More

    ಮನೆ ಮತದಾನಕ್ಕೆ ಹಿರಿಯ ನಾಗರಿಕರ ಸ್ಪಂದನೆ * ಶೇ.76.72 ರಷ್ಟು ವೋಟಿಂಗ್

    ದಾವಣಗೆರೆ: ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಯೋಗಕ್ಕೆ ಜಿಲ್ಲೆಯ ಅನೇಕ ಹಿರಿಯ ನಾಗರಿಕರು, ವಿಕಲಾಂಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಒಂದೇ ದಿನದಲ್ಲಿ ಶೇ.76.72ರಷ್ಟು ಮತದಾನವಾಗಿದೆ.
    ಈ ಮೊದಲೇ 12-ಡಿ ಅರ್ಜಿ ಸಲ್ಲಿಸಿ ಮನೆಯಿಂದಲೇ ಮತದಾನ ಮಾಡುವ ಬಗ್ಗೆ ಸಮ್ಮತಿಸಿದ್ದ ಹಿರಿಯ ನಾಗರಿಕರ ಮನೆಗಳಿಗೆ ಶನಿವಾರ ತೆರಳಿದ ಅಧಿಕಾರಿ-ಸಿಬ್ಬಂದಿ, ಅಲ್ಲಿಯೇ ಗೌಪ್ಯ ಮತದಾನ ಪ್ರಕ್ರಿಯೆ ನಡೆಸಿದರು. ಆಯಾ ಕುಟುಂಬ ಸದಸ್ಯರು ಮತದಾನಕ್ಕೆ ಸಹಕಾರ ನೀಡಿದರು.
    ಮತದಾನ ಅಧಿಕಾರಿ, ಸೂಕ್ಷ್ಮ ಪರಿವೀಕ್ಷಕ, ಮತಗಟ್ಟೆ ಮಟ್ಟದ ಅಧಿಕಾರಿ, ಒಬ್ಬ ಪೊಲೀಸ್ ಸಿಬ್ಬಂದಿ, ಗ್ರೂಪ್ ಡಿ ಸಿಬ್ಬಂದಿ, ಒಬ್ಬ ವೀಡಿಯೋಗ್ರಾಫರ್, ಸೆಕ್ಟರ್ ಅಧಿಕಾರಿ, ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕ ಇತ್ಯಾದಿ ಜನರ ತಂಡ ಪ್ರತಿ ಮನೆ ಮನೆಗೆ ತೆರಳಿ, ಸುಮಾರು 10 ನಿಮಿಷದ ಅವಧಿಯಲ್ಲಿ ಮತ ಹಾಕಿಸಿಕೊಳ್ಳುತ್ತಿದ್ದುದು ಕಂಡುಬಂತು.
    ಬ್ಯಾಲೆಟ್ ಮತಪತ್ರಕ್ಕೆ ಮತದಾರರು ಲೇಖನಿ ಮೂಲಕ ಗೌಪ್ಯವಾಗಿ ಗುರುತು ಮಾಡಿದ ಬಳಿಕ ಅದನ್ನು ಸಣ್ಣ ಕವರ್‌ನಲ್ಲಿ ಇರಿಸಲಾಗುತ್ತದೆ. ಅದರೊಂದಿಗೆ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ 13ಎ ನಮೂನೆ ಪ್ರತಿಯನ್ನೂ ಲಕೋಟೆಯೊಂದರಲ್ಲಿ ಹಾಕಿ ಸೀಲ್ ಮಾಡಲಾಗುತ್ತದೆ. ಅದನ್ನು ಅಧಿಕಾರಿಗಳ ಸಮ್ಮುಖದಲ್ಲಿ ಮತ ಪೆಟ್ಟಿಗೆಗೆ ಹಾಕಿಸುವ ಪ್ರಕ್ರಿಯೆ ನಡೆಯಿತು.
    ಓಡಾಡಲು ಆಗದ ಅಶಕ್ತರು, ಕಾಯಿಲೆಯಿಂದ ಹಾಸಿಗೆ ಹಿಡಿದವರು, ಪೋಲಿಯೋಪೀಡಿತರು, ಶಸ್ತ್ರಚಿಕಿತ್ಸೆಗೆ ಒಳಗಾದವರು, ದೈಹಿಕ ವಿಕಲಾಂಗರು ಮನೆಯಿಂದಲೇ ಹಕ್ಕು ಚಲಾಯಿಸಿದ ಖುಷಿಯ ಮೂಡ್‌ನಲ್ಲಿದ್ದರು. ನಾವು ಹೋದಲ್ಲೆಲ್ಲ ‘ನಮಗೆ ಮತಗಟ್ಟೆಗೆ ಬರಲು ಆಗ್ತಿರಲಿಲ್ಲ, ನಿಮಗೆ ಪುಣ್ಯ ಬರಲಿ’ ಎಂದು ನಮಗೆ ಹರಸುತ್ತಿದ್ದರು ಎಂದು ಅಧಿಕಾರಿ-ಸಿಬ್ಬಂದಿ ಹೇಳಿಕೊಂಡರು.
    ಮನೆ ಮನೆ ಮತದಾನದಿಂದ ಹೆಚ್ಚು ಶ್ರಮ, ಹೆಚ್ಚಿನ ವೆಚ್ಚವಾಗಲಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಮತಗಟ್ಟೆ ಅಧಿಕಾರಿಯೊಬ್ಬರು ತಿಳಿಸಿದರು. ಜಿಲ್ಲೆಯ ಏಳೂ ಕ್ಷೇತ್ರಗಳಿಂದ 87 ತಂಡಗಳಲ್ಲಿ ನಿಯೋಜಿತ ಅಧಿಕಾರಿ-ಸಿಬ್ಬಂದಿ, ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಚುನಾವಣಾ ಕಾರ್ಯ ನಿರ್ವಹಿಸಿದರು. ಎವಿಎಸ್‌ಸಿ ವರ್ಗದಲ್ಲಿ ಗುರುತಿಸಲ್ಪಟ್ಟ 80 ವರ್ಷ ಮೇಲ್ಪಟ್ಟ ಮತದಾರರಲ್ಲಿ 1870, ಎವಿಪಿಡಿ ವರ್ಗದಲ್ಲಿನ ದೈಹಿಕ ವಿಕಲಾಂಗರ ಪೈಕಿ 510 ಮಂದಿ ಅಂಚೆ ಮತಪತ್ರ ಹಾಕಲು ಒಪ್ಪಿಗೆ ನೀಡಿದ್ದರು.
    * ಜಿಲ್ಲಾ ಚುನಾವಣಾಧಿಕಾರಿ ಭೇಟಿ
    ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ದೇವರಾಜ ಅರಸು ಬಡಾವಣೆಯಲ್ಲಿ, ಒಂದು ವರ್ಷದಿಂದ ಹಾಸಿಗೆಯಲ್ಲೇ ಇರುವ 85 ವರ್ಷದ ವೃದ್ಧ ಕೇಶವಮೂರ್ತಿ ಅವರು ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭಾಗಿಯಾಗಿದ್ದರು.
    ಮನೆಯಿಂದಲೇ ಮತದಾನ ಮಾಡಿದ್ದಕ್ಕೆ ಹೇಗೆನ್ನಿಸುತ್ತೆ ಎಂದು ಡಿಸಿ ಕೇಳಿದಾಗ ಕೇಶವಮೂರ್ತಿ ಕೈ ಸಂಜ್ಞೆ ಮಾಡಿದರು. ಪತ್ನಿ ಇದರಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಬಡಾವಣೆಯಲ್ಲಿ 98 ವರ್ಷದ ವೃದ್ಧೆ ಗೌರಮ್ಮ ಐರಣಿ ಶೆಟ್ರು ಮತಪತ್ರದ ಲಕೋಟೆಯನ್ನು ಮತ ಪೆಟ್ಟಿಗೆಗೆ ಹಾಕಿ ಸಂಭ್ರಮಿಸಿದರು. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ ಎನ್. ರೇಣುಕ ಇದ್ದರು.

    * 1826 ಮಂದಿ ಮತ ಚಲಾವಣೆ
    ಮಾಯಕೊಂಡ ಕ್ಷೇತ್ರದಲ್ಲಿ ಗುರುತಿಸಿದ್ದ 117 ಮತದಾರರ ಪೈಕಿ 112 ಮಂದಿ ಹಕ್ಕು ಚಲಾಯಿಸಿದ್ದಾರೆ. ನಾಲ್ವರು ಮೃತಪಟ್ಟಿದ್ದು, ಒಬ್ಬರ ವಿಳಾಸ ಪತ್ತೆಯಾಗಿಲ್ಲ.
    ಜಗಳೂರು ಕ್ಷೇತ್ರದಲ್ಲಿ ನಿಗದಿಯಾಗಿದ್ದ 236 ಜನರಲ್ಲಿ 223 ಮಂದಿ ಮತದಾನ ಮಾಡಿದ್ದಾರೆ. ಒಂಬತ್ತು ಮಂದಿ ಮೃತರಾಗಿದ್ದಾರೆ. ಉಳಿದ ನಾಲ್ವರಿಗೆ ಮೇ 1ರಂದು ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದೆ.
    ಹೊನ್ನಾಳಿ ಕ್ಷೇತ್ರದಲ್ಲಿ ಗುರುತಿಸಿದ್ದ 846 ಮತದಾರರಲ್ಲಿ 397 ಜನರು ಮತ ಚಲಾವಣೆ ಮಾಡಿದ್ದಾರೆ. ಆರು ಜನ ಮೃತರಾಗಿದ್ದಾರೆ. 24 ಮಂದಿ ನೀಡಿದ ವಿಳಾಸದಲ್ಲಿಲ್ಲ. ಉಳಿದ ಮತದಾರರಿಂದ ಭಾನುವಾರ ಮತ ಹಾಕಿಸುವ ಕಾರ್ಯ ನಡೆಯಲಿದೆ.
    ಚನ್ನಗಿರಿ ಕ್ಷೇತ್ರದಲ್ಲಿ 243 ಮತದಾರರಿದ್ದು, 238 ಮಂದಿ ಮತ ಚಲಾಯಿಸಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರ ಹೆಸರು ಎರಡು ಬಾರಿ ನೋಂದಣಿಯಾಗಿದೆ.
    ದಾವಣಗೆರೆ ಉತ್ತರದಲ್ಲಿ 466 ಮತದಾರರನ್ನು ಗುರುತಿಸಲಾಗಿತ್ತು. ಈ ಪೈಕಿ 408 ಮಂದಿ ಮತದಾನ ಮಾಡಿದ್ದಾರೆ. 15 ಜನ ಮೃತರಾಗಿದ್ದಾರೆ. 43 ಜನರ ಮತದಾನ ಬಾಕಿ ಇದೆ.
    ದಾವಣಗೆರೆ ದಕ್ಷಿಣದಲ್ಲಿ 233 ಮತದಾರರಿದ್ದು 214 ಮಂದಿ ಮತ ಹಾಕಿದ್ದಾರೆ. ಮೂವರು ಮೃತಪಟ್ಟಿದ್ದು, ಐವರು ಆಸ್ಪತ್ರೆಗೆ ದಾಖಲಾತಿ ಮತ್ತಿತರೆ ಕಾರಣಾಂತರದಿಂದ ಮತದಾನ ಮಾಡಲು ನಿರಾಕರಿಸಿದ್ದಾರೆ. 11 ಮಂದಿ ಮತದಾರರನ್ನು ಇನ್ನೊಂದು ಬಾರಿಗೆ ಸಂಪರ್ಕಿಸಲಾಗುತ್ತಿದೆ.
    ಹರಿಹರ ಕ್ಷೇತ್ರದಲ್ಲಿ 239 ಮತದಾರರ ಪೈಕಿ 234 ಜನ ಮತ ಚಲಾಯಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts