More

    ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹೇಳಿಕೆ

    ಕುಶಾಲನಗರ: ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಸಿದ್ಧನಾಗಿದ್ದೇನೆ. 2023ಕ್ಕೆ ಹೊಸ ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ. ಈಗಾಗಲೇ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಿದ್ದು, ರಾಜ್ಯದಲ್ಲೆಡೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಹೇಳಿದರು.
    ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಕುಶಾಲನಗರದ ಕಾವೇರಿ ನದಿಯಿಂದ ಜಲಾವೃತವಾಗುವ ಪ್ರದೇಶದಲ್ಲಿ ನದಿತಟದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ತಂತ್ರಜ್ಞರ ಸಲಹೆ ಪಡೆದು ಕಾರ್ಯಗತ ಗೊಳಿಸಲಾಗುವುದು. ಈಗಾಗಲೇ ಕೆಲವು ಖಾಸಗಿ ವ್ಯಕ್ತಿಗಳು ಕೆರೆ ಒತ್ತುವರಿ ಮಾಡಿದ್ದು, ತೆರೆವುಗೊಳಿಸಲು ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರ ಜೊತೆ ಮಾತನಾಡಲಾಗಿದೆ. ಕೆಲವೊಂದು ಕಡೆ ಸರ್ಕಾರದ ವತಿಯಿಂದಲೇ ಒತ್ತುವರಿಯಾಗಿದ್ದು ಸರ್ಕಾರಿ ಉದ್ದೇಶಗಳಿಗಾಗಿ ಬಳಕೆ ಮಾಡಲಾಗಿದೆ. ಅಂತಹುದನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
    ಕುಶಾಲನಗರ ಪುರಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಸರ್ಕಾರ ಜಾತಿ ಆಧಾರದ ಮೇಲೆ ಅಧ್ಯಕ್ಷಗಾದಿಗೆ ಸರ್ಕಾರವೇ ಮೀಸಲಾತಿ ಪ್ರಕಟ ಮಾಡುತ್ತದೆ. ಆ ನಂತರವೇ ಅಧ್ಯಕ್ಷರು ಯಾರಾಗುತ್ತಾರೆ ಎಂದು ನಿರ್ಣಯ ಮಾಡಲಾಗುತ್ತದೆ. ಈಗಾಗಲೇ ಕುಶಾಲನಗರ ಮೇಲ್ದರ್ಜೆಗೇರಿದ್ದರೂ ಸರ್ಕಾರಿ ಆಸ್ಪತ್ರೆಯು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿಯೇ ಮುಂದುವರಿಯುತ್ತಿದೆ. ಅದನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಸಲುವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಮತ್ತು ಅಲ್ಲಿ ಅಗತ್ಯ ವೈದ್ಯರ ನೇಮಕಾತಿ ಮಾಡಲಾಗುವುದು ಹಾಗೂ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
    ಕುಶಾಲನಗರ ತಾಲೂಕ್ಕಾಗಿ ಮೇಲ್ದರ್ಜೆಗೇರಿದ ನಂತರ ಮಿನಿ ವಿಧಾನಸೌಧದ ಮಾದರಿ ತಾಲೂಕು ಆಡಳಿತ ಭವನ ನಿರ್ಮಾಣವಾಗಲಿದೆ. ತಾಲೂಕು ಮಟ್ಟದ ಕಚೇರಿಗಳಾದ ತಾಲೂಕು ಪಂಚಾಯಿತಿ ಕಾರ್ಯಾಲಯ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಕರ್ತವ್ಯ ನಿರ್ವಹಿಸಲಿವೆ. ಈಗಾಗಲೇ ಗುಂಡೂರಾವ್ ಬಡಾವಣೆಯಲ್ಲಿ ತಾಲೂಕು ಆಡಳಿತ ಭವನಕ್ಕೆ ಸ್ಥಳ ನಿಗದಿಪಡಿಸಲಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಪ್ರಮುಖರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
    ದೊಡ್ಡ ದೊಡ್ಡ ನಾಯಕರೊಂದಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶಾಸಕ ಡಾ.ಮಂಥರ್ ಗೌಡ ಅಭಿನಂದನೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ಚಂದ್ರಶೇಖರ್, ಎಚ್.ಕೆ. ಶಿವಶಂಕರ್, ಪ್ರಕಾಶ್, ರಾಜೀವ್, ಗೋವಿಂದಪ್ಪ ಸೇರಿದಂತೆ ಇನ್ನಿತರ ಕಾರ್ಯಕರ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts