More

    ಮಂಗಳೂರಿನಲ್ಲಿ ಕೋಮು ದ್ವೇಷ ನಿಗ್ರಹ ಘಟಕ

    ಮಂಗಳೂರು: ನೈತಿಕ ಪೊಲೀಸ್‌ಗಿರಿ ಸಹಿತ ಕೋಮು ಸೌಹಾರ್ದ ಕದಡುವುದನ್ನು ತಡೆಗಟ್ಟಲು ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ‘ಆ್ಯಂಟಿ ಕಮ್ಯುನಲ್ ವಿಂಗ್’ ರಚಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.


    ಪಶ್ಚಿಮ ವಲಯ ಹಾಗೂ ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


    ಆ್ಯಂಟಿ ಕಮ್ಯುನಲ್ ವಿಂಗ್ ರಚನೆಗೆ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಲಾಗಿದೆ. ಸಮರ್ಥ ಅಧಿಕಾರಿಯನ್ನು ಅವರು ನೇಮಿಸಲಿದ್ದಾರೆ. ಶೀಘ್ರದಲ್ಲೇ ವ್ಯವಸ್ಥಿತವಾಗಿ ಕಾರ್ಯಾಚರಿಸಲಿದೆ. ಈ ಮೂಲಕ ಭಯದ ವಾತಾವರಣ ತಡೆಗಟ್ಟಲು ಪ್ರಯತ್ನಿಸಲಾಗುವುದು. ಅವಶ್ಯ ಇದ್ದರೆ ಹೆಚ್ಚು ಪ್ರಕರಣ ದಾಖಲಾಗುವ ರಾಜ್ಯದ ಇತರ ಕಡೆಗಳಲ್ಲೂ ವಿಂಗ್ ರಚನೆ ಮಾಡಲಾಗುವುದು. ಸೈಬರ್ ಕ್ರೈಂ, ಕ್ರಿಮಿನಲ್ ಚಟುವಟಿಕೆಗಳ ವಿಚಾರವೂ ಇದರಲ್ಲಿ ಇರುತ್ತದೆ ಎಂದರು.


    ಪಶ್ಚಿಮ ವಲಯದ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಪ್ರಗತಿ ಪರಿಶೀಲನೆ ನಡೆಸಿ ಇಲಾಖೆಯ ಸವಾಲುಗಳು, ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೇನೆ. ನಮ್ಮ ಪ್ರಣಾಳಿಕೆಯಲ್ಲಿ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕುವೆಂಪು ಅವರ ಸಾಲು ಉಚ್ಚರಿಸಿದ್ದೆವು. ಅದರಂತೆ ನಮಗೆ ಶಾಂತಿ ಬೇಕು, ಸೌಹಾರ್ದ ಬೇಕು. ಈ ನಿಟ್ಟಿನಲ್ಲಿ ಇಲಾಖೆ ಕರ್ತವ್ಯ ನಿರ್ವಹಿಸಲಿದೆ ಎಂದರು.


    ಡ್ರಗ್ಸ್ ದಂಧೆ ತಡೆಗೆ ವಿಶೇಷ ಕಾರ್ಯಾಚರಣೆ: ಮಂಗಳೂರು ನಗರ ಸೇರಿದಂತೆ ಕರಾವಳಿಯಲ್ಲಿ ಡ್ರಗ್ಸ್ ದಂಧೆ ಅವ್ಯಾಹತವಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಸಂಪೂರ್ಣ ಕಿತ್ತೊಗೆಯಲು ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆ.15ರ ಗಡುವು ನೀಡಲಾಗಿದೆ. ಇಲ್ಲಿ ಯಾವುದೇ ಡ್ರಗ್ಸ್ ಸಿಗಬಾರದು. ಮಾರಾಟ ಮಾಡುವವರು, ಸೇವನೆ ಮಾಡುವವರು, ಪೂರೈಕೆದಾರರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.


    ಪ್ರತಿಜ್ಞೆ ಮಾಡಲು ಮನವಿ: ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೆ ಡ್ರಗ್ಸ್ ಚಟಕ್ಕೆ ಬಲಿಯಾಗಬಾರದು. ದುಶ್ಚಟಕ್ಕೆ ಬಲಿಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಯಾವುದೇ ಕಾರಣಕ್ಕೂ ಕುತೂಹಲಕ್ಕಾಗಿಯೂ ಸೇವನೆ ಮಾಡಬಾರದು. ಸೇವನೆ ಮಾಡುವವರಿಗೆ ತಿಳಿ ಹೇಳಬೇಕು. ಪೊಲೀಸ್ ಅಧಿಕಾರಿಗಳು ಕೂಡ ಶಾಲಾ, ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ. ಈ ಮೂಲಕ ವಿಶ್ವದಲ್ಲೇ ಮಾದರಿ ರಾಜ್ಯವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts