More

    ಮತ ಎಣಿಕೆಗೆ ಸಕಲ ಸಿದ್ಧತೆ

    ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಮತ ಎಣಿಕೆ ಕಾರ್ಯ ನ. 10ರಂದು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದ್ದು, ಎಲ್ಲ ರೀತಿಯ ಭದ್ರತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

    ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಮತ ಎಣಿಕೆ ಸಿದ್ಧತೆ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 28ರಂದು ನಡೆದ ಮತದಾನದಲ್ಲಿ ಒಟ್ಟು 52,068 (1 ಅಂಚೆ ಮತ ಸೇರಿ) ಮತಗಳು ಚಲಾವಣೆಯಾಗಿವೆ. ಹೀಗಾಗಿ ಒಟ್ಟು 2 ಕೊಠಡಿಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

    ಪ್ರಸ್ತುತ ಮತ ಎಣಿಕೆಗೆ 2 ಕೊಠಡಿಗಳನ್ನು ನಿಗದಿಗೊಳಿಸಿದ್ದು, 14 ಟೇಬಲ್​ಗಳಲ್ಲಿ ಮತ ಎಣಿಕೆ ನಡೆಯಲಿದೆ. ಎಣಿಕೆ ಕಾರ್ಯಕ್ಕೆ ಓರ್ವ ಚುನಾವಣಾಧಿಕಾರಿ, 4 ಜನ ಸಹಾಯಕ ಚುನಾವಣಾಧಿಕಾರಿ ಮತ್ತು ಹೆಚ್ಚುವರಿಯಾಗಿ 4 ಜನ ಮತ ಎಣಿಕೆ ಚುನಾವಣಾಧಿಕಾರಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಒಟ್ಟು 64 ಸಿಬ್ಬಂದಿ ನೆಮಿಸಲಾಗಿದೆ. ಮತ ಎಣಿಕೆ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಲು 2 ಕೊಠಡಿಗಳಲ್ಲಿ ಸೇರಿ 10 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು.

    ಕರೊನಾ ಹಾವಳಿ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಎಲ್ಲ ರೀತಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸಿದವರಿಗೆ ಮಾತ್ರ ಕೇಂದ್ರದಲ್ಲಿ ಪ್ರವೇಶ ನೀಡಲಾಗುತ್ತಿದೆ. ಪ್ರವೇಶ ಪಡೆಯುವವರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದಲ್ಲೇ ಒಂದು ಹೆಲ್ತ್ ಸೆಂಟರ್ ಪ್ರಾರಂಭಿಸಿದ್ದು ವೈದ್ಯರು, ನರ್ಸ್ ನಿಯೋಜನೆ ಮಾಡಲಾಗಿದೆ ಎಂದರು.

    ಸರ್ಕಾರದ ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಹಾಯಕ ಚುನಾವಣಾಧಿಕಾರಿ ನಿತೇಶ ಪಾಟೀಲ, ಕಾರವಾರ ಜಿಲ್ಲಾಧಿಕಾರಿ ಹರೀಶಕುಮಾರ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹಾವೇರಿ ಅಪರ ಜಿಲ್ಲಾಧಿಕಾರಿ ಪಿ. ಯೋಗೇಶ್ವರ, ಧಾರವಾಡ ತಹಸೀಲ್ದಾರ ಡಾ. ಸಂತೋಷ ಬಿರಾದಾರ, ಡಿಎಚ್​ಒ ಡಾ. ಯಶವಂತ ಮದೀನಕರ, ಇತರರು ಇದ್ದರು.

    ದಾಖಲಾದ ಪ್ರಕರಣಗಳು: ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ವಿವಿಧ ಪ್ರಕಾರಗಳ ಒಟ್ಟು 25 ಪ್ರಕರಣಗಳು ದಾಖಲಾಗಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಧಾರವಾಡ, ಗದಗ, ಹಾವೇರಿ ಜಿಲ್ಲೆ ಸೇರಿ 7 ಪ್ರಕರಣಗಳು ದಾಖಲಾಗಿದ್ದು, 3 ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಾಗಿದೆ. ಚುನಾವಣಾ ಅಪರಾಧ ಕುರಿತು ಧಾರವಾಡ, ಹಾವೇರಿ ಹಾಗೂ ಪೂರ್ಣ ಮತಕ್ಷೇತ್ರ ವ್ಯಾಪ್ತಿ ಸೇರಿ 5 ಪ್ರಕರಣಗಳು ದಾಖಲಾಗಿದ್ದು, 3 ಪ್ರಕರಣಗಳ ಎಫ್​ಐಆರ್ ದಾಖಲಾಗಿದೆ. ಇನ್ನು ಎಂಸಿಎಂಸಿ ಉಲ್ಲಂಘನೆ ಕುರಿತು ದಾಖಲಾದ 13 ಪಕ್ರಣಗಳ ಪೈಕಿ 5 ಪ್ರಕರಣಗಳಲ್ಲಿ ಎಫ್​ಐಆರ್ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

    ಪೊಲೀಸ್ ಭದ್ರತೆ: ಮತ ಎಣಿಕೆ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 4 ಸಹಾಯಕ ಪೊಲೀಸ್ ಆಯುಕ್ತರು, 12 ಪಿಐ, 16 ಪಿಎಸ್​ಐ, 31 ಎಎಸ್​ಐ, 71 ಎಚ್​ಸಿ, 126 ಪಿಸಿ ಹಾಗೂ 14 ಡಬ್ಲ್ಯೂಪಿಸಿ ಸೇರಿ ಒಟ್ಟು 274 ಜನರನ್ನು ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ಪಿ. ಕೃಷ್ಣಕಾಂತ ತಿಳಿಸಿದರು.

    ಶುಷ್ಕ ದಿನ: ಮತ ಎಣಿಕೆ ಹಿನ್ನೆಲೆಯಲ್ಲಿ ನ. 10ರ ಬೆಳಗ್ಗೆ 8 ಗಂಟೆಯಿಂದ ನ. 11ರ ಬೆಳಗ್ಗೆ 8ರವರೆಗೆ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆ ನಿಷೇಧಿಸಿದ್ದು, ಈ ದಿನವನ್ನು ಶುಷ್ಕ ದಿನವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts