More

    ಮತ್ತೀಕೆರೆ ತಾಲೂಕು ಪಂಚಾಯಿತಿ ಕ್ಷೇತ್ರ ಉಪಚುನಾವಣೆಗೆ ಒಮ್ಮತದ ಅಭ್ಯರ್ಥಿ: ಪ್ರಮುಖ ಪಕ್ಷಗಳ ಸಹಮತ

    ಚನ್ನಪಟ್ಟಣ: ಮತ್ತೀಕೆರೆ ತಾಪಂ ಕ್ಷೇತ್ರದ ಉಪಚುನಾವಣೆಗೆ ೆ.9ರಂದು ದಿನಾಂಕ ನಿಗದಿಯಾಗಿದೆ. 2018ರ ಡಿ.5ರಂದು ಯೋಗೀಶ್ ನಿಧನದಿಂದ ಸ್ಥಾನ ತೆರವಾಗಿದ್ದು, 11 ತಿಂಗಳ ಅವಧಿಗೆ ಜಿದ್ದಾಜಿದ್ದಿನ ಚುನಾವಣೆ ಬೇಡ ಎಂದು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮೂರು ಪಕ್ಷಗಳು ಮುಂದಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್, ಕ್ಷೇತ್ರದ ಪ್ರಮುಖರ ಸಭೆ ನಡೆಸಿದೆ. ಈ ಮಧ್ಯೆ ಮೂರು ಪಕ್ಷಗಳಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

    ಯೋಗೀಶ್ ಪತ್ನಿಗೆ ಪಟ್ಟ?: ಯೋಗೀಶ್ ಪತ್ನಿ ಲೀಲಾವತಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಕೆಲವರು ಅಭಿಪ್ರಾಯಪಟ್ಟಿದ್ದರೆ, ಯೋಗೀಶ್ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲಾದರೂ ಪತ್ನಿಯನ್ನು ಅವಿರೋಧ ಆಯ್ಕೆ ಮಾಡಬೇಕು ಎಂದು ಕೆಲ ಪ್ರಜ್ಞಾವಂತರು ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಈ ಪ್ರಸ್ತಾವನೆಗೆ ಸಹಮತ ವ್ಯಕ್ತವಾಗಿದ್ದೇ ಆದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲೀಲಾವತಿ ಯೋಗೀಶ್ ನಾಮಪತ್ರ ಸಲ್ಲಿಸಲಿದ್ದಾರೆ. ಜ.25ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು ಜ.28 ಕೊನೇ ದಿನ. ಫೆ.9ರಂದು ಅಗತ್ಯ ಬಿದ್ದಲ್ಲಿ ಚುನಾವಣೆ ನಡೆಯಲಿದ್ದು, ೆ.11ರಂದು ಮತ ಎಣಿಕೆ ನಡೆಯಲಿದೆ.

    ಚುನಾವಣೆಗೆ ಪಕ್ಷಗಳ ನಿರಾಸಕ್ತಿ: 19 ಸದಸ್ಯ ಬಲದ ತಾಪಂನಲ್ಲಿ ಈ ಹಿಂದೆ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು 17 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2 ಕ್ಷೇತ್ರಕ್ಕೆ ಜೆಡಿಎಸ್ ತೃಪ್ತಿ ಪಟ್ಟುಕೊಂಡಿತ್ತು. ಈ ಉಪಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸಿದರೂ ತಾಪಂ ಗದ್ದುಗೆಯಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಇರುವ ಅಲ್ಪಾವಧಿಗೆ ಜಿದ್ದಾಜಿದ್ದಿನ ಚುನಾವಣೆ ಆಸಕ್ತಿ ರಾಜಕೀಯ ಪಕ್ಷಗಳಿಗೆ ಇಲ್ಲವಾಗಿದೆ.

    ಸಿದ್ಧರಾಗಿರುವಂತೆ ಸೂಚನೆ: ಫೆ.9ರಂದು ನಡೆಯಲಿರುವ ಮತ್ತೀಕೆರೆ ತಾಪಂ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಸೋಮವಾರ ನಡೆಸಲಾಯಿತು.

    ಗ್ರಾಮದ ಸಮೀಪ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಸಲಹೆ ಸೂಚನೆ ಪಡೆದುಕೊಂಡರು. ಸಭೆಯಲ್ಲಿದ್ದ ಮುಖಂಡ ರಾದ ಶೆಟ್ಟಿಹಳ್ಳಿ ಪ್ರಮೋದ್, ಚಕ್ಕೆರೆ ಧರ್ಮೇಶ್, ಮತ್ತೀಕೆರೆ ಮಂಜುನಾಥ್ ಪಕ್ಷ ಸೂಚಿಸಿದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದರು.

    ಸಭೆಯಲ್ಲಿ ಮಾತನಾಡಿದ ಮೂವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರಾಗಿದ್ದ ಯೋಗೀಶ್ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿದ್ದು, ಪಕ್ಷ ಸಂಘಟನೆಯ ಉದ್ದೇಶದಿಂದ ಚುನಾವಣೆಗೆ ಪಕ್ಷ ಸಜ್ಜುಗೊಳ್ಳ ಬೇಕಿದೆ. ವರಿಷ್ಠರಾದ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಜತೆ ಮಾತನಾಡಿ ಚುನಾವಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು, ಪಕ್ಷದ ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಶಿವಮಾದು, ಮುದ್ದುಕೃಷ್ಣೇಗೌಡ, ಹಿರಿಯ ಕಾಂಗ್ರೆಸ್ ಮುಖಂಡ ಶರತ್‌ಚಂದ್ರ, ರಾಜಣ್ಣ, ಎಸ್.ಸಿ.ಶೇಖರ್, ಕಾಂಗ್ರೆಸ್ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಹನುಂಮತು ಇನ್ನೂ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಮತ್ತೀಕೆರೆ ತಾಪಂ ಉಪಚುನಾವಣೆ ಬಗ್ಗೆ ಪಕ್ಷ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ನಾಯಕರಾದ ಯೋಗೇಶ್ವರ್ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಅವಿರೋಧ ಆಯ್ಕೆಯ ಪ್ರಸ್ತಾಪವೂ ಇದ್ದು ಇದಕ್ಕೆ ಬೆಂಬಲ ಇದೆ.
    ಆನಂದಸ್ವಾಮಿ ತಾಲೂಕು ಬಿಜೆಪಿ ಅಧ್ಯಕ್ಷ

    ತಾಪಂ ಉಪಚುನಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಒಮ್ಮತದ ಅಭ್ಯರ್ಥಿಯ ಬಗ್ಗೆ ಕೆಲವರು ಪ್ರಸ್ತಾಪಿಸಿದ್ದು, ಈ ಎಲ್ಲ ಬೆಳವಣಿಗೆ ಬಗ್ಗೆ ವರಿಷ್ಠರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುತ್ತೇವೆ.
    ಎಚ್.ಸಿ.ಜಯಮುತ್ತು ತಾಲೂಕು ಜೆಡಿಎಸ್ ಅಧ್ಯಕ್ಷ

    ತಾಪಂ ಉಪಚುನಾವಣೆಗೆ ಪಕ್ಷ ಸಿದ್ಧಗೊಂಡಿದೆ. ಈಗಾಗಲೇ ಸಭೆ ನಡೆಸಿದ್ದು, ಕೆಲವರು ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಒಮ್ಮತದ ಅಭ್ಯರ್ಥಿ ಆಯ್ಕೆ ವಿಚಾರವೂ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.
    ಶಿವಮಾದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts