ ತೆರಳುವವರಿಗೆ ವಾಹನಗಳ ಪಾರ್ಕಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ನಗರಸಭೆ, ಸಂಚಾರಿ ಪೊಲೀಸರು ನಿಗಧಿಪಡಿಸಿದ ಮುಖ್ಯರಸ್ತೆಗಳ ಬದಿಯಲ್ಲೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೋರ್ಟ್ ರಸ್ತೆ, ಕೆಎಂ ಮಾರ್ಗದಲ್ಲಿ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕದಲ್ಲಿ ಮುಖ್ಯ ರಸ್ತೆಗಳ ಬದಿ ಪಾರ್ಕಿಂಗ್ ಮಾಡುವುದರಿಂದ ವಾಹನ ಸಂಚಾರಕ್ಕೆ, ಪಾದಚಾರಿಗಳ ಓಡಾಟಕ್ಕೂ ಕಿರಿಕಿರಿ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಜನರಿಗೂ ಈಗ ಭಯ ಶುರು ಆಗಿದೆ. ಬೆಳಗ್ಗೆ ಪಾರ್ಕಿಂಗ್ ಮಾಡಿ ಹೋಗಿ ಸಾಯಂಕಾಲ ನೋಡುವಷ್ಟರಲ್ಲಿ ಕೆಲವು ದ್ವಿಚಕ್ರ ವಾಹನಗಳು ಕಳವು ಕೂಡ ಆಗಿದೆ.

    25ರಿಂದ 30 ಕೋಟಿ ರೂ. ವೆಚ್ಚ ಅಂದಾಜು: ನಗರದ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಮಲ್ಟಿಲೇನ್ ಪಾರ್ಕಿಂಗ್ ವ್ಯವಸ್ಥೆ ಸೂಕ್ತ ಯೋಜನೆ ಎಂದು ಸಾರ್ವಜನಿಕರ ಅಭಿಪ್ರಾಯ. ನಗರದ ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ 61 ಸೆಂಟ್ಸ್ ಜಾಗದಿಂದ ಕೂಡಿದ್ದು, ಬನ್ನಂಜೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಇಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಮಲ್ಟಿ ಲೆವೆಲ್ ಪಾರ್ಕಿಂಗ್ ಆಗಿಸುವ ಬಗ್ಗೆ ಯೋಚಿಸಲಾಗಿದೆ. ನಗರದ ಕೇಂದ್ರ ಭಾಗ ಇದಾಗಿರುವುದರಿಂದ ವಾಹನ ಹೊಂದಿರುವ ಜನರಿಗೂ ಇದು ಅನುಕೂಲ. ಮಲ್ಟಿಲೇನ್ ಪಾರ್ಕಿಂಗ್ ಮತ್ತು ಕಾಂಪ್ಲೆಕ್ಸ್ ನಿರ್ಮಾಣಕ್ಕೆ 25ರಿಂದ 30 ಕೋಟಿ ರೂ. ವೆಚ್ಚವಾಗುವ ಬಗ್ಗೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಇದರಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ 5ರಿಂದ 10 ಕೋಟಿ ರೂ. ಆಗಬಹುದು ಎನ್ನುತ್ತಾರೆ ಅಧಿಕಾರಿಗಳು.

    ನಗರದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಈಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಟ್ಟಡದ ಎಬಿಲಿಟಿ ಪರೀಕ್ಷಿಸಿ ವರದಿ ನೀಡಲು ಲೋಕೋಪಯೋಗಿ ಇಲಾಖೆಗೆ ನಗರಸಭೆಯಿಂದ ಪ್ರಸ್ತಾವನೆಯೊಂದನ್ನು ಕಳಿಸಿದ್ದೇವೆ.
    ಆನಂದ್ ಸಿ.ಕಲ್ಲೋಳಿಕರ್, ಪೌರಾಯುಕ್ತ, ಉಡುಪಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts